- ಸ್ವಂತ ಖರ್ಚಿನಲ್ಲಿ 12 ಶಾಲಾ ಕೊಠಡಿಗಳ ನಿರ್ಮಿಸುತ್ತಿರುವ ಉದ್ಯಮಿ ಹರ್ಷ
ಕನ್ನಡಪ್ರಭ ವಾರ್ತೆ ಜಗಳೂರು
ಉದ್ಯಮಿ ಹರ್ಷ ಹಿರೇಕುಂಬಳಗುಂಟೆ ಮಠ ಅವರು ಸ್ವಂತ ಖರ್ಚಿನಲ್ಲಿ ಕಲ್ಲೇದೇವಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಾಗಿ ₹1.65 ಕೋಟಿ ವೆಚ್ಚದಲ್ಲಿ 12 ಶಾಲಾ ಕೊಠಡಿ ನಿರ್ಮಿಸುತ್ತಿದ್ದಾರೆ. ಅವರ ಮಾದರಿಯಾದ ಶಿಕ್ಷಣ ಕಾಳಜಿಗಾಗಿ ಅಭಿನಂದನೆ ಸಲ್ಲಿಸುತ್ತೇನೆ. ಇತ್ತೀಚಿನ ದಿನಗಳಲ್ಲಿ ಜಿಲ್ಲೆಯ ಶಿಕ್ಷಣ ಕ್ಷೇತ್ರಕ್ಕೆ ದಾನಿಗಳಿಂದ ₹10 ಕೋಟಿಗೂ ಅಧಿಕ ನೆರವು ಹರಿದುಬಂದಿದೆ ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.ತಾಲೂಕಿನ ಕಲ್ಲೇದೇವರಪುರ ಗ್ರಾಮದಲ್ಲಿ ನೂತನ ಶಾಲಾ ಕೊಠಡಿಗಳ ನಿರ್ಮಾಣದ ಭೂಮಿ ಪೂಜೆ ಹಾಗೂ ಶಾಲಾ ದಾಖಲಾತಿ ಪ್ರಾರಂಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ಎಸ್.ಎಸ್. ಕೇರ್ ಟ್ರಸ್ಟ್ ವತಿಯಿಂದಲೂ ಆರೋಗ್ಯದ ಜೊತೆಗೆ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಡೆಂಟಲ್ ಕಾಲೇಜು ವತಿಯಿಂದ ಮಕ್ಕಳಿಗೆ ಆರೋಗ್ಯ ಜಾಗೃತಿ ಮೂಡಿಸಲಾಗುತ್ತಿದೆ. ವಾರದಲ್ಲಿ 3 ದಿನ ಸಾರ್ವಜನಿಕರ ಬಳಿಗೇ ''''ಆರೋಗ್ಯ ಸಂಚಾರಿ ವಾಹನ'''' ಬರಲಿದೆ. ವಿಶೇಷವಾಗಿ ಕಾರ್ಮಿಕರು ಕೆಲಸ ಮಾಡುವ ಸ್ಥಳಗಳಿಗೇ ಬಂದು ಆರೋಗ್ಯ ತಪಾಸಣೆ ನಡೆಸಲಾಗುವುದು. ಕೇಂದ್ರ ಸರ್ಕಾರದಿಂದ ನೀಡಲಾಗುತ್ತಿರುವ ಗರ್ಭಕೋಶದ ವ್ಯಾಕ್ಸಿನೇಷನ್ (ಲಸಿಕೆ) ಸದುಪಯೋಗ ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ದಾನಿ ಹರ್ಷ ಹಿರೇಕುಂಬಳಗುಂಟೆ ಮಠ ಮಾತನಾಡಿ, ಈ ಶಾಲೆ ಇನ್ನೂ ಉನ್ನತಮಟ್ಟಕ್ಕೆ ಬೆಳೆಯಬೇಕು. 2027-28ನೇ ಶೈಕ್ಷಣಿಕ ವರ್ಷದ ವೇಳೆಗೆ ಈ ಹೊಸ ಕಟ್ಟಡ ಸಿದ್ಧಗೊಂಡು ತರಗತಿಗಳು ಆರಂಭವಾಗಲಿವೆ. ಸುತ್ತಮುತ್ತಲಿನ ಗ್ರಾಮೀಣ ವಿದ್ಯಾರ್ಥಿಗಳು ಶಾಲೆಯ ಸದುಪಯೋಗ ಪಡೆದು ಉನ್ನತ ಹುದ್ದೆಗೇರಬೇಕು ಎಂದು ಆಶಯ ವ್ಯಕ್ತಪಡಿಸಿದರು.
- - -
ಹಿರಿಯ ಚೇತನ, ತಂದೆ ಸಮಾನರಾದ ಲಿಂಗೈಕ್ಯ ಡಾ.ಶಾಮನೂರು ಶಿವಶಂಕರಪ್ಪ ಅವರ 96ನೇ ವರ್ಷದ ಜನ್ಮದಿನೋತ್ಸವ ಪ್ರಯುಕ್ತ ಜೂನ್ 17ರಂದು ದಾವಣಗೆರೆಯ ಬಾಪೂಜಿ ಎಂಬಿಎ ಕಾಲೇಜು ಮೈದಾನದಲ್ಲಿ ''''ಉಚಿತ ಬೃಹತ್ ಸಾಮೂಹಿಕ ವಿವಾಹ ಮಹೋತ್ಸವ'''' ಹಮ್ಮಿಕೊಳ್ಳಲಾಗಿದೆ. ಎಲ್ಲ ಸಮಾಜಗಳ ವಧು-ವರರು ಈ ಅವಕಾಶದ ಪ್ರಯೋಜನ ಪಡೆದುಕೊಳ್ಳಲು ನೋಂದಣಿ ಮಾಡಿಕೊಳ್ಳಬಹುದು.
- - -
ಶಾಲಾ ಕೊಠಡಿಗಳ ಕಾಮಗಾರಿಗೆ ಶಾಸಕ ಬಿ. ದೇವೇಂದ್ರಪ್ಪ, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಭೂಮಿಪೂಜೆ ನೆರವೇರಿಸಿದರು.