ಮಡಿಕೇರಿಯಲ್ಲಿ ಗ್ರಾಹಕರ ಸೆಳೆದ ಮಾವು, ಹಲಸು ಮೇಳ

KannadaprabhaNewsNetwork | Published : May 25, 2024 12:47 AM

ಸಾರಾಂಶ

ಕೊಡಗು ಜಿಲ್ಲಾ ಹಾಪ್ ಕಾಮ್ಸ್ ಹಾಗೂ ತೋಟಗಾರಿಕಾ ಇಲಾಖೆ ಸಹಯೋಗದಲ್ಲಿ ಹಾಪ್ ಕಾಮ್ಸ್‌ನಲ್ಲಿ ಶುಕ್ರವಾರ ಮಾವು ಮತ್ತು ಹಲಸು ಮೇಳಕ್ಕೆ ಚಾಲನೆ ನೀಡಲಾಯಿತು. ಹತ್ತಾರು ತಳಿಯ ಮಾವುಗಳು ಗ್ರಾಹಕರನ್ನು ಆಕರ್ಷಿಸಿತು.

ವಿಘ್ನೇಶ್‌ ಎಂ. ಭೂತನಕಾಡು

ಕನ್ನಡಪ್ರಭ ವಾರ್ತೆ ಮಡಿಕೇರಿ

ಮಂಜಿನ ನಗರಿ ಮಡಿಕೇರಿಯಲ್ಲಿ ಹಣ್ಣುಗಳ ರಾಜ ಎಂದೇ ಕರೆಯಲಾಗುವ ಮಾವುಗಳ ಘಮ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು. ತಮಗಿಷ್ಟವಾದ ವಿವಿಧ ತಳಿಯ ಮಾವುಗಳನ್ನು ಗ್ರಾಹಕರು ಮುಗಿಬಿದ್ದು ಖರೀದಿಸಿದರು.

ಕೊಡಗು ಜಿಲ್ಲಾ ಹಾಪ್ ಕಾಮ್ಸ್ ಹಾಗೂ ತೋಟಗಾರಿಕಾ ಇಲಾಖೆ ಸಹಯೋಗದಲ್ಲಿ ಹಾಪ್ ಕಾಮ್ಸ್‌ನಲ್ಲಿ ಶುಕ್ರವಾರ ಮಾವು ಮತ್ತು ಹಲಸು ಮೇಳಕ್ಕೆ ಚಾಲನೆ ನೀಡಲಾಯಿತು. ಹತ್ತಾರು ತಳಿಯ ಮಾವುಗಳು ಗ್ರಾಹಕರನ್ನು ಆಕರ್ಷಿಸಿತು.

ಮಾವು ಮೇಳದಲ್ಲಿ ಅಲ್ಫೋನ್ಸಾ, ಮಲಗೋವಾ, ಸಿಂಧೂರಿ, ರಸಪೂರಿ, ತೋತಾಪುರಿ, ಬಾದಾಮಿ, ಮಲ್ಲಿಕಾ, ದಸೇರಿ, ಬೇಗನ್ ಪಲ್ಲಿ, ಕಾಲಪಾಡಿ, ಸಿರಿ, ಸಕ್ಕರೆಗುತ್ತಿ, ಕಾಡುಮಾವು, ಅಮ್ರಪಾಲಿ, ಹಿಮಾಮ್ ಪಸಂದ್ ಸೇರಿದಂತೆ ವಿವಿಧ ಬಗೆಯ ಮಾವಿನ ತಳಿಗಳ ಮಾರಾಟ ನಡೆಯಿತು. ಒಂದು ಕೆ.ಜಿ. ಹಣ್ಣಿಗೆ 50 ರು.ನಿಂದ 300 ರು. ವರೆಗೆ ಮಾರಾಟ ಮಾಡಲಾಯಿತು.

ಮೇಳದಲ್ಲಿ ರಾಮನಗರ, ಕೋಲಾರ ಮತ್ತಿತರ ಜಿಲ್ಲೆಗಳಿಂದ ಮಾವು ಮತ್ತು ಹಲಸು ಹಣ್ಣು ಮಾರಾಟಗಾರರು ಪಾಲ್ಗೊಂಡಿದ್ದರು. ನೈಸರ್ಗಿಕವಾಗಿ ಮಾಗಿಸಿದ ಕಾರ್ಬೈಡ್ ಮುಕ್ತ ಹಣ್ಣುಗಳನ್ನು ರೈತರಿಂದ ನೇರವಾಗಿ ಗ್ರಾಹಕರಿಗೆ ಮಾರಾಟವಾಯಿತು.

ಖಾಸಗಿಯ ನಾಲ್ಕು ನರ್ಸರಿಗಳಿಂದ ಹಲಸು, ಮಾವು, ಸಪೋಟ, ನಿಂಬೆ, ಸೀಬೆ, ಲಿಚ್ಚಿ, ರಾಂಬೂಟಾನ್ ಸೇರಿದಂತೆ ವಿವಿಧ ವಿದೇಶಿ ತಳಿಯ ಹಣ್ಣಿನ ಗಿಡಗಳನ್ನು ಮಾರಾಟಕ್ಕೆ ಇಡಲಾಗಿತ್ತು.

* ಬಗೆ ಬಗೆಯ ಹಲಸು ಇಲ್ಲ!:

ಮಾವಿನೊಂದಿಗೆ ನಡೆದ ಹಲಸು ಮೇಳದಲ್ಲಿ ಕೇವಲ ಎರಡೇ ಸ್ಟಾಲ್‌ಗಳು ಮಾತ್ರ ಇತ್ತು. ಅದೂ ಕೂಡ ಸ್ಥಳೀಯ ತಳಿಯನ್ನು ಮಾತ್ರ ಮಾರಾಟಕ್ಕೆ ಇಡಲಾಗಿತ್ತು. ಹಾಪ್ ಕಾಮ್ಸ್ ಮಳಿಗೆಯಲ್ಲಿ ಸ್ಥಳೀಯ ಹಲಸಿಗೆ ಕೆ.ಜಿ 30 ರು.ನಂತೆ ಮಾರಾಟ ಮಾಡಲಾಯಿತು. ಕನಕಪುರದ ವ್ಯಾಪಾರಿಯೊಬ್ಬರು ಕೆ.ಜಿಗೆ 50 ರು.ನಂತೆ ಮಾರಾಟ ಮಾಡಿದರು. ನಾಟಿ ತಳಿಯ ಹಲಸು ಮಾತ್ರ ಕಂಡುಬಂತು. ಹಲಸು ಮೇಳದಲ್ಲಿ ವಿವಿಧ ಬಗೆಯ ತಳಿಯನ್ನು ಇಡದಿದ್ದ ಕಾರಣ ಆಗಮಿಸಿದ ಜನರು ನಿರಾಶೆಗೊಳಗಾದರು.

ಉಪ್ಪಿನಂಗಡಿಯ ಕೈಲಾರು ನೈಸರ್ಗಿಕ ಐಸ್ಕ್ರೀಂ ಮಳಿಗೆ ವಿಶೇಷ ಗಮನ ಸೆಳೆಯಿತು. ಗಾಂಧಾರಿ ಮೆಣಸು, ಹಲಸಿನ ಹಣ್ಣು, ಅಡಕೆ, ಬೊಂಡ, ಮಾವು ಸೇರಿದಂತೆ ಚಾಕೊಲೇಟ್ ಐಸ್ಕ್ರೀಂ ವಿಶೇಷವಾಗಿತ್ತು.

ಮೇಳದಲ್ಲಿ ಕೊಡಗಿನ ಕಾಡು ಮಾವಿಗೆ ಹೆಚ್ಚಿನ ಬೇಡಿಕೆ ಕಂಡುಬಂತು. ಜಿಲ್ಲೆಯಲ್ಲಿ ಕಾಡು ಮಾವಿನಿಂದ ವಿವಿಧ ಖಾದ್ಯಗಳನ್ನು ಮಾಡುತ್ತಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಕಾಡು ಮಾವು ಕೂಡ ಕಡಿಮೆಯಾಗುತ್ತಿದೆ.

ಮೇಳದಲ್ಲಿ ಕೊಡಗಿನ ಬಟರ್ ಫ್ರೂಟ್ ಅನ್ನು ಕೂಡ ಪ್ರದರ್ಶನ ಮತ್ತು ಮಾರಾಟ ಮಾಡಲಾಗಿತ್ತು. ಕೆ.ಜಿಗೆ 150 ರು.ನಂತೆ ಮಾರಾಟವಾಯಿತು.

-----ತೀವ್ರ ಬಿಸಿಲಿನ ಹಿನ್ನೆಲೆಯಲ್ಲಿ ಈ ಬಾರಿ ಫಸಲು ಕಡಿಮೆಯಾಗಿದೆ. 10 ಎಕರೆಯಲ್ಲಿ ಮಾವು ಕೃಷಿ ಮಾಡಿದ್ದು, 400 ಮರಗಳಿವೆ. 40 ಟನ್ ಇಳುವರಿ ನಿರೀಕ್ಷೆ ಇತ್ತು. ಆದರೆ ನೀರಿನ ಕೊರತೆಯಿಂದ ಟ್ಯಾಂಕರ್ ಮೂಲಕ ನೀರು ಹರಿಸಿ ಕೆಲವೇ ಟನ್‌ಗಳಷ್ಟು ಮಾತ್ರ ಫಸಲು ಉಳಿಸಿಕೊಂಡಿದ್ದೇವೆ.

। ಮಂಜು, ಮಾವು ಕೃಷಿಕ ಕನಕಪುರ

----------ಕಳೆದ ಎರಡು ವರ್ಷದಿಂದ ಮಾವು ಮೇಳ ಆಯೋಜಿಸಿದ್ದೇವೆ. ರೈತರಿಂದ ನೇರವಾಗಿ ಗ್ರಾಹಕರಿಗೆ ಹಣ್ಣು ವಿತರಿಸುವ ಕಾರ್ಯಕ್ರಮ ಮಾಡಲಾಗಿದೆ. ನೈಸರ್ಗಿಕವಾಗಿ ಹಣ್ಣಾದ ಮಾವುಗಳ ಮಾರಾಟ ನಡೆಯುತ್ತಿದೆ. ರಾಸಾಯನಿಕ ಮುಕ್ತ ಹಣ್ಣುಗಳಾಗಿವೆ. ನಮ್ಮ ನಿರೀಕ್ಷೆಗೂ ಮೀರಿ ಹಣ್ಣು ಮಾರಾಟವಾಗಲಿದೆ.

। ರಮೇಶ್ ಚಂಗಪ್ಪ, ಅಧ್ಯಕ್ಷ ಕೊಡಗು ಜಿಲ್ಲಾ ಹಾಪ್ ಕಾಮ್ಸ್

Share this article