ಅವಧಿಗೂ ಮುನ್ನವೇ ವಾಡಿಕೆಗಿಂತಲೂ ಹೆಚ್ಚು ಮಳೆ

KannadaprabhaNewsNetwork |  
Published : Jun 04, 2025, 12:57 AM IST
3ಕೆಎಂಎನ್ ಡಿ25,26 | Kannada Prabha

ಸಾರಾಂಶ

ಈ ಬಾರಿ ಅವಧಿಗೂ ಮುನ್ನವೇ ವಾಡಿಕೆಗಿಂತಲೂ ಹೆಚ್ಚು ಪ್ರಮಾಣದಲ್ಲಿ ಪೂರ್ವ ಮುಂಗಾರು ಮತ್ತು ಮುಂಗಾರು ಮಳೆಯಾಗಿರುವುದರಿಂದ ಕಳೆದ ಮೇ 23ರಂದು ಹೇಮಾವತಿ ಜಲಾಶಯದಿಂದ ನಾಲೆಗಳ ಮೂಲಕ ಹರಿದು ಬಂದ ನೀರು ಮೇ 26ರ ಬೆಳಗ್ಗೆ ತಾಲೂಕಿನ ಗಡಿಭಾಗ ಪ್ರವೇಶಿಸಿ ಹಲವು ಕೆರೆ ಕಟ್ಟೆಗಳತ್ತ ಮುಖ ಮಾಡಿ ಹರಿಯುತ್ತಿದೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಪ್ರತಿ ವರ್ಷ ಜುಲೈ ಅಂತ್ಯ ಅಥವಾ ಆಗಸ್ಟ್ ಮೊದಲ ವಾರದಲ್ಲಿ ತಾಲೂಕಿಗೆ ಹರಿದು ಬರುತ್ತಿದ್ದ ಹೇಮಾವತಿ ಜಲಾಶಯದ ನೀರು ಇದೇ ಮೊದಲ ಬಾರಿಗೆ ಎರಡು ತಿಂಗಳ ಮುಂಚಿತವಾಗಿಯೇ ತಾಲೂಕಿನ ಕೆರೆ ಕಟ್ಟೆಗಳಿಗೆ ಮೈದುಂಬಿ ಹರಿಯಲಾರಂಭಿಸಿದೆ.

ಈ ಬಾರಿ ಅವಧಿಗೂ ಮುನ್ನವೇ ವಾಡಿಕೆಗಿಂತಲೂ ಹೆಚ್ಚು ಪ್ರಮಾಣದಲ್ಲಿ ಪೂರ್ವ ಮುಂಗಾರು ಮತ್ತು ಮುಂಗಾರು ಮಳೆಯಾಗಿರುವುದರಿಂದ ಕಳೆದ ಮೇ 23ರಂದು ಹೇಮಾವತಿ ಜಲಾಶಯದಿಂದ ನಾಲೆಗಳ ಮೂಲಕ ಹರಿದು ಬಂದ ನೀರು ಮೇ 26ರ ಬೆಳಗ್ಗೆ ತಾಲೂಕಿನ ಗಡಿಭಾಗ ಪ್ರವೇಶಿಸಿ ಹಲವು ಕೆರೆ ಕಟ್ಟೆಗಳತ್ತ ಮುಖ ಮಾಡಿ ಹರಿಯುತ್ತಿದೆ.

ನಾಗಮಂಗಲ ವಿಭಾಗದ ಹೇಮಾವತಿ ವ್ಯಾಪ್ತಿಗೆ ಸೇರುವ 62 ಕೆರೆಗಳಲ್ಲಿ ಈಗಾಗಲೇ ಶೇ.50ರಷ್ಟು ನೀರು ಸಂಗ್ರಹವಾಗಿದೆ. 174 ಕ್ಯುಸೆಕ್ ನಷ್ಟು ನೀರು ನಾಲೆಗಳಲ್ಲಿ ಹರಿಯುತ್ತಿರುವುದರಿಂದ ಈ ಬಾರಿಯೂ ಸಹ ಎಲ್ಲಾ ಕೆರೆ ಕಟ್ಟೆಗಳು ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ತಾಲೂಕಿನ ಎಲ್ಲ ಕೆರೆ ಕಟ್ಟೆಗಳಿಗೆ ನೀರು ತುಂಬಿಸುವ ಮೂಲಕ ಅಂತರ್ಜಲ ಹೆಚ್ಚಿಸಿ ಜನ ಜಾನುವಾರುಗಳ ಕುಡಿವ ನೀರಿಗೆ ಯಾವುದೇ ಸಮಸ್ಯೆಯಾಗಬಾರೆಂಬ ಉದ್ದೇಶದಿಂದ ಹಾಸನ ಜಿಲ್ಲೆ ಗೊರೂರಿನಿಂದ ನಾಲೆಗಳ ಮೂಲಕ ಹರಿಬಿಟ್ಟಿರುವ ಹೇಮಾವತಿ ಜಲಾಶಯದ ನೀರು ಕಳೆದೊಂದು ವಾರದಿಂದ ತಾಲೂಕಿನ ಹಲವು ಕೆರೆ ಕಟ್ಟೆಗಳಿಗೆ ಹರಿಯುತ್ತಿದೆ.

ನಾಗಮಂಗಲ ಪಟ್ಟಣಕ್ಕೆ ಕುಡಿವ ನೀರು ಪೂರೈಸುವ ಕೆ.ಆರ್.ಪೇಟೆ ರಸ್ತೆಯ ಸೂಳೆಕೆರೆ ಸೇರಿದಂತೆ ಎಲ್ಲಾ ಕೆರೆಗಳನ್ನೂ ಸಹ ಪೂರ್ಣ ಪ್ರಮಾಣದಲ್ಲಿ ಭರ್ತಿ ಮಾಡುವ ಉದ್ದೇಶ ಹೊಂದಿರುವ ಇಲಾಖೆ ಅಧಿಕಾರಿಗಳು ನಾಲೆಗಳಲ್ಲಿ ಹರಿದು ಬರುತ್ತಿರುವ ನೀರನ್ನು ಬೆಳೆಗಳನ್ನು ಬೆಳೆಯಲು ಬಳಸಿಕೊಳ್ಳಬಾರೆಂದು ರೈತರಲ್ಲಿ ಮನವಿ ಮಾಡಿದ್ದಾರೆ.

ತಾಲೂಕಿನ ಆರಂಭದಲ್ಲಿ ಹೇಮಾವತಿ ವ್ಯಾಪ್ತಿಗೆ ಸೇರುವ ಮಲ್ಲೇಗೌಡನಹಳ್ಳಿ ಕೆರೆ ಮತ್ತು ಜಾರನಕಟ್ಟೆ ಭರ್ತಿಯಾಗುವ ಹಂತದಲ್ಲಿವೆ. ಇದಲ್ಲದೆ ಕೊನೆಭಾಗದ ಹಲವು ಕೆರೆಗಳಿಗೂ ಕೂಡ ನಾಲೆಗಳ ಮೂಲಕ ನೀರು ಹರಿಯುತ್ತಿರುವುದರಿಂದ ತಾಲೂಕಿನ ರೈತರ ಮುಖದಲ್ಲಿ ಸಂತಸ ಇಮ್ಮಡಿಯಾಗಿದೆ.

PREV

Recommended Stories

ದೊಡ್ಡೆತ್ತಿನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ₹6 ಲಕ್ಷ ಲಾಭ: ವಸಂತಕುಮಾರ್‌
ಕೃಷ್ಣಮೂರ್ತಿಪುರಂ ಅಭಿನವ ಮಂತ್ರಾಲಯದಲ್ಲಿ ರಾಯರ ಆರಾಧನೆ