ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಜುಲೈ ತಿಂಗಳಿನಲ್ಲಿ ವಾಡಿಕೆ ಮಳೆಗಿಂತ ಶೇ. 81ರಷ್ಟು ಅತ್ಯಧಿಕ ಮಳೆಯಾಗಿದ್ದು, ಜಿಲ್ಲೆಯಲ್ಲಿ ಜೂನ್‌ನಿಂದ ಇದುವರೆಗೆ ಸುರಿದ ಮಳೆಗೆ ಅಪಾರ ಪ್ರಮಾಣದ ಹಾನಿಯಾಗಿದೆ.
ಜಿಲ್ಲೆಯಲ್ಲಿ ವ್ಯಾಪಕ ಮಳೆಯಿಂದಾಗಿ ಇದುವರೆಗೆ 13 ಜೀವ ಹಾನಿ ಪ್ರಕರಣಗಳಿಗೆ ₹65 ಲಕ್ಷ ಪರಿಹಾರ ನೀಡಲಾಗಿದೆ.
ತೀವ್ರ ಮತ್ತು ಸಂಪೂರ್ಣ ಹಾನಿಯಾದ 211 ಮನೆಗಳಲ್ಲಿ 148 ಮನೆಗಳಿಗೆ ₹1,52,40,000 ಪರಿಹಾರ ಹಾಗೂ ಭಾಗಶಃ ಹಾನಿಯಾದ 724 ಮನೆಗಳಲ್ಲಿ 449 ಮನೆಗಳಿಗೆ ₹24,44,000 ಗಳ ನೆರವು ನೀಡಲಾಗಿದೆ. 22 ಜಾನುವಾರು ಜೀವಹಾನಿ ಪ್ರಕರಣಗಳಿಗೆ ₹5,22,000 ಪರಿಹಾರ ವಿತರಿಸಲಾಗಿದ್ದು, 383 ಹೆಕ್ಟೇರ್ ಕೃಷಿ ಭೂಮಿ ಮತ್ತು 21.51 ಹೆಕ್ಟೇರ್ ತೋಟಗಾರಿಕಾ ಪ್ರದೇಶಕ್ಕೆ ಹಾನಿ ಸಂಭವಿಸಿದ್ದು, ನಷ್ಟದ ಅಂದಾಜು ವರದಿ ಸಿದ್ದಪಡಿಸಲಾಗುತ್ತಿದೆ.ಅಂಕೋಲಾ ತಾಲೂಕಿನಲ್ಲಿ 19 ಮನೆಗಳು ಪೂರ್ಣ ಹಾನಿ ಮತ್ತು 23 ಮನೆಗಳಿಗೆ ಭಾಗಶಃ ಹಾನಿ ಆಗಿದೆ. ಭಟ್ಕಳ ತಾಲೂಕಿನಲ್ಲಿ 50 ಮನೆಗಳು ಪೂರ್ಣ ಹಾನಿ ಮತ್ತು 101 ಮನೆಗಳಿಗೆ ಭಾಗಶಃ ಹಾನಿ, ದಾಂಡೇಲಿ ತಾಲೂಕಿನಲ್ಲಿ 4 ಮನೆಗಳು ಪೂರ್ಣ ಹಾನಿ ಮತ್ತು 10 ಮನೆಗಳಿಗೆ ಭಾಗಶಃ ಹಾನಿ, ಹಳಿಯಾಳ ತಾಲೂಕಿನಲ್ಲಿ 5 ಮನೆಗಳು ಪೂರ್ಣ ಹಾನಿ ಮತ್ತು 41 ಮನೆಗಳಿಗೆ ಭಾಗಶಃ ಹಾನಿ ಉಂಟಾಗಿದೆ. ಹೊನ್ನಾವರ ತಾಲೂಕಿನಲ್ಲಿ 25 ಮನೆಗಳು ಪೂರ್ಣ ಹಾನಿ ಮತ್ತು 65 ಮನೆಗಳಿಗೆ ಭಾಗಶಃ ಹಾನಿ, ಕಾರವಾರ ತಾಲೂಕಿನಲ್ಲಿ 18 ಮನೆಗಳು ಪೂರ್ಣ ಹಾನಿ ಮತ್ತು 30 ಮನೆಗಳಿಗೆ ಭಾಗಶಃ ಹಾನಿ, ಕುಮಟಾ ತಾಲೂಕಿನಲ್ಲಿ 32 ಮನೆಗಳು ಪೂರ್ಣ ಹಾನಿ ಮತ್ತು 192 ಮನೆಗಳಿಗೆ ಭಾಗಶಃ ಹಾನಿ, ಮುಂಡಗೋಡು ತಾಲೂಕಿನಲ್ಲಿ 20 ಮನೆಗಳು ಪೂರ್ಣ ಹಾನಿ ಮತ್ತು 63 ಮನೆಗಳಿಗೆ ಭಾಗಶಃ ಹಾನಿ, ಸಿದ್ದಾಪುರ ತಾಲೂಕಿನಲ್ಲಿ 15 ಮನೆಗಳು ಪೂರ್ಣ ಹಾನಿ ಮತ್ತು 83 ಮನೆಗಳಿಗೆ ಭಾಗಶಃ ಹಾನಿ ಆಗಿದೆ.
ಇದೇ ಅವಧಿಯಲ್ಲಿ ಮೂಲ ಸೌಕರ್ಯಗಳಿಗೂ ಹೆಚ್ಚಿನ ಹಾನಿ ಸಂಭವಿಸಿದ್ದು, 291 ಅಂಗನವಾಡಿಗಳಿಗೆ ₹643.50 ಲಕ್ಷ, 556 ಶಾಲೆಗಳಿಗೆ ₹1529.60 ಲಕ್ಷ, 9 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ₹21 ಲಕ್ಷ, 114 ಸೇತುವೆ ಮತ್ತು ಮೋರಿಗಳಿಗೆ ₹3138.70 ಲಕ್ಷ, 398 ಕಿಮೀ ರಸ್ತೆಗೆ ₹2778.15 ಲಕ್ಷ, 191 ಕಿಮೀ ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯ ರಸ್ತೆಗೆ ₹11642 ಲಕ್ಷ ಸೇರಿದಂತೆ ಒಟ್ಟು ₹19752.95 ಲಕ್ಷ ಹಾನಿಯ ಪ್ರಾಥಮಿಕ ವರದಿ ಸಲ್ಲಿಕೆಯಾಗಿದೆ.