ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಮಂಡ್ಯ, ಚಾಮರಾಜನಗರ, ಹೊಳೆನರಸೀಪುರದಿಂದ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ತುರ್ತು ಸೇವೆಗಳ ಅನುಕೂಲಕ್ಕಾಗಿ ಆಸ್ಪತ್ರೆಯಲ್ಲಿ 100 ಹಾಸಿಗೆವುಳ್ಳ ಐಸಿಯು ಘಟಕ ಮಂಜೂರು ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಕೆ. ಶಿವಕುಮಾರ್ ಕೋರಿದರು.ವಿಧಾನ ಪರಿಷತ್ತಿನ ಅಧಿವೇಶನದಲ್ಲಿ ಚುಕ್ಕೆ ಗುರುತಿನ ಪ್ರಶ್ನೆ ಉತ್ತರ ಪಡೆದು ಮಾತನಾಡಿದ ಅವರು, ಕೆ.ಆರ್. ಆಸ್ಪತ್ರೆಯಲ್ಲಿ 37 ವಿಭಾಗಗಳು ಕಾರ್ಯನಿರ್ವಹಿಸುತ್ತಿದ್ದು, ಡಯಾಲಿಸಿಸ್ ಸೇವೆಗೆ ತಂತ್ರಜ್ಞರ ಕೊರತೆ ಇದೆ. ಖಾಲಿ ಇರುವ 117 ಹುದ್ದೆಗಳನ್ನು ಭರ್ತಿ ಮಾಡಿ, ಚಿಕಿತ್ಸೆಗಾಗಿ ಬರುವ ರೋಗಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಕೆ.ಆರ್.ಆಸ್ಪತ್ರೆಯ ಐ.ಸಿ.ಯು ಘಟಕದಲ್ಲಿ 50 ಹಾಸಿಗೆ ಮಾತ್ರ ಲಭ್ಯವಿದ್ದು, ತುರ್ತು ಚಿಕಿತ್ಸೆಗಾಗಿ ರೋಗಿಗಳು ಪರದಾಡುವಂತಾಗಿದೆ. ಚಲುವಾಂಬ ತಾಯಿ ಮಕ್ಕಳ ಆಸ್ಪತ್ರೆಯಲ್ಲಿಯೂ ಹಾಸಿಗೆಗಳ ಕೊರತೆ ಇದ್ದು, ಒಂದು ಹಾಸಿಗೆಯಲ್ಲಿ ಎರಡು ಮಕ್ಕಳನ್ನು ಮಲಗಿಸುತ್ತಿದ್ದಾರೆ. ಶಿಶು ಮರಣ ಪ್ರಮಾಣ ಶೇ. 11.3 ರಷ್ಟಿದ್ದು, ಕೂಡಲೇ ಎರಡು ಆಸ್ಪತ್ರೆಯಲ್ಲೂ 100 ಹಾಸಿಗೆಯ ಐಸಿಯು ಘಟಕ ಸ್ಥಾಪಿಸಬೇಕು ಎಂದರು.ಟ್ರಾಮಾ ಕೇರ್ ಸೆಂಟರ್ ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿ ಒಪಿಡಿ ಸೇವೆ ಮಾತ್ರ ಚಾಲ್ತಿಯಲ್ಲಿದೆ. ಇವು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ಕ್ರಮವಹಿಸಬೇಕು. ಕೆ.ಆರ್. ಆಸ್ಪತ್ರೆಯಿಂದ 5 ಕಿ.ಮೀ. ದೂರದಲ್ಲಿನ ಈ ಆಸ್ಪತ್ರೆಗೆ ರೋಗಿಗಳನ್ನು ಸಾಗಿಸಲು ಕಷ್ಟವಾಗುತ್ತಿದೆ. ವಿಕ್ಟೋರಿಯಾ ಆಸ್ಪತ್ರೆಯಂತೆ ಒಂದೇ ಆವರಣದಲ್ಲಿ ಕಟ್ಟಡ ನಿರ್ಮಿಸಿಬೇಕು. ಇದಕ್ಕಾಗಿ ಎಂಎಂಸಿ ಮತ್ತು ಆರ್.ಐ ನಲ್ಲಿ ಸಾಕಷ್ಟು ಜಾಗ ಲಭ್ಯವಿದೆ. ಈ ಕ್ರಮದಿಂದಾಗಿ ತುರ್ತು ಚಿಕಿತ್ಸೆ ನೀಡಲು ಅನುಕೂಲವಾಗಲಿದೆ ಎಂದರು.
ಆಸ್ಪತ್ರೆಗೆ ಮತ್ತಷ್ಟು ಮೂಲಭೂತ ಸೌಕರ್ಯ ಕಲ್ಪಿಸಿಕೊಡಬೇಕು. ಇಲ್ಲಿ ಪರಿಣಿತ ವೈದ್ಯರಿದ್ದಾರೆ. ಆದರೆ ನರ್ಸ್‌ಗಳ ಕೊರತೆಯಿದ್ದು, ಹೊರಗುತ್ತಿಗೆಯಿಂದ ಪಡೆಯುವ ಸೇವೆಯಲ್ಲಿ ವ್ಯತ್ಯಾಸವಾಗುತ್ತಿದೆ ಎಂದರು.
ಈ ಕುರಿತು ಪ್ರತಿಕ್ರಿಯಿಸಿದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಆರ್. ಪಾಟೀಲ್ ಅವರು, ಶೀಘ್ರದಲ್ಲೇ ಇನ್ಸಿಟ್ಯೂಟ್ ಆಫ್ ನೆಫ್ರಾಲಜಿ 100 ಹಾಸಿಗೆವುಳ್ಳ ಶಾಖೆ ನಿರ್ಮಾಣ ಮಾಡಲಾಗುತ್ತಿದೆ. ಒಳ ಮೀಸಲಾತಿ ನಿವಾರಣೆ ಕುರಿತು ಸಚಿವ ಸಂಪುಟದಲ್ಲಿ ಚರ್ಚಸಿ ತೀರ್ಮಾನ ಕೈಗೊಳ್ಳಲಾಗಿದೆ. ಖಾಲಿ ಇರುವ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಲಾಗುವುದು. ಅಲ್ಲದೆ, 100 ಹಾಸಿಗೆವುಳ್ಳ ಐ.ಸಿ.ಯು ಘಟಕ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.