ಕನ್ನಡಪ್ರಭ ವಾರ್ತೆ ಕುಕನೂರು
ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ತಾಲೂಕಿನ ಆಡೂರು ಗ್ರಾಮದ ಬಾಣಂತಿಯೊಬ್ಬರು ಮೃತಪಟ್ಟಿರುವ ಘಟನೆ ಮಂಗಳವಾರ ಬೆಳಗ್ಗೆ ನಡೆದಿದ್ದು, ವೈದ್ಯರ ನಿರ್ಲಕ್ಷ್ಯದ ಆರೋಪ ಕೇಳಿಬಂದಿದೆ.ಗ್ರಾಮದ ರೇಣುಕಾ ಪ್ರಕಾಶ ಹಿರೇಮನಿ (೨೨) ಮೃತ ಬಾಣಂತಿ.
ತವರೂರು ಚಿಕ್ಕ ಬನ್ನಿಗೋಳ ಗ್ರಾಮದಿಂದ ಸೋಮವಾರ ರಾತ್ರಿ ಹೆರಿಗೆ ನೋವು ಕಂಡ ಕಾರಣ ರೇಣುಕಾಳನ್ನು ಕುಟುಂಬಸ್ಥರು ಕುಷ್ಟಗಿಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಅಲ್ಲಿನ ವೈದ್ಯರು ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ನಾರ್ಮಲ್ ಡೆಲಿವರಿ ಆಗದ ಕಾರಣ ವೈದ್ಯರು ಸಿಜೇರಿಯನ್ ಮಾಡಿದ್ದಾರೆ. ಆ ವೇಳೆಯೇ ಮಗು ಸಾವನ್ನಪ್ಪಿದೆ. ಇದಾದ ಎರಡು ತಾಸುಗಳ ನಂತರ ಬಾಣಂತಿ ರೇಣುಕಾ ಸಹ ಸಾವನ್ನಪ್ಪಿದ್ದಾಳೆ.ವೈದ್ಯರು ರೇಣುಕಾ ಸಾವನ್ನಪ್ಪಿದ ನಂತರ ಬಂದು ಬಾಣಂತಿ ಸಾವನ್ನಪ್ಪಿದ್ದಾಳೆ, ಶವ ತೆಗೆದುಕೊಂಡು ಹೋಗಿ ಎಂದು ಹೇಳಿದರು. ನಿಖರ ಕಾರಣ ನೀಡಲಿಲ್ಲ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಕುಷ್ಟಗಿಯಲ್ಲಿ ವೈದ್ಯರು ಸರಿಯಾಗಿ ಚಿಕಿತ್ಸೆ ನೀಡಿದ್ದರೆ ಸ್ಥಳೀಯವಾಗಿಯೇ ತಾಯಿ, ಮಗುವಿಗೆ ತೊಂದರೆ ಆಗುತ್ತಿರಲಿಲ್ಲ. ಆದರೆ ಅಲ್ಲಿಯ ವೈದ್ಯರು ಚಿಕಿತ್ಸೆ ನೀಡದೆ ಕೊಪ್ಪಳಕ್ಕೆ ಕಳುಹಿಸಿದರು. ಇಲ್ಲಿ ಬಂದರೆ ಇಲ್ಲಿನ ವೈದ್ಯರು ತಾಯಿ, ಮಗುವಿನ ಜೀವ ಉಳಿಸದೆ ನಿರ್ಲಕ್ಷ್ಯದಿಂದ ಬಾಣಂತಿ, ಮಗು ಸಾವಿಗೆ ಕಾರಣವಾಗಿದ್ದಾರೆ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಡ ಕುಟುಂಬ:2024ರ ಫೆಬ್ರವರಿ ತಿಂಗಳಿನಲ್ಲಿ ರೇಣುಕಾ ಹಾಗೂ ಆಡೂರಿನ ಪ್ರಕಾಶ ವಿವಾಹವಾಗಿತ್ತು. ಗರ್ಭಿಣಿಯಾಗಿದ್ದ ರೇಣುಕಾಳನ್ನು ತವರ ಮನೆಯಲ್ಲಿ ಬಿಟ್ಟು ಪ್ರಕಾಶ, ಆತನ ತಾಯಿ ಬೆಂಗಳೂರಿಗೆ ಗಾರೆ ಕೆಲಸಕ್ಕೆ ಹೋಗಿದ್ದರು. ಮಗು ಹುಟ್ಟಿದ ಸಂತಸದ ಸುದ್ದಿ ಕೇಳಬೇಕಿದ್ದ ಬೆಂಗಳೂರಿನಲ್ಲಿದ್ದ ಪ್ರಕಾಶ ಹಿರೇಮನಿಗೆ ಹೆಂಡತಿ, ಮಗುವಿನ ಸಾವಿನ ಸುದ್ದಿ ನೋವು ತಂದಿದೆ. ಕುಟುಂಬದ ಆಕ್ರಂದನ ಮುಗಿಲು ಮುಟ್ಟಿತ್ತು.