ಕೆಆರ್ ಎಸ್ ನಿಂದ ಲಕ್ಷಕ್ಕೂ ಹೆಚ್ಚು ಕ್ಯುಸೆಕ್ ನೀರು ಬಿಡುಗಡೆ : ಅಪಾಯದ ಮಟ್ಟದಲ್ಲಿ ಕಾವೇರಿ ನದಿ

KannadaprabhaNewsNetwork | Updated : Jul 28 2024, 01:04 PM IST

ಸಾರಾಂಶ

ಅಪಾಯದ ಮಟ್ಟದಲ್ಲಿ ಕಾವೇರಿ ನದಿ ಉಕ್ಕಿ ಹರಿಯುತ್ತಿದೆ. ನದಿ ನೀರಿನ ಪ್ರವಾಹದಿಂದ 200 ವರ್ಷಗಳ ಹಳೆಯದಾದ ವೆಲ್ಲೆಸ್ಲಿ ಸೇತುವೆ ಭಾಗಶಃ ಮುಳುಗಡೆಯಾಗಿದೆ. 

ಶ್ರೀರಂಗಪಟ್ಟಣ : ಕೃಷ್ಣರಾಜಸಾಗರ ಜಲಾಶಯದಿಂದ 1.13 ಲಕ್ಷ ಕ್ಯುಸೆಕ್‌ ಗೂ ಹೆಚ್ಚು ಪ್ರಮಾಣದಲ್ಲಿ ಕಾವೇರಿ ನದಿಗೆ ನೀರು ಬಿಟ್ಟಿರುವ ಹಿನ್ನೆಲೆಯಲ್ಲಿ ಪಟ್ಟಣ ಸೇರಿದಂತೆ ಹಲವೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.

ಪಟ್ಟಣದ ಸ್ನಾನಘಟ್ಟ ಬಳಿಯ ಕಾವೇರಿ ನದಿ ತಟದಲ್ಲಿದ್ದ ದೇವಸ್ಥಾನಗಳು, ಪಶ್ಚಿಮ ವಾಹಿನಿಯಲ್ಲಿರುವ ಪುರಾತನ ಮಂಟಪ ಮತ್ತು ಧಾರ್ಮಿಕ ಶ್ರದ್ಧಾ ಕೇಂದ್ರಗಳು ಜಲಾವೃತವಾಗಿವೆ. ಶ್ರೀ ನಿಮಿಷಾಂಬ ದೇವಾಲಯದ ಸನ್ನಿಧಿಯ ಹೊರಾಂಗಣದವರೆಗೂ ಕಾವೇರಿ ನೀರಿನ ಪ್ರವಾಹ ಉಂಟಾಗಿದೆ. ಚೆಕ್‌ಪೋಸ್ಟ್ ಬಳಿ ಸಾಯಿಮಂದಿರಕ್ಕೆ ಪ್ರವಾಹದ ನೀರು ನುಗ್ಗಿದ್ದು, ರಂಗನತಿಟ್ಟು ಪಕ್ಷಿಧಾಮ ಸಂಪೂರ್ಣ ಮುಳುಗಡೆ ಭೀತಿಯಲ್ಲಿದೆ.

ವೆಲ್ಲೆಸ್ಲಿ ಸೇತುವೆ ಭಾಗಶಃ ಮುಳುಗಡೆ:

ಅಪಾಯದ ಮಟ್ಟದಲ್ಲಿ ಕಾವೇರಿ ನದಿ ಉಕ್ಕಿ ಹರಿಯುತ್ತಿದೆ. ನದಿ ನೀರಿನ ಪ್ರವಾಹದಿಂದ 200 ವರ್ಷಗಳ ಹಳೆಯದಾದ ವೆಲ್ಲೆಸ್ಲಿ ಸೇತುವೆ ಭಾಗಶಃ ಮುಳುಗಡೆಯಾಗಿದೆ. ಐತಿಹಾಸಿಕ ವೆಲ್ಲೆಸ್ಲಿ ಸೇತುವೆ ಮೇಲೆ ಯಾವುದೇ ವಾಹನ ಸಂಚರಿಸಿದಂತೆ ನಿರ್ಬಂಧಿಸಿ ಸೇತುವೆ ಬಳಿ ಸಾರ್ವಜನಿಕರು ತೆರಳದಂತೆ ನಿಷೇಧ ಹೇರಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ನದಿ ಪಾತ್ರದ ಪ್ರಮುಖ ಆಯಕಟ್ಟಿನ ಸ್ಥಳಗಳಿಗೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಪಟ್ಟಣದ ಕೋಟೆ ಗಣಪತಿ ದೇವಾಲಯದ ಅರ್ಧದಷ್ಟು ಭಾಗ ಮುಳುಗಡೆಯಾಗಿದೆ. ಅಂಬೇಡ್ಕರ್ ಭವನದ ಪಕ್ಕದಲ್ಲಿರುವ ರಾಮಕೃಷ್ಣ ಮಂದಿರ ನೀರಿನಿಂದ ಸುತ್ತುವರಿದು ಜಲಾವೃತಗೊಂಡಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಮಠದ ಸಿಬ್ಬಂದಿಯನ್ನು ತೆರವುಗೊಳಿಸಿ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದಾರೆ.

ನಿಮಿಷಾಂಬ ದೇಗುಲ ಪ್ರಾಂಗಣ ಜಲಾವೃತ:

ಕಾವೇರಿ ನದಿ ಹೆಚ್ಚಿನ ನೀರನ್ನು ಬಿಟ್ಟಿರುವುದರಿಂದ ಪಟ್ಟಣದ ಪ್ರಸಿದ್ಧ ಶ್ರೀ ನಿಮಿಷಾಂಬ ದೇವಾಲಯದ ಸನ್ನಿಧಿಯ ಹೊರಾಂಗಣದವರೆಗೂ ಕಾವೇರಿ ನೀರಿನ ಪ್ರವಾಹ ಉಂಟಾಗಿ ಪ್ರಾಂಗಣ ಬಹುತೇಕ ಜಲಾವೃತವಾಗಿದೆ. ಮುನ್ನಚರಿಕಾ ಕ್ರಮವಾಗಿ ದೇವಾಲಯದ ಬಾಗಿಲ ಬಳಿ ಬ್ಯಾರಿಕೇಡ್ ಹಾಕಿ ನದಿಗೆ ಇಳಿಯದಂತೆ ಭಕ್ತರಿಗೆ ನಿಷೇಧ ಹೇರಲಾಗಿದೆ. ಜಲಾಶಯದ ಭದ್ರತಾ ದೃಷ್ಟಿಯಿಂದ ಮತ್ತಷ್ಟು ನೀರು ಹೊರ ಹಾಕುವ ಸಾಧ್ಯತೆಯಿದ್ದು, ಮತ್ತಷ್ಟು ನೀರು ಹರಿಬಿಟ್ಟರೆ ಬಹುತೇಕ ನದಿ ದಂಡೆಗಳ ಗ್ರಾಮಗಳಿಗೆ ಪ್ರವಾಹ ಎದುರಾಗಲಿದೆ ಎಂದು ಅಂದಾಜಿಸಲಾಗಿದೆ.

ಪಕ್ಷಿಧಾಮ, ಬೃಂದಾವನಕ್ಕೆ ಪ್ರವಾಸಿಗ ನಿಷೇಧ:

ಕಾವೇರಿ ನೀರಿನ ಪ್ರವಾಹದಿಂದಾಗಿ ಪ್ರಸಿದ್ಧ ರಂಗನತಿಟ್ಟು ಪಕ್ಷಿಧಾಮ ಸಂಪೂರ್ಣ ಜಲಾವೃತಗೊಂಡಿದೆ. ಇದರಿಂದ ಪಕ್ಷಿಧಾಮದಲ್ಲಿನ ಪಕ್ಷಿ ಸಂಕುಲ ಆತಂಕದಲ್ಲಿದೆ. ಈಗಾಗಲೇ ಬೋಟಿಂಗ್ ವ್ಯವಸ್ಥೆ ಸ್ಥಗಿತಗೊಳಿಸಲಾಗಿದೆ. ಸಿಬ್ಬಂದಿ ತಮ್ಮ ಬೋಟ್‌ಗಳನ್ನು ಮರಕ್ಕೆ ಕಟ್ಟಿ ಹಾಕಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಪಕ್ಷಿಧಾಮಕ್ಕೆ ಪ್ರವಾಸಿಗರ ಪ್ರವೇಶ ನಿಷೇಧಿಸಿದೆ.

ಕೆಆರ್‌ಎಸ್ ಅಣೆಕಟ್ಟೆ ಸಂಪೂರ್ಣ ಭರ್ತಿಯಾಗಿದ್ದು, ಹೆಚ್ಚಿನ ನೀರನ್ನು ಹೊರ ಬಿಡುತ್ತಿರುವುದರಿಂದ ಪ್ರವಾಸಿಗರ ಹಿತದೃಷ್ಟಿಯಿಂದ ಕೆಆರ್‌ಎಸ್‌ನಲ್ಲಿನ ಬೋಟಿಂಗ್ ಪಾಯಿಂಟ್ ಸ್ಥಗಿತಗೊಳಿಸಿ ಬೃಂದಾವನಕ್ಕೆ ಪ್ರವಾಸಿಗರು ತೆರಳದಂತೆ ಸೂಚಿಸಲಾಗಿದೆ.

ಜನರ ಪ್ರವೇಶ ನಿಷೇಧ:

ತಾಲೂಕಿನ ಬಾಬುರಾಯನಕೊಪ್ಪಲು ಗ್ರಾಮದ ಬಳಿ ಇರುವ ಸಯಮಪುರಂ ಮಾರಿಯಮ್ಮ ದೇವಸ್ಥಾನವೂ ಸಂಪೂರ್ಣ ಜಲಾವೃತವಾಗಿದೆ. ಪ್ರವಾಹ ಪರಿಸ್ಥಿತಿ ಇರುವ ತಾಲೂಕಿನ ಅಚ್ಚಪ್ಪನಕೊಪ್ಪಲು, ಎಣ್ಣೆಹೊಳೆ ಕೊಪ್ಪಲು, ರಾಮಂಪುರ, ದೊಡ್ಡಪಾಳ್ಯ, ಮಂಡ್ಯ ಕೊಪ್ಪಲಿನ ಕಾವೇರಿ ಬೋರೇದೇವರ ತೋಪು ಸೇರಿದಂತೆ ಹಲವೆಡೆ ಪೊಲೀಸರನ್ನು ನಿಯೋಜಿಸಿ, ಪೊಲೀಸ್ ಬ್ಯಾರಿಗೇಡ್ ನಿರ್ಮಿಸಿ ಅಪಾಯ ಸ್ಥಳಗಳಿಗೆ ಜನರ ಪ್ರವೇಶವನ್ನು ನಿಷೇಧ ಮಾಡಲಾಗಿದೆ.

ಪಾಲಹಳ್ಳಿ ರಸ್ತೆ ಜಲಾವೃತ:

ಪಟ್ಟಣ ಸಮೀಪದ ಪಶ್ಚಿಮವಾಹಿನಿ ಬಳಿ ರೈಲ್ವೆ ಸೇತುವೆಗೆ ಕೆಳಗೆ ಹಾದು ಹೋಗುತ್ತಿದ್ದ ಶ್ರೀರಂಪಟ್ಟಣ - ಪಾಲಹಳ್ಳಿ ರಸ್ತೆ ನೀರಿನಿಂದ ಜಲಾವೃತಗೊಂಡು ವಾಹನಗಳು ತೆರಳದಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಗೌತಮ ಕ್ಷೇತ್ರದ ಸುತ್ತಲೂ ನೀರು:

ತಾಲೂಕಿನ ದೊಡ್ಡೇಗೌಡನಕೊಪ್ಪಲು ಗ್ರಾಮದ ಬಳಿ ಇರುವ ಗೌತಮ ಕ್ಷೇತ್ರದ ಸುತ್ತಲೂ ನೀರು ಆವರಿಸಿದೆ. ಈ ಸ್ಥಳ ದ್ವೀಪದಂತಾಗಿ ಜಲಾವೃತವಾಗಿದೆ. ಆಶ್ರಮ ಬಿಟ್ಟು ಗೌತಮ ಕ್ಷೇತ್ರದ ಶ್ರೀ ಗಜಾನನ ಸ್ವಾಮೀಜಿ ಹೊರ ಬರುವಂತೆ ತಾಲೂಕು ಆಡಳಿತ ಸೂಚಸಿ, ತಿಳಿಹೇಳಲಾಗಿದೆ ಎಂದು ತಿಳಿದು ಬಂದಿದೆ.

Share this article