
ಜಿಲ್ಲಾಧಿಕಾರಿ ಮೂಲಕ ಗೃಹ ಸಚಿವರಿಗೆ ಮನವಿ । ಆಮೆಗತಿಯಲ್ಲಿ ತನಿಖೆ: ಕುಟುಂಬಸ್ಥರ ಅಸಮಾಧಾನಕನ್ನಡಪ್ರಭ ವಾರ್ತೆ ಕಾರವಾರ
ನಗರದ ಮಿತ್ರಸಮಾಜ ಮೈದಾನದಿಂದ ಆರಂಭವಾದ ಮೆರವಣಿಗೆಯಲ್ಲಿ ಕಾರವಾರ ಹಾಗೂ ಕದ್ರಾ ಸೇರಿದಂತೆ ವಿವಿಧ ಭಾಗಗಳ ಕ್ಯಾಥೋಲಿಕ್ ಹಾಗೂ ಸಾರ್ವಜನಿಕರು ಸೇರಿ ಐನೂರಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಮೆರವಣಿಗೆ ಬಳಿಕ ಜಿಲ್ಲಾಧಿಕಾರಿಗಳ ಕಚೇರಿ ಎದುರು ಸಮಾವೇಶಗೊಂಡಿತು.
ಜ. 9ರಂದು ಯುವತಿ ರೀಶಲ್ ಮನೆಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದರು. ಆಕೆಯ ಸಾವಿಗೆ ಯುವಕ ಚಿರಾಗ್ ಕಾರಣ ಎಂದು ಆರೋಪಿಸಿ ಕುಟುಂಬಸ್ಥರು ಕದ್ರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ ದೂರು ದಾಖಲಾಗಿ 11 ದಿನಗಳೇ ಕಳೆದರೂ ಸಹ ಇದುವರೆಗೂ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಪೊಲೀಸರು ವಿಫಲವಾಗಿದ್ದು, ತನಿಖೆ ಆಮೆಗತಿಯಲ್ಲಿ ಸಾಗುತ್ತಿರುವ ಕುರಿತು ಕುಟುಂಬಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಈಗಾಗಲೇ ಕರ್ತವ್ಯ ಲೋಪದಡಿ ಕದ್ರಾ ಪಿಎಸ್ಐ ಅವರನ್ನು ಅಮಾನತುಗೊಳಿಸಿರುವುದು ತನಿಖೆ ಸಮರ್ಪಕವಾಗಿ ನಡೆಯದ್ದಕ್ಕೆ ಸಾಕ್ಷಿ ಎನ್ನುವಂತಾಗಿದೆ. ಹೀಗಾಗಿ ಸ್ಥಳೀಯ ಪೊಲೀಸರ ನಿಷ್ಪಕ್ಷಪಾತ ತನಿಖೆಯ ಮೇಲಿರುವ ವಿಶ್ವಾಸ ಕಳೆದುಹೋಗಿದ್ದು, ಕೂಡಲೇ ಪ್ರಕರಣವನ್ನು ಎಸ್‌ಐಟಿ ಅಥವಾ ಬೇರೆ ದಕ್ಷ ಅಧಿಕಾರಿಗಳ ತಂಡಕ್ಕೆ ವಹಿಸಿ ಮಗಳಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ರೀಶಲ್ ಪೋಷಕರು ಗೃಹ ಸಚಿವರಲ್ಲಿ ಮನವಿ ಮಾಡಿದ್ದಾರೆ.
ಬಳಿಕ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಅವರ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಸಹ ಹಾಜರಿದ್ದರು. ಕ್ಯಾಥೋಲಿಕ್ ಸಮುದಾಯದ ಪ್ರಮುಖರು, ಮಹಿಳೆಯರು, ಯುವತಿಯರು ಉಪಸ್ಥಿತರಿದ್ದರು.
ಜ.10ರಂದು ಯುವತಿಯ ಅಂತ್ಯಕ್ರಿಯೆ ನಡೆಸಲಾಗಿದ್ದು, ಮೃತದೇಹದ ಮೇಲೆ ಕಚ್ಚಿದ ಗಾಯದ ಗುರುತುಗಳು ಹಾಗೂ ರಕ್ತದ ಕಲೆಗಳು ಕಂಡುಬಂದಿರುವುದರಿಂದ ತಮ್ಮ ಮಗಳ ಮೇಲೆ ದೈಹಿಕ ಹಾಗೂ ಲೈಂಗಿಕ ದೌರ್ಜನ್ಯ ನಡೆದಿರುವ ಕುರಿತು ತಾಯಿ ರೀನಾ ಡಿಕೋಸ್ತಾ ಶಂಕೆ ವ್ಯಕ್ತಪಡಿಸಿದ್ದರು. ಮೊದಲು ನಡೆಸಲಾದ ಮರಣೋತ್ತರ ಪರೀಕ್ಷೆಯಲ್ಲಿ ಸಾಕಷ್ಟು ಲೋಪದೋಷಗಳಾಗಿವೆ. ಅಲ್ಲದೇ ವರದಿ ನೀಡಲು ವಿಳಂಬ ಮಾಡಲಾಗುತ್ತಿದ್ದು, ಇದು ತನಿಖೆಯ ಹಾದಿ ತಪ್ಪಿಸುವ ಹುನ್ನಾರ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ ಹಿನ್ನಲೆ ಜಿಲ್ಲಾಧಿಕಾರಿ ಸೂಚನೆಯಂತೆ ಮಂಗಳೂರು ಹಾಗೂ ಹುಬ್ಬಳ್ಳಿಯ ವೈದ್ಯರನ್ನೊಳಗೊಂಡ ತಂಡದಿಂದ ಮಂಗಳವಾರ ಮರು ಮರಣೋತ್ತರ ಪರೀಕ್ಷೆ ಕೈಗೊಳ್ಳಲಾಗಿದೆ.