ಚಿರತೆ ಸೆರೆಗೆ ಬನ್ನೇರಘಟ್ಟ, ಮೈಸೂರಿಂದ ತಂಡ ಆಗಮನ

KannadaprabhaNewsNetwork |  
Published : Jan 21, 2026, 02:45 AM IST
ಮದಮದಮ | Kannada Prabha

ಸಾರಾಂಶ

ಡಿ. 17ರಂದು ಮೊದಲ ಬಾರಿಗೆ ಹುಬ್ಬಳ್ಳಿ ವಿಮಾನ ನಿಲ್ದಾಣದ ಹಿಂಬದಿಯಲ್ಲಿ ಕಾಣಿಸಿಕೊಂಡಿದ್ದ ಚಿರತೆ ಆಗಾಗ ಕಾಣಿಸಿಕೊಳ್ಳುತ್ತಲೆ ಇದೆ. ಇದರ ಬಲೆಗಾಗಿ ಮೂರು ಕಡೆಗಳಲ್ಲಿ ಪಂಜರ ಇಡಲಾಗಿದೆ. 11 ಟ್ರ್ಯಾಪ್‌ ಕ್ಯಾಮೆರಾಗಳನ್ನು ಅಳವಡಿಸಿದರೂ ಚಿರತೆ ಮಾತ್ರ ಸೆರೆ ಸಿಕ್ಕಿಲ್ಲ.

ಹುಬ್ಬಳ್ಳಿ:

ಕಳೆದ ಒಂದು ತಿಂಗಳಿಂದ ಅರಣ್ಯ ಇಲಾಖೆಯ ನಿದ್ದೆಗೆಡಿಸಿರುವ ಚಿರತೆ ಭಾನುವಾರ ರಾತ್ರಿಯೆಲ್ಲ ಕಾರ್ಯಾಚರಣೆ ನಡೆಸಿದರೂ ಸೆರೆ ಸಿಕ್ಕಿಲ್ಲ. ಒಂದು ಕಡೆಯಲ್ಲಿ ಡ್ರೋನ್‌ ಕ್ಯಾಮೆರಾದಲ್ಲಿ ತನ್ನ ಇರುವಿಕೆಗೆ ಸಾಕ್ಷಿ ನೀಡಿದೆ. ಆದರೆ, ಸೆರೆ ಸಿಗದೇ ಸೋಮವಾರ ರಾತ್ರಿ ಮತ್ತೆ ಕಣ್ಣುಮುಚ್ಚಾಲೆ ಆಡಿದೆ.

ಡಿ. 17ರಂದು ಮೊದಲ ಬಾರಿಗೆ ವಿಮಾನ ನಿಲ್ದಾಣದ ಹಿಂಬದಿಯಲ್ಲಿ ಕಾಣಿಸಿಕೊಂಡಿದ್ದ ಚಿರತೆ ಆಗಾಗ ಕಾಣಿಸಿಕೊಳ್ಳುತ್ತಲೆ ಇದೆ. ಇದರ ಬಲೆಗಾಗಿ ಮೂರು ಕಡೆಗಳಲ್ಲಿ ಪಂಜರ ಇಡಲಾಗಿದೆ. 11 ಟ್ರ್ಯಾಪ್‌ ಕ್ಯಾಮೆರಾಗಳನ್ನು ಅಳವಡಿಸಿದರೂ ಚಿರತೆ ಮಾತ್ರ ಸೆರೆ ಸಿಕ್ಕಿಲ್ಲ. ಹೀಗಾಗಿ ಬನ್ನೇರುಘಟ್ಟದ ನ್ಯಾಷನಲ್‌ ಪಾರ್ಕ್‌ನಿಂದ 2 ಥರ್ಮಲ್‌ ಡ್ರೋನ್‌ ಕ್ಯಾಮೆರಾ ಹಾಗೂ ತಂಡವನ್ನು ಅರಣ್ಯ ಇಲಾಖೆ ಕರೆಯಿಸಿದೆ. ಇನ್ನು ಮೈಸೂರು ಚಿರತೆ ಸೆರೆ ಮಾಡುವ ಕಾರ್ಯಪಡೆಯನ್ನು ಕರೆಯಿಸಲಾಗಿದೆ. ಜತೆಗೆ ಗದಗ ಜಿಲ್ಲೆಯ ಬಿಂಕದಕಟ್ಟಿ ಪ್ರಾಣಿಸಂಗ್ರಹಾಲಯದಲ್ಲಿನ ಇಬ್ಬರು ಅರವಳಿಕೆ ತಜ್ಞರು, ಧಾರವಾಡ ಪಶು ಸಂಗೋಪನಾ ಮತ್ತು ಪಶು ವೈದ್ಯಕೀಯ ಇಲಾಖೆಯ ತಜ್ಞರು ಕೂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.

ವಿಮಾನ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶದಲ್ಲಿ ಸೋಮವಾರ ಸಂಜೆ 4ರಿಂದ ಬೆಳಗಿನ ಜಾವದ ವರೆಗೂ ಕಾರ್ಯಾಚರಣೆ ನಡೆಸಲಾಗಿದೆ. ಥರ್ಮಲ್‌ ಡ್ರೋನ್‌ ಕ್ಯಾಮೆರಾದಲ್ಲಿ ಒಂದು ಸಲ ಕಾಣಿಸಿಕೊಂಡಿದೆ. ಆದರೆ, ಮತ್ತೆ ಮರೆಯಾಗಿದೆ. ಹೀಗಾಗಿ ಬೆಳಗಿನ ತನಕ ಕಾರ್ಯಾಚರಣೆ ನಡೆಸಿದರೂ ಸಿಗಲಿಲ್ಲ. ಸೋಮವಾರ ರಾತ್ರಿ ಸಿಸಿಎಫ್‌ ವಸಂತ ರೆಡ್ಡಿ, ಡಿಸಿಎಫ್‌ ಅಲಿಂ, ಎಸಿಎಫ್‌ ಪರಿಮಳಾ ವಿಎಚ್‌ ಸೇರಿದಂತೆ ಹಿರಿಯ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಮಂಗಳವಾರ ಸಂಜೆ 5ರಿಂದ ಮತ್ತೆ ಇದೇ ಪ್ರದೇಶದಲ್ಲಿ ಕಾರ್ಯಾಚರಣೆ ಮುಂದುವರಿಸಿದ್ದಾರೆ.

ವಿಮಾನ ನಿಲ್ದಾಣ ಏಕೆ?:

ವಿಮಾನ ನಿಲ್ದಾಣದ ಪ್ರಾಂಗಣದಲ್ಲಿ ಪ್ರಾಧಿಕಾರ ಬಳಸದ ಸರಿಸುಮಾರು 150 ಎಕರೆಗೂ ಹೆಚ್ಚು ಪ್ರದೇಶವಿದೆ. ಅಲ್ಲಿ ಅಕ್ಷರಶಃ ಕಾಡಿನಂತೆ ಪೊದೆ, ವಿವಿಧ ಮರಗಳು ಬೆಳೆದಿವೆ. ಜತೆಗೆ ನವಿಲು, ಮುಳ್ಳುಹಂದಿ, ಮೊಲಗಳು ಸಾಕಷ್ಟು ಇವೆ. ಹೀಗಾಗಿ ಚಿರತೆಗೆ ಆಹಾರವೂ ಸಲೀಸಾಗಿ ಸಿಗುತ್ತಿದ್ದು ಅಲ್ಲೇ ಬೀಡು ಬಿಟ್ಟಿದೆ. ಆಗಾಗ ಗಾಮನಗಟ್ಟಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಕ್ಕೂ ಹೋಗಿ ವಾಪಸ್‌ ಬರುತ್ತದೆ. ಕೆಲ ಸಲ ಬೀದಿನಾಯಿ ಹಿಡಿದುಕೊಂಡು ಹೋಗಿದೆಯಂತೆ. ಈ ಕಾರಣದಿಂದ ಈ ಪ್ರದೇಶ ಬಿಟ್ಟು ಬೇರೆಲ್ಲೂ ಹೋಗುತ್ತಿಲ್ಲ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.ಭಾನುವಾರ ಸಂಜೆಯಿಂದಲೇ ಕಾರ್ಯಾಚರಣೆ ನಡೆಸಲಾಗಿತ್ತು. ಒಂದು ರಾತ್ರಿ ಥರ್ಮಲ್‌ ಡ್ರೋನ್‌ ಕ್ಯಾಮೆರಾದಲ್ಲಿ ಕಾಣಿಸಿಕೊಂಡಿತು. ಬಳಿಕ ಮತ್ತೆ ಮರೆಯಾಗಿದೆ. ಮಂಗಳವಾರ ಸಂಜೆಯಿಂದ ಮತ್ತೆ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಆರ್‌.ಎಸ್‌. ಉಪ್ಪಾರ, ವಲಯ ಅರಣ್ಯಾಧಿಕಾರಿಗಳು, ಹುಬ್ಬಳ್ಳಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆಹಾರದ ಕೊರತೆಯಿಂದ ಕಡಿಮೆಯಾದ ಗುಬ್ಬಚ್ಚಿಗಳ ಸಂಖ್ಯೆ: ಪ್ರೊ. ಸಿ.ಎಸ್. ಅರಸನಾಳ
ಹತ್ತಕ್ಕೂ ಹೆಚ್ಚು ವಸತಿ ನಿಲಯಗಳು ಮಂಜೂರು