ಯಲ್ಲಾಪುರ: ಮಳೆಗಾಲ ಆರಂಭದ ಪ್ರಸ್ತುತ ಸನ್ನಿವೇಶದಲ್ಲಿ ಕಲುಷಿತ ನೀರಿನಿಂದ ಹರಡುವ ರೋಗಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆಯೆಂದು ತಾಲೂಕು ದಂಡಾಧಿಕಾರಿ ತನುಜಾ ಸವದತ್ತಿ ತಿಳಿಸಿದರು.
ಮೇ ೨೪ರಂದು ಪಟ್ಟಣದ ಆಡಳಿತ ಸೌಧದ ಕಚೇರಿಯಲ್ಲಿ ಸಾಂಕ್ರಾಮಿಕ ಕಾಯಿಲೆಗಳ ನಿಯಂತ್ರಣದ ಕುರಿತು ಏರ್ಪಡಿಸಿದ್ದ ಆರೋಗ್ಯ ಇಲಾಖೆ ಮತ್ತು ಇತರ ಇಲಾಖೆಗಳ ತಾಲೂಕು ಮಟ್ಟದ ಸಮನ್ವಯ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು.ಗ್ರಾಪಂ ಮತ್ತು ಪಪಂ ಶುದ್ಧ ಕುಡಿಯುವ ನೀರು ಮತ್ತು ಸ್ವಚ್ಛತೆಯ ಬಗೆಗೆ ಹೆಚ್ಚಿನ ಗಮನ ನೀಡಬೇಕು. ಕೀಟಗಳಿಂದ ಹರಡುವ ಡೆಂಘೀ, ಚಿಕೂನ್‌ಗುನ್ಯ, ಮಲೇರಿಯಾ, ಆನೇಕಾಲು ರೋಗ, ಮೆದುಳು ಜ್ವರ, ಇವುಗಳ ಬಗ್ಗೆ ಕ್ಷೇತ್ರಮಟ್ಟದಲ್ಲಿ ಸಾರ್ವಜನಿಕರಿಗೆ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮಾಹಿತಿ ನೀಡಬೇಕೆಂದು ಸೂಚಿಸಿದರು.
ಸಾಂಕ್ರಾಮಿಕ ಕಾಯಿಲೆಗಳ ನಿಯಂತ್ರಣಕ್ಕೆ ಸಂಬಂಧಿಸಿ ತಾಲೂಕು ಆರೋಗ್ಯಾಧಿಕಾರಿ ಡಾ. ನರೇಂದ್ರ ಪವಾರ ವಿವಿಧ ಇಲಾಖೆಗಳ ಜವಾಬ್ದಾರಿಯ ಬಗ್ಗೆ ವಿವರಿಸಿದರು.ಇದೇ ಸಂದರ್ಭದಲ್ಲಿ ನಡೆದ ಲಸಿಕಾ ಕಾರ್ಯಪಡೆಯ ಸಭೆಯಲ್ಲಿ ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ನಟರಾಜ ಮಾತನಾಡಿ, ಯಾವುದೇ ಮಗು ಲಸಿಕೆಯಿಂದ ವಂಚಿತವಾಗದಂತೆ ನಿಗಾ ವಹಿಸಲು ತಿಳಿಸಿದರು. ಲಸಿಕೆಯಿಂದ ತಡೆಗಟ್ಟಬಹುದಾದ ರೋಗಗಳಲ್ಲಿ ದಡಾರವೂ ಒಂದಾಗಿದ್ದು, ದಡಾರ ನಿರ್ಮೂಲನೆಗೆ ಗುರಿ ಹಾಕಿಕೊಳ್ಳಲಾಗಿದೆ ಎಂದರು.
ತಾಲೂಕು ತಂಬಾಕು ತನಿಖಾ ದಳದ ಸದಸ್ಯರ ಸಭೆಯನ್ನೂ ಜರುಗಿಸಲಾಯಿತು. ಎಲ್ಲ ಕಚೇರಿಗಳಲ್ಲೂ ತಂಬಾಕು ಮುಕ್ತ ಕಚೇರಿ ಎನ್ನುವ ನಾಮಫಲಕ ಹಾಕಲು ನಿರ್ಣಯಿಸಲಾಯಿತು. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಮಹೇಶ ತಾಳೀಕೋಟಿ ಸ್ವಾಗತಿಸಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಟಿ. ಭಟ್ಟ ವಂದಿಸಿದರು. ಬಿಪಿಎಂ ಎಸ್.ಎಸ್. ಪಾಟೀಲ ಮತ್ತಿತರ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.