ಮಯೂರ್ ಹೆಗಡೆ
ಉಪನಗರ ರೈಲ್ವೆ ಯೋಜನೆಯ ನಾಲ್ಕು ಕಾರಿಡಾರ್ ಕಾಮಗಾರಿಯಿಂದಾಗಿ ಭಾಗಶಃ ಹಾಗೂ ಪೂರ್ಣ ಪ್ರಮಾಣದ ಸೇರಿ 650ಕ್ಕೂ ಹೆಚ್ಚು ಕಟ್ಟಡಗಳಿಗೆ ಧಕ್ಕೆಯಾಗಲಿದೆ ಎಂದು ಕರ್ನಾಟಕ ರೈಲು ಮೂಲ ಸೌಕರ್ಯ ಅಭಿವೃದ್ಧಿ ನಿಗಮ (ಕೆ-ರೈಡ್) ತಿಳಿಸಿದೆ.
ಒಟ್ಟಾರೆ, 148 ಕಿ.ಮೀ. ಉದ್ದದ ರೈಲ್ವೆ ಮಾರ್ಗ ಒಳಗೊಂಡ ಯೋಜನೆಗಾಗಿ ಕಳೆದ ವರ್ಷ ನಡೆಸಿದ ಪ್ರಾಥಮಿಕ ಸಮೀಕ್ಷೆಯಲ್ಲಿ ಇವುಗಳನ್ನು ಗುರುತಿಸಲಾಗಿದ್ದು, ಈಚೆಗೆ ಪ್ರಕಟಿಸಿರುವ ಪರಿಸರ ಮತ್ತು ಸಾಮಾಜಿಕ ಪರಿಣಾಮ ವರದಿಯಲ್ಲಿ ಉಲ್ಲೇಖಿಸಲಾಗಿದೆ.ಬೈಯಪ್ಪನಹಳ್ಳಿಯಿಂದ ಚಿಕ್ಕಬಾಣಾವರ ಸಂಪರ್ಕಿಸುವ ‘ಸಂಪಿಗೆ’ ಕಾರಿಡಾರ್ ಮಾರ್ಗದಲ್ಲೇ ಹೆಚ್ಚಿನ ಅಂದರೆ 285+ ಕಟ್ಟಡಗಳು ಹಾನಿಗೆ ಒಳಗಾಗಲಿವೆ.
ಯಶವಂತಪುರ ರೈಲ್ವೆ ನಿಲ್ದಾಣ, ಕೃಷ್ಣದೇವರಾಯ ಹಾಲ್ಟ್, ಕೆಎಸ್‌ಆರ್ ರೈಲ್ವೆ ನಿಲ್ದಾಣದ ಬಳಿ ಹಾಗೂ ಬೆಳ್ಳಂದೂರು ಹಾಗೂ ಯಲಹಂಕ ಸ್ಟೇಷನ್ ಬಳಿಯ ಸ್ಲಂ ಸೇರಿ ಹಲವೆಡೆ ಜನತೆ ಸಮೀಕ್ಷೆಗೆ ಅಡ್ಡಿಪಡಿಸಿದ ಕಾರಣ ಇಲ್ಲಿ ನಿಖರವಾಗಿ ಎಷ್ಟು ವಸತಿಗೃಹಗಳು ಸರ್ವೇಯಿಂದ ಹೊರತಾಗಿವೆ. ಇಂತಹ ಸುಮಾರು 165 ಸಣ್ಣ ಮನೆಗಳಿವೆ. ಮುಂದಿನ ದಿನಗಳಲ್ಲಿ ಇಲ್ಲಿ ಸಮೀಕ್ಷೆ ಕೈಗೊಳ್ಳಬೇಕಿದ್ದು, ಪರಿಹಾರ ವಿತರಣೆ, ಸ್ಥಳಾಂತರ ಕುರಿತು ಹೆಚ್ಚಿನ ಅಧ್ಯಯನ ಆಗಬೇಕು ಮತ್ತು ಕೆಲ ಬದಲಾವಣೆ ಆಗಲಿದೆ. ಇದರಂತೆ ಮತ್ತಿಕೆರೆ ಬಳಿಯಲ್ಲಿನ ಸುಮಾರು 1 ಎಕರೆ ಸ್ಲಂ ಸೇರಿದಂತೆ ವಿಸ್ತೃತ ಸಮೀಕ್ಷೆಯ ಅಗತ್ಯವಿದೆ ಎಂದು ಕೆ-ರೈಡ್ ಹೇಳಿದೆ.
ಒಟ್ಟಾರೆ 1268 ಮನೆ ಮಾಲೀಕರಿಗೆ ಪರಿಹಾರ ವಿತರಣೆ ಮಾಡಬೇಕಾಗುತ್ತದೆ ಎಂದು ಪ್ರಾಥಮಿಕವಾಗಿ ಗುರುತಿಸಲಾಗಿದೆ. ಜೊತೆಗೆ 64 ಕಾರ್ಮಿಕರನ್ನು ಸ್ಥಳಾಂತರ ಮಾಡಬೇಕಾಗುತ್ತದೆ. ಇವುಗಳ ಜೊತೆಗೆ 2 ಶಾಲಾ, ಕಾಲೇಜು, 18 ಧಾರ್ಮಿಕ ಕಟ್ಟಡ ಹಾಗೂ ರೈಲ್ವೆಗೆ ಸಂಬಂಧಿಸಿದ 7 ಕಟ್ಟಡ ಭಾಗಶಃ ಹಾನಿಯಾಗಲಿವೆ.
ಯೋಜನೆ ಅನುಷ್ಠಾನಗೊಳಿಸುತ್ತಿರುವ ಕೆ-ರೈಡ್‌ಗಾಗಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಈಗಾಗಲೇ ಭೂಸ್ವಾಧೀನ ನಡೆಸುತ್ತಿದ್ದು, ಅಗತ್ಯ ಪರಿಹಾರ ವಿತರಣೆಯ ಮೌಲ್ಯಮಾಪನ ಪ್ರಕ್ರಿಯೆ ನಡೆಸುತ್ತಿದೆ. ಯೋಜನೆಗಾಗಿ ಒಟ್ಟಾರೆ 233 ಎಕರೆಯಷ್ಟು ಶಾಶ್ವತವಾಗಿ ಭೂಮಿ ಹಸ್ತಾಂತರ ಆಗಬೇಕಾಗುತ್ತದೆ. ಈಗಾಗಲೇ ಮಲ್ಲಿಗೆ ಕಾರಿಡಾರ್‌ಗಾಗಿ ರೈಲ್ವೆ ಇಲಾಖೆಯು ಕಳೆದ ವರ್ಷ ಸುಮಾರು 157.07 ಎಕರೆ ಹಸ್ತಾಂತರ ಮಾಡಿದೆ.
ಧಕ್ಕೆ ಆಗಲಿರುವ ಕಟ್ಟಡಗಳು332- ವಸತಿ ಕಟ್ಟಡಗಳು
48- ವಸತಿ ಮತ್ತು ವಾಣಿಜ್ಯ
165- ಸರ್ವೆ ಆಗಬೇಕಿದೆ