ಕುಕನೂರು: ರಾಜ್ಯದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡಿದ್ದೇವೆ. ಅದೇ ಮಾದರಿಯಲ್ಲಿ ರೈಲು ಪ್ರಯಾಣವೂ ಮಹಿಳೆಯರಿಗೆ ಉಚಿತವಾಗಲಿ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.
ರಾಜ್ಯವನ್ನು ಟೀಕಿಸುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜನರು ಪತ್ರ ಬರೆದು ರೈಲ್ವೇ ಪ್ರಯಾಣ ಫ್ರೀ ಮಾಡಲು ಕೇಳಬೇಕು. ಪ್ರಧಾನಿ ಕನ್ನಡ ಓದುತ್ತಾರೆ. ಕನ್ನಡದಲ್ಲಿಯೇ ಪತ್ರ ಬರೆಯಿರಿ ಎಂದು ನೆರೆದಿದ್ದ ಜನತೆಯನ್ನು ರಾಯರಡ್ಡಿ ಹುರಿದುಂಬಿಸಿದರು.
ಕರ್ನಾಟಕವೇ ನಂ.1: ರಾಜ್ಯದಲ್ಲಿ 4.48 ಕೋಟಿ ಜನರಿಗೆ ಅನ್ನಭಾಗ್ಯ, 1.24 ಕೋಟಿ ಮನೆ ಯಜಮಾನಿಯರಿಗೆ ಗೃಹಲಕ್ಷ್ಮೀ, 1.80 ಕೋಟಿ ಕುಟುಂಬಕ್ಕೆ ಗೃಹಜ್ಯೋತಿ, ಇದುವರೆಗೆ 680 ಕೋಟಿ ಮಹಿಳೆಯರ ಉಚಿತ ಬಸ್ ಪ್ರಯಾಣ ಜನಪರ ಕಾರ್ಯಗಳನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ನೀಡಿದೆ. ಇದಕ್ಕಾಗಿ ವರ್ಷಕ್ಕೆ ₹52 ಸಾವಿರ ಕೋಟಿ ಹಣ ನೀಡುತ್ತಿದ್ದೇವೆ ಎಂದು ವಿವರಿಸಿದರು.ಈ ಗ್ಯಾರಂಟಿಗಳಿಂದ ಕರ್ನಾಟಕ ಸರ್ಕಾರ ದಿವಾಳಿ ಆಗುತ್ತದೆ. ಆರು ತಿಂಗಳ ನಂತರ ಗ್ಯಾರಂಟಿ ಯೋಜನೆ ಬಂದ್ ಆಗುತ್ತವೆ ಎಂದು ಪ್ರಧಾನಿ ಮೋದಿ ಲೇವಡಿ ಮಾಡಿದ್ದರು. ಆದರೆ, ನಾವು ದಿವಾಳಿ ಆಗಿಲ್ಲ, ಬದಲಿಗೆ ರಾಷ್ಟ್ರದಲ್ಲಿ ತಲಾ ಆದಾಯದಲ್ಲಿ ನ.1 ಆಗಿದ್ದೇವೆ. ಟ್ಯಾಕ್ಸ್ ಸಂಗ್ರಹದಲ್ಲಿ ಮಹಾರಾಷ್ಟ್ರ ಬಿಟ್ಟರೆ, ಕರ್ನಾಟಕವೇ ಇದೆ. ಹಾಗಾಗಿ ಬಡವರಿಗೆ ಉಚಿತ ಗ್ಯಾರಂಟಿಗಳನ್ನು ನೀಡಿದರೆ ದೇಶ ಹಾಳಾಗುವುದಿಲ್ಲ. ಬಸ್ಸಿನಂತೆ ರೈಲಿನಲ್ಲೂ ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆಯನ್ನು ಕೇಂದ್ರ ಸರ್ಕಾರ ಈ ಬಜೆಟ್‌ನಲ್ಲಿ ಘೋಷಿಸಬೇಕು ಎಂದು ರಾಯರಡ್ಡಿ ಆಗ್ರಹಿಸಿದರು.
ಗಾಂಧೀಜಿಗೆ ಮೋದಿ ಅಪಚಾರ:ಕೇಂದ್ರ ಬಿಜೆಪಿ ಸರ್ಕಾರ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಹೆಸರನ್ನು ಬದಲಾವಣೆ ಮಾಡಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಗೆ ದೊಡ್ಡ ಅಪಚಾರ ಮಾಡಿದ್ದಾರೆ ಎಂದು ಅವರು ಕಿಡಿಕಾರಿದರು.ಮಹಾತ್ಮ ಗಾಂಧೀಜಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು. ಸ್ವಾತಂತ್ರ್ಯಕ್ಕಾಗಿ ಜೈಲು ವಾಸ ಸಹ ಅನುಭವಿಸಿದ್ದಾರೆ. ಅವರ ಹೆಸರಿನಲ್ಲಿ ಇದ್ದ ಈ ಯೋಜನೆಯ ಹೆಸರು ಬದಲಿಸಲಾಗಿದೆ. ಅಲ್ಲದೆ ಗ್ರಾಪಂನ ಹಕ್ಕು ಕಿತ್ತುಕೊಳ್ಳಲಾಗಿದೆ ಎಂದು ದೂರಿದರು.
ಕೃಷ್ಣೆಗೆ ₹25 ಸಾವಿರ ಕೋಟಿ: ಈ ಸಲದ ರಾಜ್ಯದ ಬಜೆಟಿನಲ್ಲಿ ಕೃಷ್ಣ ಮೇಲ್ದಂಡೆ ಯೋಜನೆಗೆ ₹25 ಸಾವಿರ ಕೋಟಿ ಹಣ ಇರಿಸಲಾಗುವುದು ಎಂದ ಅವರು, ನೀರಾವರಿ ಟ್ರಿಬುನಲ್ ಕೇಸ್ ಇದೆ. ನಾಲ್ಕು ರಾಜ್ಯದ ಸಿಎಂಗಳನ್ನು ಕರೆದು ಪ್ರಧಾನಿ ನರೇಂದ್ರ ಮೋದಿ ಸಮಸ್ಯೆ ಬಗೆಹರಿಸಬೇಕು. ಯುಕೆಪಿ ಅನ್ನು ರಾಷ್ಟ್ರೀಯ ಯೋಜನೆ ಮಾಡಲು ಕಳೆದ ವಿಧಾನಸಭೆ ಕಲಾಪದಲ್ಲಿ ಠರಾವು ಮಾಡಿಸಲಾಗಿದೆ. ಆ ಯೋಜನೆ ಸಾಕಾರಕ್ಕೆ ₹2 ಲಕ್ಷ ಕೋಟಿ ಹಣ ಬೇಕಾಗುತ್ತದೆ ಎಂದರು ರಾಯರಡ್ಡಿ.ತಹಸೀಲ್ದಾರ ಬಸವರಾಜ ಬೆಣ್ಣೆ ಶಿರೂರು, ತಾಪಂ ಇಒ ಸಂತೋಷ ಬಿರಾದಾರ, ಡಿಡಿಪಿಯು ಜಗದೀಶ, ಬಿಇಒ ಅಶೋಕ, ಸಿಡಿಪಿಒ ಬೆಟದಪ್ಪ ಮಾಳೆಕೊಪ್ಪ, ಗ್ರಾಪಂ ಅಧ್ಯಕ್ಷೆ ಫರೀಧಾ ಬೇಗಂ, ಅಧಿಕಾರಿಗಳಾದ ರಾಜಶೇಖರ ಮಳಿಮಠ, ಮಲ್ಲಕಾರ್ಜುನ, ಮಂಜುನಾಥ ಮ್ಯಾಗಳಮನಿ, ಹನುಮಂತಗೌಡ ಚಂಡೂರು, ಅಶೋಕ ತೋಟದ, ಮಂಜುನಾಥ ಗಟ್ಟೆಪ್ಪನವರ್, ಹನುಮನಗೌಡ ಪಾಟೀಲ್, ಶಿವನಗೌಡ ದಾನರಡ್ಡಿ, ಸುಧೀರ ಕೊರ್ಲಹಳ್ಳಿ, ಬಸವರಾಜ ಹನುಮನಹಟ್ಟಿ, ಕೆರಿಬಸಪ್ಪ ನಿಡಗುಂದಿ, ಯಂಕಣ್ಣ ಯರಾಶಿ, ಅಮರೇಶ ತಲ್ಲೂರು, ಸಂಗಮೇಶ ಗುತ್ತಿ, ಸಾವಿತ್ರಿ ಗೊಲ್ಲರ, ಪ್ರೇಮಾ ನೋಟಗಾರ ಇತರರಿದ್ದರು.