ಕನ್ನಡಪ್ರಭ ವಾರ್ತೆ ಕಾರವಾರ
ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ಅರಗಾ ಗ್ರಾಮದ ಬಳಿ ಸೋಮವಾರ ಮಧ್ಯಾಹ್ನ ಕಂಟೈನರ್ ಚಾಲಕನ ಬೇಜವಾಬ್ದಾರಿತನಕ್ಕೆ ಎಂಟು ವರ್ಷದ ಮಗುವೊಂದು ಬಲಿಯಾದ ದಾರುಣ ಘಟನೆ ನಡೆದಿದೆ. ಕಂಟೈನರ್ ಚಾಲಕ ಕಂಟೈನರ್ ಅನ್ನು ಮಹಾರಾಷ್ಟ್ರ ಮೂಲದ ಕಾರಿನ ಮೇಲೆ ಹರಿಸಿದ ಪರಿಣಾಮ ಕಾರಿನ ಚಾಲಕ ಸೇರಿ ನಾಲ್ವರು ಪ್ರಯಾಣಿಕರಿಗೆ ಗಾಯಗಳಾಗಿವೆ.ಮಹಾರಾಷ್ಟ್ರದ ಕೃಷಿನಗರ ಸಂಗಮಚೌಕ್ ನಿವಾಸಿ ವಿಯಾನ ಪ್ರಕಾಶ ವಾಗ್ (8) ಮೃತ ಬಾಲಕ. ಅಪಘಾತದಲ್ಲಿ ಬಾಲಕನ ತಂದೆ ಪ್ರಕಾಶ ವಾಗ್ (48), ತಾಯಿ ಅಮೃತ ವಾಗ್ (38) ಹಾಗೂ ಅಕ್ಕ ಭೂಮಿಕಾ (16) ಅವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಕಾರವಾರ ಜಿಲ್ಲಾಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕಂಟೈನರ್ ಅಪ್ಪಳಿಸಿದ ರಭಸಕ್ಕೆ ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದ್ದು, ಸ್ಥಳೀಯರನ್ನ ಬೆಚ್ಚಿ ಬೀಳಿಸಿದೆ.ಅಪಘಾತ ಸಂಭವಿಸಿದ ಕೂಡಲೇ ಸ್ಥಳೀಯರು ಹಾಗೂ ಪೊಲೀಸರು ಕಾರ್ಯಾಚರಣೆ ನಡೆಸಿ ಕಂಟೈನರ್ ಅಡಿಯಲ್ಲಿ ಸಿಲುಕಿದ್ದವರನ್ನು ಹೊರತೆಗೆದರು. ಕೃತ್ಯ ಎಸಗಿದ ಬಳಿಕ ಪರಾರಿಯಾಗಲು ಯತ್ನಿಸಿದ ಕಂಟೈನರ್ ಚಾಲಕನನ್ನು ಕಾರವಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಘಟನೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ 66ರ ಬಿಣಗಾ–ಅರಗಾ ಘಟ್ಟದ ಮಧ್ಯೆ ಕೆಲಕಾಲ ವಾಹನ ಸಂಚಾರ ಸ್ಥಗಿತಗೊಂಡು ಕಿಮೀಗಟ್ಟಲೆ ಸಂಚಾರ ದಟ್ಟಣೆ ಉಂಟಾಗಿತ್ತು.
ನಂತರ ಕ್ರೇನ್ ಮೂಲಕ ರಸ್ತೆಯ ಮೇಲಿದ್ದ ಕಂಟೈನರ್ ಹಾಗೂ ಜಜ್ಜಿದ ಕಾರನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಕಾರವಾರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅವಘಡ ಸಂಭವಿಸಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.ಖಾಸಗಿ ಬಸ್ ಪಲ್ಟಿಯಾಗಿ 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ
ಖಾಸಗಿ ಬಸ್ ಪಲ್ಟಿಯಾಗಿ ಸುಮಾರು 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡ ಘಟನೆ ಹೊನ್ನಾವರ ತಾಲೂಕಿನ ಅಳ್ಳಂಕಿ ಫ್ಯಾಕ್ಟರಿ ಕ್ರಾಸ್ ಸಮೀಪ ರಾಷ್ಟ್ರೀಯ ಹೆದ್ದಾರಿ 69ರಲ್ಲಿ ನಡೆದಿದೆ.ಭಾನುವಾರ ತಡರಾತ್ರಿ ಹೊನ್ನಾವರದಿಂದ ಸಾಗರ ಮೂಲಕ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ಅಳ್ಳಂಕಿಯ ಸಮೀಪದ ತಿರುವಿನಲ್ಲಿ ರಾತ್ರಿ 11.30ರ ಸುಮಾರಿಗೆ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಬಸ್ ಚಾಲಕ ಗಿರೀಶ್ ನಾಯ್ಕ (35) ಅತೀವೇಗ ಮತ್ತು ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿದ್ದೇ ಅಪಘಾತಕ್ಕೆ ಕಾರಣ ಎಂದು ಆರೋಪಿಸಲಾಗಿದೆ.
ಅಪಘಾತದಲ್ಲಿ ಗುಂಡಬಾಳದ ಸುರೇಶ್ ಗೌಡ (36), ಆಶಾ ಸುರೇಶ್ ಗೌಡ (31) ಹಾಗೂ ಎರಡು ವರ್ಷದ ಭೂಮಿ ಸೇರಿದಂತೆ ಮೂವರಿಗೆ ಗಂಭೀರ ಗಾಯಗಳಾಗಿವೆ.ಜೊತೆಗೆ ನರಸಿಂಹ ಕ್ಷೇತ್ರ ಗೌಡ, ಶ್ರೀಯಾನ್ ಸುರೇಶ್ ಗೌಡ, ಮಹಮ್ಮದ್ ಇನಾಮ್, ಉಮಾ ಮೇಸ್ತ, ಸುಚಿತ್ರಾ ನಾಯ್ಕ, ಪ್ರವೀಣ ನಾಯ್ಕ, ಜೋಯಿಸ್ ರಾಕಿ ರೊಡ್ರಿಗ್ಸ್, ಪ್ರಿಯಾಂಕ ವೆರ್ಣೇಕರ, ಪೂಜಾ ನಾಯ್ಕ, ಗಾಯತ್ರಿ ಗೌಡ, ಸುರೇಶ್ ನಾಯ್ಕ, ನಿವೇದಿತಾ ನಾಯ್ಕ, ಸೌಮ್ಯ ಹೆಗಡೆ, ಅನ್ನಪೂರ್ಣಾ ಖಾರ್ವಿ, ಸಂದ್ಯಾ ಹೆಗಡೆ, ಮನೋಜ್ ಪಂಡಿತ್, ಸುಬ್ರಹ್ಮಣ್ಯ ಆಚಾರಿ ಸೇರಿದಂತೆ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಗಾಯಾಳುಗಳನ್ನು ಹೊನ್ನಾವರ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಅಲ್ಲದೆ ಹೆಚ್ಚಿನ ಗಾಯಗಳಾದ ಪ್ರಯಾಣಿಕರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ಕಳುಹಿಸಲಾಗಿದೆ.ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.