ಕನ್ನಡಪ್ರಭ ವಾರ್ತೆ ಹಾಸನ
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಶಕ್ತಿದೇವತೆ ದರ್ಶನಕ್ಕೆ ಭಕ್ತರ ದಂಡು ಹರಿದುಬರುತಿದ್ದು, ಭಾನುವಾರ ಸಾವಿರಾರು ಭಕ್ತರು ಹಾಸನಾಂಬೆ ದೇವಿ ದರ್ಶನ ಪಡೆದರು.ಹಾಸನಾಂಬೆ ದೇವಿ ಸಾರ್ವನಿಕರ ದರ್ಶನಕ್ಕೆ ಭಾನುವಾರ ವೀಕೆಂಡ್ ಹಾಗೂ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಭಕ್ತರ ಪ್ರವಾಹ ಹರಿದು ಬಂದಿದ್ದು, ಸಾವಿರಾರು ಭಕ್ತಾದಿಗಳು ರಾಜ್ಯದ ವಿವಿಧೆಡೆಯಿಂದ ಆಗಮಿಸಿ ದರ್ಶನ ಪಡೆದರು. ಭಾನುವಾರ ಮುಂಜಾನೆ ಮೂರು ಗಂಟೆಯಿಂದ ಸರತಿ ಸಾಲಿನಲ್ಲಿ ನಿಂತು ದರುಶನ ಪಡೆಯಲು ಭಕ್ತರು ಆರಂಭಿಸಿದರು. ಭಾರಿ ಭಕ್ತರು ಬಂದ ಕಾರಣ ಕಿಲೋಮೀಟರ್ ಗಟ್ಟಲೆ ಸರತಿ ಸಾಲಲ್ಲಿ ನಿಂತಿದ್ದರು. ಇನ್ನೂ ದರ್ಶಕ್ಕಾಗಿ ಗಂಟೆಗಂಟಲೇ ಕಾದು ನಿಂತಿದ್ದ ಕೆಲ ಭಕ್ತಾದಿಗಳು ಮತ್ತು ವಯೋವೃದ್ಧರು, ಮಹಿಳೆಯರು ಸರತಿ ಸಾಲಿನಲ್ಲಿ ನಿಲ್ಲಲಾಗದೆ ಕುಳಿತು ನಂತರ ದೇವಿಯ ದರ್ಶನ ಪಡೆದರು.
ಕಳೆದ ಎರಡು ದಿನಗಳಿಂದ ಲಕ್ಷ-ಲಕ್ಷ ಸಂಖ್ಯೆಯಲ್ಲಿ ಹಾಸನಾಂಬೆ ದರ್ಶನಕ್ಕೆ ಭಕ್ತರು ಮುಗಿಬಿದ್ದಿದ್ದಾರೆ. ಶನಿವಾರ ಭಾರೀ ಜನಸಂದಣಿಯಿಂದ ನೂಕುನುಗ್ಗಲು ಸೃಷ್ಟಿಯಾಗಿ, ರ್ಶನಕ್ಕೆ ಅಧಿಕಾರಿಗಳ ಜೊತೆಯೇ ಭಕ್ತರು ಜಟಾಪಟಿ ನಡೆಸಿದ್ದರು. ಭಾನುವಾರವಾಗಿರುವ ಹಿನ್ನೆಲೆಯಲ್ಲಿ ಮತ್ತಷ್ಟು ಹೆಚ್ಚಲಿರುವ ಭಕ್ತರ ದಂಡು ಹೆಚ್ಚಾಗಿತ್ತು. ಸದ್ಯ ಯಾವುದೇ ಕಲಹಗಳು ನಡೆಯದೇ ಭಾನುವಾರ ಉತ್ಸವ ಅಚ್ಚುಕಟ್ಟಾಗಿ ನಡೆಯಿತು. ಹಾಗೂ ಈ ಬಾರಿ ದಾಖಲೆ ಪ್ರಮಾಣದಲ್ಲಿ ಭಕ್ತರ ದಂಡು ಹರಿದು ಬಂದಿದೆ.ಎ ಸಿ ಮಾರುತಿರವರು ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಹಾಸನಾಂಬ ಜಾತ್ರಾ ಮಹೋತ್ಸವಕ್ಕೆ ಇದುವರೆಗೆ ಒಟ್ಟು ಸುಮಾರು 9, 60,000 ಭಕ್ತಾದಿಗಳು ಆಗಮಿಸಿದ ಲೆಕ್ಕ ಇದೆ, ಶನಿವಾರ ಭಕ್ತರ ಸಂಖ್ಯೆಯಲ್ಲಿ ದಿಢೀರ್ ಏರಿಕೆ ಕಂಡು ಬಂದಿತು , ಭಾನುವಾರ ಪ್ರತಿದಿನದಂತೆ ಭಕ್ತರ ಸಂಖ್ಯೆ ಇದೆ, ಇನ್ನೂ ಎರಡು ದಿನಗಳ ಕಾಲ ದೇವಿಯ ದರ್ಶನ ಇದ್ದು , ಭಕ್ತರ ಸಂಖ್ಯೆಯಲ್ಲಿ ಏರಿಕೆ ಆಗುವ ಸಾಧ್ಯತೆ ಇದೆ. ಒಟ್ಟು ಆದಾಯ 4 ಕೋಟಿ 80 ಲಕ್ಷ ಇದ್ದು, ಈ ದಿನದವರೆಗೆ 5 ಕೋಟಿ 80 ಲಕ್ಷ, ಇದುವರೆಗೆ ಟಿಕೆಟ್‌ನಿಂದ ಸಂಗ್ರಹವಾಗಿದೆ. ಇದು ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲಾಗುತ್ತಿದೆ. ಶನಿವಾರದ ದಿನ ಅತಿಹೆಚ್ಚು ಸುಮಾರು ಎರಡು ಲಕ್ಷ ಭಕ್ತಾದಿಗಳ ಜನರು ಆಗಮಿಸಿದ್ದರು ಜನಜಂಗುಳಿ ಇತ್ತು, ನೂಕು ನುಗ್ಗಲು ಇರಲಿಲ್ಲ. ಸರಾಗವಾಗಿ ರ್ಶನ ಮಾಡಲು ವ್ಯವಸ್ಥೆ ಮಾಡಲಾಗಿದೆ. ಮುಂದಿನ ದಿನಗಳು ಸೇರಿ ಈ ವರ್ಷ ಒಟ್ಟು 12 ಲಕ್ಷಕ್ಕೂ ಅಧಿಕ ಭಕ್ತಾದಿಗಳು ಬರುವ ಸಾಧ್ಯತೆ ಇದೆ. ಕರೆಂಟ್ ಶಾಕ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಗಾಯಾಳುಗಳಿಗೆ ಸಕಾಲಕ್ಕೆ ಚಿಕಿತ್ಸೆ ನೀಡಿ, ಅವರಿಗೆ ದೇವಿಯ ದರ್ಶನ ಕಲ್ಪಿಸಲಾಗಿದೆ, ಯಾವುದೇ ಹೆಚ್ಚಿನ ಅನಾಹುತ ಪ್ರಾಣಾಪಾಯ ಸಂಭವಿಸಿಲ್ಲ, ಸೂಕ್ತ ಚಿಕಿತ್ಸಾ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಸಾರ್ವನಿಕರಿಗೆ ಹಾಸನಾಂಬೆ ದೇವಿಯ ದರ್ಶನಕ್ಕೆ ಇನ್ನೊಂದು ಒಂದು ದಿನ ಮಾತ್ರ ಅವಕಾಶವಿದೆ. ನ.14ರ ತಡರಾತ್ರಿಗೆ ಹಾಸನಾಂಬೆ ದೇವಿ ಸಾರ್ವಜನಿಕ ದರ್ಶನ ಕೊನೆಯಾಗಲಿದ್ದು, ನ.15ಕ್ಕೆ ಶಾಸ್ತ್ರೋಕ್ತವಾಗಿ ಅಧಿಕಾರಿಗಳು, ಜನಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಹಾಸನಾಂಬೆ ಗರ್ಭಗುಡಿ ಬಾಗಿಲು ಮುಚ್ಚಲಿದೆ. ಮತ್ತೆ ಹಾಸನಾಂಬೆ ತಾಯಿ ದರ್ಶನ ಭಾಗ್ಯ ಸಿಗುವುದು ಮುಂದಿನ ವರ್ಷಕ್ಕೆ.ಟಿಕೆಟ್‌ನಿಂದಲೇ ಕೋಟಿಕೋಟಿ ರು. ಕಲೆಕ್ಷನ್: ಹಾಸನಾಂಬ ದೇವಾಲಯಕ್ಕೆಬಾಗಿಲು ತೆರೆದ ದಿನದಿಂದ ಸೋಮವಾರ ಮಧ್ಯಾಹ್ನದ ಹೊತ್ತಿಗೆ ಟಿಕೆಟ್ ಹಾಗೂ ಲಾಡು ಪ್ರಸಾದ ಮಾರಾಟದಿಂದಲೇ 5,52,20,020 ರುಪಾಯಿ ಸಂಗ್ರಹವಾಗಿತ್ತು. ಹಾಸನಾಂಬ ಉತ್ಸವ ಆರಂಭವಾದ ನ.2ರಿಂದ ನ. 13ರವರೆಗೆ ಒಟ್ಟು 5,52,20,020 ರು. ಆದಾಯ ಬಂದಿದೆ. 1 ಸಾವಿರ ಬೆಲೆಯ 28,052 ಟಿಕೆಟ್ ಖರೀದಿಯಾಗಿದ್ದು, ಇದರಿಂದ 2,80,52,000 ರು. ಸಂಗ್ರಹವಾಗಿದೆ. 300 ಬೆಲೆಯ 71,855 ಟಿಕೆಟ್ ಮಾರಾಟವಾಗಿದ್ದು, ಇದರಿಂದ 2,15,56,500 ರು. ಹಣ ಸಂಗ್ರಹವಾಗಿದೆ. ಲಾಡು ಪ್ರಸಾದದಿಂದ 56,11,520 ರು. ಹಣ ಸಂಗ್ರಹವಾಗಿದೆ.