ಕೊಪ್ಪಳ: ಹಿಂದುಳಿದ, ಅಲ್ಪಸಂಖ್ಯಾತ, ಎಸ್ಸಿ, ಎಸ್ಟಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೆಚ್ಚು ಹೆಚ್ಚು ವಸತಿ ನಿಲಯಗಳನ್ನು ಪ್ರಾರಂಭಿಸಿದ್ದು, ಇನ್ನೂ ಹತ್ತು ವಸತಿ ನಿಲಯಗಳನ್ನು ಶೀಘ್ರದಲ್ಲಿಯೇ ಮಂಜೂರಿ ಮಾಡಿಸುವ ಪ್ರಯತ್ನ ಮಾಡಲಾಗುವುದು ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.
ಕೊಪ್ಪಳ ಕ್ಷೇತ್ರಕ್ಕೆ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ ಹಾಗೂ ಅಲ್ಪ ಸಂಖ್ಯಾತರ ಇಲಾಖೆಯ ಅನೇಕ ವಸತಿ ನಿಲಯಗಳನ್ನು ತರುವ ಕೆಲಸ ಮಾಡುತ್ತಿದ್ದೇವೆ. ಇದರಿಂದ ಅರ್ಹ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಮುಂದಿನ ಆರ್ಥಿಕ ವರ್ಷದಲ್ಲಿ 10ಕ್ಕೂ ಹೆಚ್ಚು ವಸತಿ ನಿಲಯಗಳನ್ನು ಮತ್ತೆ ಕ್ಷೇತ್ರಕ್ಕೆ ತರುವ ಪ್ರಾಮಾಣಿಕ ಕೆಲಸ ಮಾಡುತ್ತೇವೆ. ಅಳವಂಡಿ ಗ್ರಾಮದಲ್ಲಿ ಹಿಂದುಳಿದ ಇಲಾಖೆ ವತಿಯಿಂದ ಬಾಲಕರ ಹಾಗೂ ಬಾಲಕಿಯರ ವಸತಿ ನಿಲಯ ಕಟ್ಟಿದ್ದೇವೆ. ಅವೆರಡು ನಮ್ಮ ಜಿಲ್ಲೆಯಲ್ಲಿಯೇ ಮಾದರಿ ಹಾಸ್ಟೆಲ್ ಗಳು. ಪ್ರತಿಯೊಬ್ಬ ವಿದ್ಯಾರ್ಥಿಗಳ ಪಾಲಕರು ನಮಗೆ ಅಲ್ಲೇ ಪ್ರವೇಶ ಕೊಡಿಸಿ ಎಂದು ಮನವಿ ಮಾಡುತ್ತಿದ್ದಾರೆ. ಅದರಂತೆಯೇ ಕ್ಷೇತ್ರದಲ್ಲಿ ಹಾಸ್ಟೆಲ್ ಗಳನ್ನು ನಿರ್ಮಿಸುತ್ತೇವೆ ಎಂದರು.
ಮಾಜಿ ಸಂಸದ ಸಂಗಣ್ಣ ಕರಡಿ, ನಗರಾಭಿವೃದ್ಧಿ ಪ್ರಧಿಕಾರದ ಅಧ್ಯಕ್ಷ ಪ್ರಸನ್ನ ಗಡಾದ್, ನಗರ ಘಟಕದ ಕಾಂಗ್ರೆಸ್ ಅಧ್ಯಕ್ಷ ಕಾಟನ್ ಪಾಷಾ, ಜಿಪಂ ಮಾಜಿ ಸದಸ್ಯ ಗೂಳಪ್ಪ ಹಲಿಗೇರಿ, ಭಾಗ್ಯನಗರ ಪಪಂ ಅಧ್ಯಕ್ಷ ರಮೇಶ ಹ್ಯಾಟಿ, ನಗರಸಭೆ ಮಾಜಿ ಅಧ್ಯಕ್ಷ ಅಮ್ಜದ್ ಪಟೇಲ್, ರಾಮಣ್ಣ ಕಲ್ಲನ್ನವರ, ಮುತ್ತುರಾಜ್ ಕುಷ್ಟಗಿ, ಅಜ್ಜಪ್ಪ ಕೊಪ್ಪಳ, ಖತೀಬ್ ಬಾಷಾ, ಬಸಯ್ಯ ಹಿರೇಮಠ, ಶಿವರೆಡ್ಡಿ ಭೂಮಕ್ಕನವರ, ಅಕ್ಬರ್ ಪಲ್ಟಾನ್ ಸೇರಿದಂತೆ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.