‘ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಮತ್ತು ರಾಜ್ಯಮಟ್ಟದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ವಿದ್ಯಾರ್ಥಿಗಳು ಉನ್ನತ ಹುದ್ದೆಗಳ ಕನಸನ್ನು ಈಡೇರಿಸಿಕೊಳ್ಳಲು ಸತತ ಪರಿಶ್ರಮ ಹಾಗೂ ಸಮಗ್ರವಾದ ಅಧ್ಯಯನ ನಡೆಸುವುದು ಅತ್ಯವಶ್ಯಕ ಎಂದು ಇಸ್ರೋ ನಿವೃತ್ತ ವಿಜ್ಞಾನಿ ಶ್ರೀನಿವಾಸ್ ಹೇಳಿದರು.ಕದ್ರಿಮಿದ್ರಿಯ ಕುವೆಂಪು ವಿದ್ಯಾನಿಕೇತನ ಶಾಲೆಯಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ‘ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಮತ್ತು ರಾಜ್ಯಮಟ್ಟದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆ’ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿ ಕಲಿಕೆ ವಯಸ್ಸಿನಲ್ಲಿ ಓದುವುದನ್ನು ಬಿಟ್ಟು ಬೇರೆಡೆ ಹೆಚ್ಚು ತಲೆ ಕೆಡಿಸಿಕೊಳ್ಳ ಬಾರದು. ಹೊಸ ಸಂಶೋಧನೆಗಳು ಮನುಷ್ಯನ ಜೀವನವನ್ನು ಮತ್ತಷ್ಟು ಸುಗಮ ಗೊಳಿಸಲಿದೆ. ಆ ಕಡೆ ಹೆಚ್ಚು ಮುತುರ್ವಜಿ ವಹಿಸಿ ಎಂದರು.ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ರಾಜ್ಯ ಕಾರ್ಯದರ್ಶಿ ಈ. ಬಸವರಾಜು ಮಾತನಾಡಿ, ಕಳೆದು 7 ವರ್ಷಗಳಿಂದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ರಾಜ್ಯಮಟ್ಟದ ಸಿ.ವಿ. ರಾಮನ್ ವಿಜ್ಞಾನ ರಸಪ್ರಶ್ನೆ ಸ್ಫರ್ಧೆ ನಡೆಸಲಾಗುತ್ತಿದೆ. ಇದು ವಿದ್ಯಾರ್ಥಿಗಳಲ್ಲಿ ವಿಜ್ಞಾನ ಕಲಿಕೆಯೆಡೆಗೆ ಆಸಕ್ತಿ ಹಾಗೂ ವೈಜ್ಞಾನಿಕ ಮನೋಭಾವ ಬೆಳೆಸಲು ಸಾಧ್ಯ ಎಂದರು.ಯುದ್ಧ ರಹಿತ ವಿಶ್ವದ ಬಯಕೆ, ಜನಸ್ನೇಹಿ ವಿಜ್ಞಾನ ತಂತ್ರಜ್ಞಾನಕ್ಕೆ ಒತ್ತಾಯಿಸಲು ವಿಜ್ಞಾನ ಸಂಘಟನೆ ಹುಟ್ಟಿಕೊಂಡಿವೆ, ಆದರೆ ವಿಶ್ವದಲ್ಲಿ ಯುದ್ಧದ ಕಾರ್ಮೋಡ ಕವಿದಿದೆ, ಇದುಜೀವ ವಿರೋಧಿ. ಪೋಷಕರು, ಶಿಕ್ಷಕರು ವಿದ್ಯಾರ್ಥಿಗಳನ್ನು ವಿಜ್ಞಾನದ ಕಾರ್ಯಕ್ರಮದಲ್ಲಿ ಭಾಗ ವಹಿಸಲು ಪ್ರೋತ್ಸಾಹಿಸಬೇಕು ಎಂದರು.ಪರಿಸರ ಮೌಲ್ಯಮಾಪನ ಸಮಿತಿ ಅಧ್ಯಕ್ಷ ಎ.ಎನ್. ಮಹೇಶ್ ಮಾತನಾಡಿದರು. ರಾಜ್ಯ ಮಟ್ಟದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆ ಯಲ್ಲಿ ಮೊದಲ ಬಹುಮಾನ ಪಡೆದ ಗದಗಜಿಲ್ಲೆ ವಿದ್ಯಾರ್ಥಿ ಅಣ್ಣಯ್ಯ ಭೀಮಪ್ಪಕಂಬ್ಳಿಗೆ ₹10 ಸಾವಿರ ಮತ್ತು ದ್ವಿತೀಯ ಬಹುಮಾನ ಪಡೆದ ಉಡುಪಿ ಜಿಲ್ಲೆಯ ಅಸ್ಮಿತಾ ಪ್ರಭು.ಟಿಗೆ ₹8 ಸಾವಿರ ತೃತೀಯ ಬಹುಮಾನ ಹಂಚಿಕೊಂಡ ಹಾಸನ ಜಿಲ್ಲೆಯ ರೇವಂತ್ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಎನ್.ಎಂ.ಚಿರಂಕ ರಿಗೆ ತಲಾ ₹3 ಸಾವಿರ ರು. ನಗದು, ಸಮಾಧಾನಕರ ಬಹುಮಾನ ಪಡೆದ ಚಿಕ್ಕಮಗಳೂರು ಜಿಲ್ಲೆ ಎಂ.ಡಿ.ಪಲ್ಲವಿಗೆ ₹1 ಸಾವಿರ ನಗದು ಮತ್ತು ಫಲಕ ನೀಡಿ ಸನ್ಮಾನಿಸಲಾಯಿತು.ವಿಜ್ಞಾನ ಸಮಿತಿ ಕಾರ್ಯಾಧ್ಯಕ್ಷ ಡಾ.ಆರ್.ಎನ್.ರಾಜಾನಾಯಕ್, ಚಿಕ್ಕಮಗಳೂರು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಉಪನ್ಯಾಸಕಿ ಭಾಗ್ಯಾಬಾಯಿ, ಜೆವಿಎಸ್ ಕಾರ್ಯಕಾರಿ ಸಮಿತಿ ಸದಸ್ಯ ಗಿರಿ, ಸಿದ್ದರಾಮರೆಡ್ಡಿ, ಸಮಿತಿ ಸದಸ್ಯರಾದ ಕೆ.ಎಂ.ರೆಡ್ಡಪ್ಪ, ಎಸ್.ಎಂ.ಲೋಕೇಶ್ವರಪ್ಪ, ಕಾವ್ಯ, ಚಿಕ್ಕ ಮಗಳೂರು ಜಿಲ್ಲಾ ಕಾರ್ಯದರ್ಶಿ ಹೊನ್ನೇಗೌಡ, ಜಿಲ್ಲಾಧ್ಯಕ್ಷ ಮುಗಳೀಕಟ್ಟೆ ಲೋಕೇಶ್, ಮೂಡಿಗೆರೆ ಶಾಂತಕುಮಾರ್ , ಪ್ರಾಂಶುಪಾಲ ರಾಘವೇಂದ್ರ ಉಪಸ್ಥಿತರಿದ್ದರು.

- ಫೋಟೋ

ಚಿಕ್ಕಮಗಳೂರು ತಾಲೂಕಿನ ಕದ್ರಿಮಿದ್ರಿ ಕುವೆಂಪು ವಿದ್ಯಾನಿಕೇತನದಲ್ಲಿ ನಡೆದ‘ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಲ್ಲಿ ರಾಜ್ಯಮಟ್ಟದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆ’ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಇಸ್ರೋ ನಿವೃತ್ತ ವಿಜ್ಞಾನಿ ಶ್ರೀನಿವಾಸ್, ಜ್ಞಾನ ವಿಜ್ಞಾನ ಸಮಿತಿ ರಾಜ್ಯ ಕಾರ್ಯದರ್ಶಿ ಈ.ಬಸವರಾಜು ಸೇರಿದಂತೆ ಮೊದಲಾದವರಿದ್ದರು.