ಬಳ್ಳಾರಿ: ಕನ್ನಡ ಕೇವಲ ಸಂವಹನದ ಭಾಷೆಯಲ್ಲ; ಅದು ಕನ್ನಡಿಗರ ಬದುಕು, ಭಾವನೆ, ಸಂಸ್ಕೃತಿ, ಪರಂಪರೆ ಹಾಗೂ ಸ್ವಾಭಿಮಾನದ ಪ್ರತೀಕವೂ ಆಗಿದೆ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದರು.
ಎರಡು ಸಾವಿರ ವರ್ಷಗಳಿಗೂ ಮಿಗಿಲಾದ ಇತಿಹಾಸ ಹೊಂದಿರುವ ಕನ್ನಡ ಭಾಷೆ ತನ್ನ ಸಾಹಿತ್ಯಿಕ ಶ್ರೀಮಂತಿಕೆ, ಸಾಂಸ್ಕೃತಿಕ ವೈಭವ ಹಾಗೂ ವಿಶಿಷ್ಟ ಭಾಷಾ ಸೊಗಡಿನಿಂದ ವಿಶ್ವದ ಗಮನ ಸೆಳೆದಿದೆ. ಶಾಸ್ತ್ರೀಯ ಭಾಷೆಯ ಸ್ಥಾನಮಾನ ಪಡೆದಿರುವ ಕನ್ನಡವು ತನ್ನದೇ ಆದ ಲಿಪಿ, ವ್ಯಾಕರಣ, ಪದಸಂಪತ್ತು ಹಾಗೂ ಜನಪದ ಸೊಗಡಿನಿಂದ ಭಾರತೀಯ ಭಾಷೆಗಳ ಸಾಲಿನಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ. ಕನ್ನಡವೆಂದರೆ ಕೇವಲ ಅಕ್ಷರಗಳ ಜೋಡಣೆಯಲ್ಲ; ಅದು ಕೋಟ್ಯಂತರ ಕನ್ನಡಿಗರ ಹೃದಯದ ಮಿಡಿತ. ತಾಯಿಯ ಜೋಗುಳದಿಂದ ಆರಂಭವಾಗುವ ಕನ್ನಡದ ನಂಟು ಬದುಕಿನ ಕೊನೆಯ ಉಸಿರಿನವರೆಗೂ ನಮ್ಮನ್ನು ಬೆಸೆದುಕೊಂಡಿರುತ್ತದೆ ಎಂದರು.
ಬಡವರಿಗಾಗಿ ಆರನೇ ಗ್ಯಾರಂಟಿ ಮನೆಗಳ ಯೋಜನೆ: ಕರ್ನಾಟಕ ಸರ್ಕಾರವು ಬಡವರ ಕಲ್ಯಾಣಕ್ಕೆ ಬದ್ಧವಾಗಿದ್ದು, ಈಗಾಗಲೇ ಜಾರಿಗೆ ತಂದಿರುವ ಐದು ಪ್ರಮುಖ ಗ್ಯಾರಂಟಿಗಳ ಜತೆಗೆ ಬಡವರಿಗೆ ಸೂರು ಕಲ್ಪಿಸುವುದು ನಮ್ಮ ಸರ್ಕಾರದ ಆರನೇ ಗ್ಯಾರಂಟಿಯಾಗಿದೆ.ಹಿಂದಿನ ಸರ್ಕಾರದ ಅವಧಿಯಲ್ಲಿ ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ ಮಂಜೂರಾಗಿದ್ದ 1,80,280 ಮನೆಗಳು ಫಲಾನುಭವಿಗಳು ವಂತಿಕೆ ಹಣ ಕಟ್ಟಲಾಗದೆ ಅರ್ಧಕ್ಕೆ ನಿಂತಿದ್ದವು. ಪ್ರತಿ ಮನೆಗೆ ತಗಲುವ ವೆಚ್ಚದಲ್ಲಿ ಫಲಾನುಭವಿಗಳು ₹ 4.5 ಲಕ್ಷ ಭರಿಸಬೇಕಾಗಿದ್ದು, ಬಡವರಿಗೆ ಇದು ಅಸಾಧ್ಯವಾಗಿತ್ತು. ಈ ಸಮಸ್ಯೆ ಅರಿತ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಂಪುಟವು ಬಡವರ ಪಾಲಿನ ಹಣ ಭರಿಸಲು ₹4,700 ಕೋಟಿ ಅನುಮೋದನೆ ನೀಡಿದೆ ಎಂದರು.
ಸಾಧಕರ ಸನ್ಮಾನ: 2026ನೇ ಸಾಲಿನ ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 10 ಮಂದಿ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.ರಂಗಭೂಮಿ ಕ್ಷೇತ್ರದಲ್ಲಿ ಸಾಧನೆಗೈದಿರುವ ಜೋಳದರಾಶಿ ಬಸವರಾಜ, ಜಾನಪದ ಕ್ಷೇತ್ರದಿಂದ ಕಂಪ್ಲಿಯ ಎಚ್.ಪಿ.ಶಿಕಾರಿ ರಾಮು, ಕನ್ನಡಸೇವೆ ಹಾಗೂ ರೈಲ್ವೆ ಹೋರಾಟಗಾರ ಕೆ.ಎಂ. ಮಹೇಶ್ವರಸ್ವಾಮಿ, ಕ್ರೀಡಾ ಕ್ಷೇತ್ರದ ಸಾಧನೆಗೆ ಬಳ್ಳಾರಿಯ ರಜಿನಿ ಲಕ್ಕ, ಸಮಾಜಸೇವೆ ಕ್ಷೇತ್ರದ ಜಿ. ವೀರೇಶ, ಸಂಡೂರು ಹಾಗೂ ಪಿ.ಹುಸೇನ್ ಸಾಹೇಬ್, ವೈದ್ಯಕೀಯ ಕ್ಷೇತ್ರದಿಂದ ಯೋಗಾನಂದ ರೆಡ್ಡಿ, ವೈ.ಸಿ., ಪತ್ರಿಕೋದ್ಯಮ ಕ್ಷೇತ್ರದಿಂದ ಬಳ್ಳಾರಿಯ ಹಿರಿಯಪತ್ರಕರ್ತ ಎನ್. ವೀರಭದ್ರಗೌಡ, ಕೃಷಿ ಕ್ಷೇತ್ರದ ಸಿರುಗುಪ್ಪ ತಾಲೂಕು ತೆಕ್ಕಲಕೋಟೆಯ ಎಸ್. ಸಾದಣ್ಣ, ಕೃಷಿ ತೋಟಗಾರಿಕೆ ಕ್ಷೇತ್ರದಿಂದ ಕುರುಗೋಡು ತಾಲೂಕು ಮುಷ್ಠಗಟ್ಟೆಯ ಛಲವಾದಿ ದೊಡ್ಡಬಸಪ್ಪ ಅವರನ್ನು ಸಚಿವ ಜಮೀರ್ ಅಹ್ಮದ್ ಖಾನ್ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಮತ್ತು ಕನ್ನಡ ಪ್ರೇಮಿಗಳ ನೇತೃತ್ವದಲ್ಲಿ ಕಳೆದ 25 ವರ್ಷಗಳಿಂದ ಹಂಪಿಯ ತಾಯಿ ಭುವನೇಶ್ವರಿ ದೇವಸ್ಥಾನದಿಂದ ತರುತ್ತಿದ್ದ ಕನ್ನಡ ಜ್ಯೋತಿ ಈ ವರ್ಷವೂ ಸಹ ಸಚಿವರ ಸಮ್ಮುಖದಲ್ಲಿ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದರು.
ಸ್ತಬ್ಧಚಿತ್ರಗಳ ಅದ್ಧೂರಿ ಮೆರವಣಿಗೆ: 71ನೇ ಕರ್ನಾಟಕ ರಾಜ್ಯೋತ್ಸವ ಹಾಗೂ ಕರ್ನಾಟಕ ಏಕೀಕರಣದ ಸುವರ್ಣ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಜಿಲ್ಲಾಡಳಿತದಿಂದ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಸ್ತಬ್ಧಚಿತ್ರಗಳ ಅದ್ಧೂರಿ ಮೆರವಣಿಗೆ ನಡೆಯಿತು. ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಚಾಲನೆ ನೀಡಿದರು.
ವಿವಿಧ ಕನ್ನಡ ಪರ ಸಂಘಟನೆಗಳಿಂದ ಕನ್ನಡ ತಾಯಿ ಭುವನೇಶ್ವರಿ ದೇವಿ ಅವರ ಭಾವಚಿತ್ರ ಹಾಗೂ ಕರ್ನಾಟಕ ಏಕೀಕರಣದ ರೂವಾರಿ ಬಳ್ಳಾರಿಯ ಹೋರಾಟಗಾರ ಪಿಂಜಾರ ರಂಜಾನ್ ಸಾಬ್ ಭಾವಚಿತ್ರ ವಾಹನ ಕಾರ್ಯಕ್ರಮದ ವಿಶೇಷವಾಗಿತ್ತು. ಸಚಿವರು ವಾಹನ ಚಲಾಯಿಸಿ ನೋಡುಗರ ಗಮನಸೆಳೆದರು.
ನಗರ ಪ್ರದೇಶದ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳಲ್ಲಿ 8, 9 ಮತ್ತು 11ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಈ ಯೋಜನೆಗೆ ಆಯ್ಕೆ ಮಾಡಲಾಗಿದೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಕೃಷಿ, ತೋಟಗಾರಿಕೆ, ಪಶುಸಂಗೋಪನೆ ಹಾಗೂ ಗ್ರಾಮೀಣ ಕಲೆ ಮತ್ತು ಸಂಸ್ಕೃತಿಯ ನೇರ ಮತ್ತು ನೈಜ ಅನುಭವ ಒದಗಿಸುವುದು ಪ್ರಮುಖ ಗುರಿಯಾಗಿದೆ. ವಿದ್ಯಾರ್ಥಿಗಳಲ್ಲಿ ಗ್ರಾಮೀಣ ಜೀವನದ ಬಗ್ಗೆ ಅರಿವು ಹಾಗೂ ಪ್ರಾಯೋಗಿಕ ಜ್ಞಾನ ಮೂಡಿಸಲು ಈ ವಿನೂತನ ಯೋಜನೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.