ಮಾತೃ ಹೃದಯದ ಕಾಂಗ್ರೆಸ್ ಸರ್ಕಾರ: ಸಚಿವ ಪ್ರಿಯಾಂಕ್‌ ಖರ್ಗೆ

KannadaprabhaNewsNetwork |  
Published : Feb 11, 2024, 01:57 AM IST
ಕಲಬುರಗಿಯಲ್ಲಿ ತಲೆ ಎತ್ತಿರುವ ಅತ್ಯಾಧುನಿಕ ಸವಲತ್ತುಗಳಿರುವ ಟ್ರಾಮಾ ಕೇರ್‌ ಸೆಂಟರ್‌ ವೀಕ್ಷಸಿದ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ. ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್‌, ಶಾಸಕ ಅಲ್ಲಂಪ್ರಭು ಪಾಟೀಲ್‌, ಡಿಸಿ ಫೌಜಿಯಾ ತರನ್ನುಮ್‌ ಇದ್ದರು. | Kannada Prabha

ಸಾರಾಂಶ

ಕಲಬುರಗಿಯಲ್ಲಿ ಟ್ರಾಮಾ ಕೇರ್ ಸೆಂಟರ್‌ಗೆ ಅಡಿಗಲ್ಲು ಹಾಕಿದ್ದೇ ಕಾಂಗ್ರೆಸ್ ಸರ್ಕಾರ. ಈಗ ಉದ್ಘಾಟನೆ ಮಾಡಿದ್ದೂ ಕೂಡಾ ಕಾಂಗ್ರೆಸ್ ಸರ್ಕಾರ.‌ ಇದು ನಮ್ಮ ಸರ್ಕಾರದ ಬದ್ಧತೆ: ಸಚಿವ ಪ್ರಿಯಾಂಕ್‌ ಖರ್ಗೆ

ಕನ್ನಡಪ್ರಭ ವಾರ್ತೆ ಕಲಬುರಗಿ

ಟ್ರಾಮಾ ಕೇರ್ ಸೆಂಟರ್‌ಗೆ ಅಡಿಗಲ್ಲು ಹಾಕಿದ್ದೇ ಕಾಂಗ್ರೆಸ್ ಸರ್ಕಾರ. ಈಗ ಉದ್ಘಾಟನೆ ಮಾಡಿದ್ದೂ ಕೂಡಾ ಕಾಂಗ್ರೆಸ್ ಸರ್ಕಾರ.‌ ಇದು ನಮ್ಮ ಸರ್ಕಾರದ ಬದ್ಧತೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಟ್ರಾಮಾ ಕೇರ್ ಸೆಂಟರ್ ಈ ಭಾಗದ ಹೆಮ್ಮೆಯ ಆರೋಗ್ಯ ಕೇಂದ್ರವಾಗಿದ್ದು, ಕಾಂಗ್ರೆಸ್ ಸರ್ಕಾರ ಈ‌ ಹಿಂದೆ ಅಧಿಕಾರದಲ್ಲಿದ್ದಾಗ ಅಡಿಗಲ್ಲು ಹಾಕಲಾಗಿತ್ತು. ಆದರೆ ಮಧ್ಯೆದ ಐದು ವರ್ಷಗಳ ಅವಧಿಯಲ್ಲಿ ಉದ್ಘಾಟನೆ ಮಾಡಲಾಗಿರಲಿಲ್ಲ. ಈಗ ನಾವು ಉದ್ಘಾಟನೆ ಮಾಡಿದ್ದೇವೆ.‌ ಯಾವುದೇ ಒಂದು ಯೋಜನೆ ಜನರಿಗೆ ಮುಟ್ಟಬೇಕೆಂದರೆ ಸರ್ಕಾರಕ್ಕೆ ಮಾತೃ ಹೃದಯವಿರಬೇಕು. ಅಂತಹ ಹೃದಯ ಕಾಂಗ್ರೆಸ್ ಸರ್ಕಾರಕ್ಕಿದೆ ಎಂದರು. ನಗರದ ಜಿಮ್ಸ್ ಆಸ್ಪತ್ರೆ ಆವರಣದಲ್ಲಿ ಹೊಸದಾಗಿ ₹55 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಟ್ರಾಮಾ ಕೇರ್ ಸೆಂಟರ್ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಕಲಬುರಗಿಯಲ್ಲಿ ಹಲವಾರು ಹೆಸರಾಂತ ಆರೋಗ್ಯ ಕೇಂದ್ರ ಸ್ಥಾಪಿಸಲಾಗಿದೆ. ಇಎಸ್‌ಐಸಿ, ಕಿದ್ವಾಯಿ, ಜಯದೇವ, ಜಿಮ್ಸ್ ನಂತಹ ರಾಷ್ಟ್ರಮಟ್ಟದ ಉತೃಷ್ಠ ವೈದ್ಯಕೀಯ ಸೇವೆ ಒದಗಿಸುತ್ತಿವೆ. ಇದು ಹೆಮ್ಮೆಯ ವಿಚಾರ ಎಂದರು.

ಆರ್ಟಿಕಲ್ 371 Jಅಡಿಯಲ್ಲಿ ಕಳೆದ ಸಾಲಿನಲ್ಲಿ ಈ ಭಾಗದ 1,000 ವಿದ್ಯಾರ್ಥಿಗಳಿಗೆ ವೈದ್ಯಕೀಯ ಸೀಟು ಲಭ್ಯವಾಗಿವೆ ಎಂದ ಸಚಿವರು, ಕಲ್ಯಾಣ ಕರ್ನಾಟಕದಲ್ಲಿ ಆರೋಗ್ಯದ ಕ್ರಾಂತಿಯಾಗಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವರು ಪ್ರಯತ್ನಪಡುತ್ತಿದ್ದಾರೆ. ಹೀಗಾಗಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ''ಹೆಲ್ತ್ ಎಕ್ಸಲೆನ್ಸ್ ಸೆಂಟರ್'' ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮಾತನಾಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಪಾಟೀಲ್ ಯಾವುದೇ ಕಾರ್ಪೋರೇಟ್ ಆಸ್ಪತ್ರೆಗೂ ಕೂಡಾ ಕಡಿಮೆಯಲ್ಲದಂತ ವೈದ್ಯಕೀಯ ಕೇಂದ್ರ ಇದಾಗಿದೆ. ನಾಲ್ವರು ನುರಿತ ನರರೋಗ ತಜ್ಞರು ಸೇರಿ ವೈದ್ಯರ ತಂಡ ಇಲ್ಲಿದೆ. ಸಿಟಿ ಸ್ಕ್ಯಾನ್, ಎಂಆರ್‌ಐ ಸೇರಿ ಅತ್ಯಾಧುನಿಕ ತಂತ್ರಜ್ಞಾನದಲ್ಲಿ ತಯಾರಾದ ಸಲಕರಣೆಗಳಿವೆ. ಇದರ ಅನುಕೂಲವನ್ನು ಜನರು ಪಡೆದುಕೊಳ್ಳಬೇಕು ಎಂದರು.

ಕಲಬುರಗಿ ನಗರದಲ್ಲಿ ₹170 ಕೋಟಿ ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಜೂನ್ ಕೊನೆ ಹಂತದಲ್ಲಿ ಸ್ಥಾಪನೆ ಮಾಡಲು ನಿರ್ಧರಿಸಲಾಗಿದ್ದು, ನಮ್ಮ ಭಾಗದ ಬಡವರಿಗೆ ಕಾರ್ಪೋರೇಟ್ ಆಸ್ಪತ್ರೆಯಂತೆ ವೈದ್ಯಕೀಯ ಸೇವೆ ಒದಗಿಸಲು ಉದ್ದೇಶಿಸಲಾಗಿದೆ. ಇದೇ ರೀತಿ 150ಬೆಡ್‌ನ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ₹170 ಕೋಟಿಯಲ್ಲಿ ನಿರ್ಮಾಣ ಮಾಡಲಾಗುವುದು. ಜೊತೆಗೆ 200 ಬೆಡ್‌ನ ತಾಯಿ ಹಾಗೂ ಮಗು ಆಸ್ಪತ್ರೆ ಹಾಗೂ ಕ್ರಿಟಿಕಲ್ ಕೇರ್ ಆಸ್ಪತ್ರೆಯನ್ನು ₹50 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುವುದು. ಇದಲ್ಲದೇ ₹15 ಕೋಟಿ ವೆಚ್ಚದಲ್ಲಿ ಸುಟ್ಟ ಗಾಯದ ( ಬರ್ನ್ಸ್ ) ರೋಗಿಗಳಿಗೆ ವೈದ್ಯಕೀಯ ಸೇವೆ ನೀಡಲು ಒಂದು ಬರ್ನ್ಸ್ ಯೂನಿಟ್ ನಿರ್ಮಾಣ ಮಾಡಲಾಗುವುದು. ಇಂದಿರಾಗಾಂಧಿ ಚೈಲ್ಡ್ ಇನ್ಸಿಟ್ಯೂಟ್ ಹಾಗೂ ನಿಮಾನ್ಸ್ ಬ್ರ್ಯಾಂಚ್‌ಗಳನ್ನು ಕಲಬುರಗಿಯಲ್ಲಿ ಮಾಡುವ ಕನಸಿದೆ. ಅವುಗಳನ್ನೂ ಕೂಡಾ ಮಾಡುತ್ತೇನೆ‌. ಇಷ್ಟೆಲ್ಲಾ ಆರೋಗ್ಯ ಕೇಂದ್ರ ಮಾಡುವ ಉದ್ದೇಶವೆಂದರೆ ಬಡವರು ಈ ಸೌಲಭ್ಯ ಪಡೆಯಲಿ ಎನ್ನುವುದಾಗಿದೆ. ''ಟ್ರೀಟ್ ಮೆಂಟ್ ಫಸ್ಟ್, ಡಾಕುಮೆಂಟ್ ನೆಕ್ಟ್ಸ'' ಎನ್ನುವ ಉದ್ದೇಶದಿಂದ ವೈದ್ಯಕೀಯ ಸೇವೆ ಮಾಡಲು ವೈದ್ಯರಿಗೆ ಸಲಹೆ ನೀಡಿದ್ದೇನೆ ಎಂದರು.

ಜಿಲ್ಲೆಯಲ್ಲಿ ಎಲ್ಲಿಯೇ ಅಪಘಾತ ನಡೆದು ಜನರು ಗಾಯಗೊಂಡರೆ ಅವರನ್ನು ಅಂಬುಲೆನ್ಸ್ ಮೂಲಕ ಟ್ರಾಮಾ ಕೇರ್ ಸೆಂಟರ್ ಗೆ ಕರೆತರಬೇಕು. ಡಿಎಚ್‌ಓ‌ ಅವರಿಗೆ ಈ ಮೂಲಕ ನಾನು ಸೂಚನೆ ನೀಡುತ್ತಿದ್ದೇನೆ ಎಂದರು. ವೇದಿಕೆ ಮೇಲೆ ಶಾಸಕ ಎಂ.ವೈ.ಪಾಟೀಲ, ಅಲ್ಲಮಪ್ರಭು ಪಾಟೀಲ, ಕನೀಜ್ ಫಾತಿಮಾ, ತಿಪ್ಪಣ್ಣಪ್ಪ ಕಮಕನೂರು, ಜಗದೇವ ಗುತ್ತೇದಾರ ಸೇರಿ ಟ್ರಾಮಾ ಕೇರ್ ಸೆಂಟರ್‌ನ ಅಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!