ರಟ್ಟೀಹಳ್ಳಿ: ಸರ್ಕಾರದ ನಿಯಮದಂತೆ ಒಂದು ಕುಟುಂಬಕ್ಕೆ ನೂರು ದಿನ ನರೇಗಾ ಕೆಲಸ ನೀಡಬೇಕು ಎಂಬ ನಿಯಮವಿದ್ದರೂ ನಮಗೆ ಕೂಲಿ ಕೆಲಸ ನೀಡದೆ ಜಿಲ್ಲಾಡಳಿತ ಅನ್ಯಾಯ ಮಾಡುತ್ತಿದೆ ಎಂದು ಇಂಗಳಗೊಂದಿ ನೂರಾರು ಕೂಲಿ ಕಾರ್ಮಿಕರು ಹಾಗೂ ಕರ್ನಾಟಕ ವ್ಯವಸಾಯ ವೃತ್ತಿಪರ ಯುನಿಯನ್ ತಾಲೂಕು ಘಟಕದ ಸದಸ್ಯರು ತಾಲೂಕು ಪಂಚಾಯಿತಿ ಮುಂದೆ ಮಂಗಳವಾರ ದಿಢೀರ್ ಧರಣಿ ನಡೆಸಿದರು. ಈ ವೇಳೆ ಕರ್ನಾಟಕ ವ್ಯವಸಾಯ ವೃತ್ತಿಪರ ಯುನಿಯನ್ ಘಟಕದ ತಾಲೂಕಾಧ್ಯಕ್ಷ ಶೇಖಪ್ಪ ಶಿವಕ್ಕನವರ ಮಾತನಾಡಿ, ರಾಜ್ಯದ ಬಡ ಜನರು ಕೂಲಿ ಕೆಲಸವಿಲ್ಲದೆ ಯಾರು ಹಸಿವೆಯಿಂದ ಬಳಲಬಾರದು ಹಾಗೂ ಗುಳೆ ಹೋಗದಂತೆ ತಮ್ಮ ತಮ್ಮ ಊರುಗಳಲ್ಲೆ ಕೆಲಸ ನಿರ್ವಹಿಸಲು ನರೇಗಾ ಕಾಮಗಾರಿಯ ಯೋಜನೆ ಜಾರಿ ತಂದಿದ್ದು, ಅದರನ್ವಯ ಒಂದು ಕುಟುಂಬಕ್ಕೆ ನೂರು ದಿನ ಕೆಲಸ ನೀಡಬೇಕು ಎಂಬ ನಿಯಮವಿದ್ದರೂ ಜನಪ್ರತಿನಿಧಿಗಳಾಗಲಿ, ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳಾಗಲಿ, ತಾಲೂಕು ಪಂಚಾಯಿತಿ ಅಧಿಕಾರಿಗಳಾಗಲಿ, ಜಿಲ್ಲಾಡಳಿತವಾಗಲಿ ಯಾವೊಬ್ಬ ಅಧಿಕಾರಿಗಳು ನಮ್ಮ ಸಮಸ್ಯೆಗಳನ್ನು ಆಲಿಸದೇ ನಿರ್ಲಕ್ಷ್ಯವಹಿಸಿದೆ ಎಂದು ಆರೋಪಿಸಿದರು.ತಾಲೂಕು ಪಂಚಾಯಿತಿ ಇಒಗಳಿಗೆ ನರೇಗಾ ಕಾಮಗಾರಿಯ ಸಮಸ್ಯೆಗಳ ಬಗ್ಗೆ ಗಮನಕ್ಕೆ ತಂದರು ಕೂಲಿ ಕಾರ್ಮಿಕರ ಸಮಸ್ಯೆಗಳಿಗೆ ಪರಿಹಾರ ನೀಡದೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿರುವುದು ಅತ್ಯಂತ ನೋವಿನ ಸಂಗತಿ ಎಂದು ತಮ್ಮ ಅಳಲು ತೋಡಿಕೊಂಡರು.ಇದೇ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಮುಂದೆ ಜಮಾವಣೆಗೊಂಡ ನೂರಾರು ಕೂಲಿ ಕಾರ್ಮಿಕರು ಜಿಲ್ಲಾ ಪಂಚಾಯಿತಿ ಸಿಇಒ ಸ್ಥಳಕ್ಕೆ ಆಗಮಿಸುವಂತೆ ಪಟ್ಟು ಹಿಡಿದರು. ನಂತರ ರಟ್ಟೀಹಳ್ಳಿ ಪಿಎಸ್‍ಐ ರಮೇಶ ಪಿ.ಎಸ್. ಮಧ್ಯೆಪ್ರವೇಶಿಸಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ತಮ್ಮ ನ್ಯಾಯಸಮ್ಮತ ಹಕ್ಕು ಪಡೆಯಲು ಅವಕಾಶವಿದ್ದು, ಅದು ಕಾನೂನಿನ ಚೌಕಟ್ಟಿನಲ್ಲಿರಬೇಕು. ದಿಢೀರ್ ಪ್ರತಿಭಟನೆ ಹಮ್ಮಿಕೊಳ್ಳುವುದು ತಪ್ಪು. ನಿಮ್ಮ ಯಾವುದೇ ನ್ಯಾಯಸಮ್ಮತ ಹೋರಾಟದ ರೂಪುರೇಷೆಗಳಿದ್ದರೆ ಸ್ಥಳೀಯ ಪೊಲೀಸ್ ಇಲಾಖೆಯ ಪರವಾನಗಿ ಪಡೆದು ಪ್ರತಿಭಟನೆ ನಡೆಸಿ. ಸಂಪೂರ್ಣ ಬಂದೋಬಸ್ತ್ ಮಾಡಲಾಗುವುದು. ಹೀಗಾಗಿ ಪ್ರತಿಭಟನೆ ಕೈಬಿಡಿ ಎಂದು ಮನವಿ ಮಾಡಿದರು.