ಪಾಲಿಕೆ ಆಸ್ಪತ್ರೆಗಳನ್ನೆಲ್ಲ ಆರೋಗ್ಯ ಇಲಾಖೆಗೇ ಹಸ್ತಾಂತರಿಸಿ!

KannadaprabhaNewsNetwork |  
Published : Jun 04, 2025, 12:54 AM IST
ಹೆರಿಗೆ | Kannada Prabha

ಸಾರಾಂಶ

ಹೆರಿಗೆ ಆಸ್ಪತ್ರೆಯನ್ನು ನೆಲಸಮ ಮಾಡಿ ಅಲ್ಲಿ ದೊಡ್ಡ ಆಸ್ಪತ್ರೆ ನಿರ್ಮಿಸಲಾಗುತ್ತಿದೆ. ಈಗಾಗಲೇ ₹10 ಕೋಟಿ ಹಾಕಿದರೂ ಕಾಮಗಾರಿ ಅರ್ಧಕ್ಕೆ ನಿಂತಿದೆ. 100 ಬೆಡ್‌ಗಳ ದೊಡ್ಡ ಆಸ್ಪತ್ರೆ ಇದಾಗಲಿದೆ. ಈ ಆಸ್ಪತ್ರೆಯನ್ನು ಸಮರ್ಪಕವಾಗಿ ನಿರ್ವಹಿಸಬೇಕೆಂದರೆ ವೈದ್ಯರು, ದಾದಿಯರು ಸೇರಿ ಕನಿಷ್ಠ ಪಕ್ಷ 130 ಸಿಬ್ಬಂದಿ ಬೇಕಾಗುತ್ತದೆ. ಇದರ ನಿರ್ವಹಣೆಗೆ ವರ್ಷಕ್ಕೆ ₹8-10 ಕೋಟಿ ಬೇಕಾಗುತ್ತದೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ: ಹಳೇಹುಬ್ಬಳ್ಳಿ ಹೆರಿಗೆ ಆಸ್ಪತ್ರೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಹಸ್ತಾಂತರಿಸುವ ಕುರಿತು ಬಿಜೆಪಿ- ಕಾಂಗ್ರೆಸ್‌ ನಡುವೆ ಹಗ್ಗ ಜಗ್ಗಾಟ ನಡೆದಿರುವುದು ತಿಳಿದ ವಿಚಾರ. ಈ ನಡುವೆ ಪಾಲಿಕೆಯ ಎಲ್ಲ ಆಸ್ಪತ್ರೆಗಳನ್ನೂ ಆರೋಗ್ಯ ಇಲಾಖೆಗೇ ಹಸ್ತಾಂತರಿಸಿಬಿಡಿ. ಆಗ ಜನರಿಗೆ ತೆರಿಗೆಯಲ್ಲಿ ಹಾಕುತ್ತಿರುವ ಶೇ.15ರಷ್ಟು ಆರೋಗ್ಯ ಸೆಸ್‌ನ್ನಾದರೂ ತೆಗೆಯಬಹುದು ಎಂಬ ಕೂಗು ಪಾಲಿಕೆ ಆವರಣದಿಂದಲೇ ಕೇಳಿ ಬರುತ್ತಿದೆ.

ಹೆರಿಗೆ ಆಸ್ಪತ್ರೆಯನ್ನು ನೆಲಸಮ ಮಾಡಿ ಅಲ್ಲಿ ದೊಡ್ಡ ಆಸ್ಪತ್ರೆ ನಿರ್ಮಿಸಲಾಗುತ್ತಿದೆ. ಈಗಾಗಲೇ ₹10 ಕೋಟಿ ಹಾಕಿದರೂ ಕಾಮಗಾರಿ ಅರ್ಧಕ್ಕೆ ನಿಂತಿದೆ. 100 ಬೆಡ್‌ಗಳ ದೊಡ್ಡ ಆಸ್ಪತ್ರೆ ಇದಾಗಲಿದೆ. ಈ ಆಸ್ಪತ್ರೆಯನ್ನು ಸಮರ್ಪಕವಾಗಿ ನಿರ್ವಹಿಸಬೇಕೆಂದರೆ ವೈದ್ಯರು, ದಾದಿಯರು ಸೇರಿ ಕನಿಷ್ಠ ಪಕ್ಷ 130 ಸಿಬ್ಬಂದಿ ಬೇಕಾಗುತ್ತದೆ. ಇದರ ನಿರ್ವಹಣೆಗೆ ವರ್ಷಕ್ಕೆ ₹8-10 ಕೋಟಿ ಬೇಕಾಗುತ್ತದೆ. ಅರ್ಧಕ್ಕೆ ನಿಂತಿರುವ ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂದರೆ ಕನಿಷ್ಠವೆಂದರೂ ₹15 ಕೋಟಿಗೂ ಹೆಚ್ಚಿನ ಅನುದಾನ ಬೇಕಾಗುತ್ತದೆ. ಇದನ್ನು ನಿಭಾಯಿಸುವುದು ಪಾಲಿಕೆಗೆ ಆಗದ ಮಾತು. ಆದಕಾರಣ ಆರೋಗ್ಯ ಇಲಾಖೆಗೆ ನೀಡುವುದು ಉತ್ತಮ ಎಂಬುದು ಕಾಂಗ್ರೆಸ್‌ನ ಮಾತು. ಶಾಸಕ ಪ್ರಸಾದ ಅಬ್ಬಯ್ಯ ಕೂಡ ಇದನ್ನೇ ಹೇಳುತ್ತಾರೆ. ಇದು ನಿಜವೂ ಹೌದು. ಜತೆಗೆ ಈ ಭಾಗದಲ್ಲಿನ ಬಡಜನರಿಗೆ ಇದು ಕಾಮಧೇನುವಿನಂತೆ ಕಾರ್ಯನಿರ್ವಹಿಸುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಈ ಆಸ್ಪತ್ರೆ ಪ್ರಾರಂಭವಾದರೆ ಕೆಎಂಸಿಆರ್‌ಐನ ಒತ್ತಡವೂ ಕಡಿಮೆಯಾಗುತ್ತದೆ.

ಪಾಲಿಕೆ ಕರ್ತವ್ಯ ಏನು?: ಈ ನಡುವೆ ಹೆರಿಗೆ ಆಸ್ಪತ್ರೆಯನ್ನು ಆರೋಗ್ಯ ಇಲಾಖೆಗೆ ಹಸ್ತಾಂತರಿಸಲು ನಮ್ಮ ಅಭ್ಯಂತರವಿಲ್ಲ. ಆದರೆ, ಪಾಲಿಕೆಯ ಕರ್ತವ್ಯಗಳ ಪೈಕಿ ಆರೋಗ್ಯ ಒದಗಿಸುವುದು ಒಂದು. ಪ್ರತಿವರ್ಷ ತೆರಿಗೆಯಲ್ಲಿ ಆರೋಗ್ಯ ಸೆಸ್‌ ಎಂದು ಶೇ. 15ರಷ್ಟು ತೆಗೆದುಕೊಳ್ಳುತ್ತೇವೆ. ಕಳೆದ ವರ್ಷ ₹130 ಕೋಟಿ ತೆರಿಗೆ ಸಂಗ್ರಹವಾಗಿತ್ತು. ಅದರಲ್ಲಿ ₹19 ಕೋಟಿಗೂ ಅಧಿಕ ಹಣ ಆರೋಗ್ಯ ಸೆಸ್‌ನಿಂದಲೇ ಬಂದಿರುವುದು. ಆದರೆ, ಸೆಸ್‌ ಸಂಗ್ರಹಿಸಿದ ಮಟ್ಟಕ್ಕೆ ನಾವು ಸಾರ್ವಜನಿಕರಿಗೆ ಆರೋಗ್ಯ ಸೇವೆ ಒದಗಿಸಿದ್ದೇವೆಯೇ ಎಂಬ ಪ್ರಶ್ನೆ ಮಾಡಿಕೊಳ್ಳಬೇಕು ಎಂಬ ಮಾತು ಪಾಲಿಕೆಯ ಆಡಳಿತ ಪಕ್ಷದ ಸದಸ್ಯರ ಮಾತು.

ಪಾಲಿಕೆಯಲ್ಲಿ ಮೊದಲು 10 ಆಸ್ಪತ್ರೆಗಳಿದ್ದವು. ಅವುಗಳ ಪೈಕಿ 7 ಉಳಿದಿವೆ. ಈ 7ರಲ್ಲಿ 2 ಆಸ್ಪತ್ರೆಗಳನ್ನು ಆರೋಗ್ಯ ಇಲಾಖೆಯೇ (ನ್ಯಾಷನಲ್‌ ಅರ್ಬನ್‌ ಹೆಲ್ತ್‌ ಮಿಷನ್ ಯೋಜನೆಯಡಿ) ವಹಿಸಿಕೊಂಡು ನಿಭಾಯಿಸುತ್ತಿದೆ. ಇನ್ನು ಉಳಿದ 5ರಲ್ಲಿ ಧಾರವಾಡದಲ್ಲಿನ ಹೆರಿಗೆ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಕಡಿಮೆಯಾಗಿದೆ. ಇದೀಗ ಹಳೇಹುಬ್ಬಳ್ಳಿ ಹೆರಿಗೆ ಆಸ್ಪತ್ರೆಯನ್ನು ಆರೋಗ್ಯ ಇಲಾಖೆಗೆ ಹಸ್ತಾಂತರಿಸೋಣ ಎಂಬ ಆಗ್ರಹ ಕೇಳಿ ಬರುತ್ತಿದೆ. ಇದು ಹಸ್ತಾಂತರಿಸಿದರೆ ಉಳಿಯುವುದು ಚಿಟಗುಪ್ಪಿ ಸೇರಿದಂತೆ 4 ಆಸ್ಪತ್ರೆಗಳು ಮಾತ್ರ. ಅವುಗಳನ್ನು ಆರೋಗ್ಯ ಇಲಾಖೆಗೆ ಹಸ್ತಾಂತರಿಸೋಣ. ಇದರಿಂದ ಆರೋಗ್ಯ ಸೆಸ್‌ ತೆಗೆದುಕೊಳ್ಳುವುದನ್ನು ರದ್ದುಪಡಿಸಬಹುದು. ಇದು ಜನರಿಗೆ ಉಪಯೋಗವಾಗುತ್ತದೆ ಎಂಬ ಮಾತು ಕೂಡ ಬಿಜೆಪಿ ಸದಸ್ಯರದ್ದು.

ಒಟ್ಟಿನಲ್ಲಿ ಹಳೇಹುಬ್ಬಳ್ಳಿ ಹೆರಿಗೆ ಆಸ್ಪತ್ರೆ ಹಸ್ತಾಂತರದ ವಿಷಯದೊಂದಿಗೆ ಹತ್ತು ಹಲವು ವಿಷಯಗಳು ಚರ್ಚೆಗೆ ಬರುತ್ತಿರುವುದುಂತೂ ಸತ್ಯ. ಹಳೇಹುಬ್ಬಳ್ಳಿ ಹೆರಿಗೆ ಆಸ್ಪತ್ರೆ ಹಸ್ತಾಂತರದಲ್ಲಿ ಪಾಲಿಕೆ ಏನು ನಿರ್ಧಾರ ಕೈಗೊಳ್ಳುತ್ತದೆಯೋ ಕಾಯ್ದು ನೋಡಬೇಕಷ್ಟೇ.!

ಪಾಲಿಕೆಯಿಂದ ಪ್ರತಿವರ್ಷ ತೆರಿಗೆಯಲ್ಲಿ ಶೇ. 15ರಷ್ಟು ಆರೋಗ್ಯ ಸೆಸ್‌ ಹಾಕುತ್ತೇವೆ. ಪಾಲಿಕೆಯಿಂದ ಆಸ್ಪತ್ರೆಗೆ ನಿಭಾಯಿಸಲು ಆಗುತ್ತಿಲ್ಲವೆಂದರೆ ಪಾಲಿಕೆಯ ಎಲ್ಲ ಆಸ್ಪತ್ರೆಗಳನ್ನು ಆರೋಗ್ಯ ಇಲಾಖೆಗೆ ಹಸ್ತಾಂತರಿಸುವುದು ಸೂಕ್ತ. ಇದರಿಂದ ಸೆಸ್‌ ಹಾಕುವುದನ್ನು ಕೈಬಿಡಬಹುದು. ಸಾರ್ವಜನಿಕರಿಗೆ ತೆರಿಗೆಯಲ್ಲಿ ಕೊಂಚ ಕಡಿಮೆಯಾದರೂ ಆಗುತ್ತೆ ಎಂದು ಪಾಲಿಕೆ ಬಿಜೆಪಿ ಸದಸ್ಯ ಈರೇಶ ಅಂಚಟಗೇರಿ ಹೇಳಿದರು.ಸದ್ಯಕ್ಕಂತೂ ಹಳೇಹುಬ್ಬಳ್ಳಿ ಹೆರಿಗೆ ಆಸ್ಪತ್ರೆಯನ್ನು ಆರೋಗ್ಯ ಇಲಾಖೆ ಕೇಳಿದೆ. ಹಸ್ತಾಂತರಿಸುವುದು ಸೂಕ್ತ. ಉಳಿದ ಆಸ್ಪತ್ರೆಗಳನ್ನು ಆರೋಗ್ಯ ಇಲಾಖೆ ಕೇಳಿದರೆ ಆಗ ಯೋಚನೆ ಮಾಡಬಹುದು. ಸದ್ಯಕ್ಕೆ ಹಳೇಹುಬ್ಬಳ್ಳಿ ಹೆರಿಗೆ ಆಸ್ಪತ್ರೆ ಬಗ್ಗೆಯಷ್ಟೇ ನಿರ್ಧರಿಸಬೇಕಿದೆ ಎಂದು ಪಾಲಿಕೆ ವಿರೋಧ ಪಕ್ಷದ ನಾಯಕ ರಾಜಶೇಖರ ಕಮತಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''