ಕೊಪ್ಪಳ: ಪ್ರತಿ ಕ್ವಿಂಟಲ್‌ಗೆ ₹8500 ಯಂತೆ ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ನಗರದ ಜಿಲ್ಲಾಡಳಿತ ಭವನದ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿದರು.
ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಶರಣಪ್ಪ ದೊಡ್ಡಮನಿ ಮಾತನಾಡಿ, ರಾಜ್ಯ ಸರ್ಕಾರ ಜಿಲ್ಲೆಯಲ್ಲಿ ತೊಗರಿ ಖರೀದಿ ಕೇಂದ್ರ ಆರಂಭಿಸಿರುವುದು ಸ್ವಾಗತಾರ್ಹ. ಆದರೆ, ಈ ಬಾರಿ ಕೇಂದ್ರ ನಿಗದಿ ಮಾಡಿದ ಬೆಲೆಗೆ ಮಾತ್ರ ತೊಗರಿ ಖರೀದಿ ಮಾಡುತ್ತಿದೆ. ರಾಜ್ಯ ಸರ್ಕಾರ ಈ ಹಿಂದಿನ ವರ್ಷ ನೀಡಿದಂತೆ ತನ್ನ ಪಾಲಿನ ಬೆಂಬಲ ಬೆಲೆ ನೀಡುತ್ತಿಲ್ಲ. ಇದು ಅತ್ಯಂತ ಖಂಡನೀಯ. ಈಗಾಗಲೇ ತೊಗರಿ ಖರೀದಿಗೆ ನೋಂದಣಿ ಪ್ರಕ್ರಿಯೆ ಪ್ರಾರಂಭಿಸಲಾಗಿದ್ದು ಕೇಂದ್ರ ಸರ್ಕಾರ ನಿಗದಿಪಡಿಸಿರುವಂತೆ ಪ್ರತಿ ಕ್ವಿಂಟಲ್ ಗೆ ಕೇವಲ ₹8000ಯಂತೆ ಖರೀದಿ ಪ್ರಕ್ರಿಯೆ ನಡೆದಿದೆ. ಕೂಡಲೇ ಜಿಲ್ಲಾಡಳಿತ ತೊಗರಿ ಖರೀದಿ ಪ್ರಕ್ರಿಯೆ ನಿಲ್ಲಿಸಿ ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡಬೇಕು. ರಾಜ್ಯದ ಪಾಲಿನ ಪ್ರೋತ್ಸಾಹ ಧನ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.
ಸಂಘಟನೆಯ ಕಲಬುರಗಿ ವಿಭಾಗೀಯ ಅಧ್ಯಕ್ಷ ಪಂಪಣ್ಣ ನಾಯಕ ಮಾತನಾಡಿ, ಕಳೆದ ವರ್ಷ ಕೇಂದ್ರ ಸರ್ಕಾರ ಪ್ರತಿ ಕ್ವಿಂಟಲ್ ತೊಗರಿಗೆ ₹7550 ನಿಗದಿ ಮಾಡಿತ್ತು. ಇದಕ್ಕೆ ರಾಜ್ಯ ಸರ್ಕಾರ ₹450 ಸೇರಿಸಿ ಒಟ್ಟು 8 ಸಾವಿರಗೆ ಕ್ವಿಂಟಲ್ ನಂತೆ ತೊಗರಿ ಖರೀದಿ ಮಾಡಿತ್ತು. ಅದರಂತೆ ಈ ಬಾರಿಯೂ ಕೂಡ ಕೇಂದ್ರ ಸರ್ಕಾರ ನಿಗದಿ ಮಾಡಿದ ₹೮ ಸಾವಿರ ಜತೆಗೆ ರಾಜ್ಯ ಸರ್ಕಾರ ₹500 ಸೇರಿಸಿ ಕನಿಷ್ಠ ₹8500ಗೆ ಕ್ವಿಂಟಲ್ ನಂತೆ ಖರೀದಿ ಮಾಡಬೇಕು ಎಂದು ಆಗ್ರಹಿಸಿದರು.ಸಂಘಟನೆ ಜಿಲ್ಲಾ ಉಪಾಧ್ಯಕ್ಷ ಬಾಲನಗೌಡ, ಕನಕಗಿರಿ ತಾಲೂಕಾಧ್ಯಕ್ಷ ವಿರುಪಣ್ಣ ಕಂಬಳಿ, ಕುಷ್ಟಗಿ ತಾಲೂಕಾಧ್ಯಕ್ಷ ಆದೇಶ ತಾವರಗೇರಾ, ವಕೀಲ ಸುರೇಶ ತಾವರಗೇರ, ಸುರೇಶ ಕಲ್ಲಳ್ಳಿ, ಅಂಬೇಡ್ಕರ್ ಸೇವಾ ಸಮಿತಿ ತಾಲೂಕಾಧ್ಯಕ್ಷ ಸುರೇಶ ನಾಯಕ, ಜಗದೀಶ ಗದ್ದಿ, ರಾಮಣ್ಣ ಕನ್ನಾಳ, ಬಾಲಪ್ಪ ಗದ್ದಿ, ಬಳ್ಳಾರಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ ಕಂಪ್ಲಿ, ಕನಕಪ್ಪ ತಳವಾರ್ ಉಡಮಕಲ್ಲ, ನಾಗನಗೌಡ ಲಿಂಗದಳ್ಳಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. .