ರಾಜ್ಯದ ನೆಲ, ಜಲ, ಮೂಲಸೌಕರ್ಯಗಳನ್ನು ಬಳಸಿಕೊಂಡು ಬೆಳೆಯುತ್ತಿರುವ ಖಾಸಗಿ ಹಾಗೂ ಬಹುರಾಷ್ಟ್ರೀಯ (ಎಂಎನ್ಸಿ) ಕಂಪನಿಗಳಲ್ಲಿ ಕನ್ನಡಿಗರ ವಿರುದ್ಧ ಅಘೋಷಿತ ತಾರತಮ್ಯ ನಡೆಯುತ್ತಿದೆಯೇ? ಉದ್ಯೋಗದ ಅರ್ಜಿಯಲ್ಲಿ ಮಾತೃಭಾಷೆ ‘ಕನ್ನಡ’ ಎಂದು ಬರೆದಿದ್ದರೆ ಅಂಥ ರೆಸ್ಯೂಮ್ಗಳನ್ನು ಕಸದ ಬುಟ್ಟಿಗೆ ಎಸೆಯಲಾಗುತ್ತಿದೆಯೇ?
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯದ ನೆಲ, ಜಲ, ಮೂಲಸೌಕರ್ಯಗಳನ್ನು ಬಳಸಿಕೊಂಡು ಬೆಳೆಯುತ್ತಿರುವ ಖಾಸಗಿ ಹಾಗೂ ಬಹುರಾಷ್ಟ್ರೀಯ (ಎಂಎನ್ಸಿ) ಕಂಪನಿಗಳಲ್ಲಿ ಕನ್ನಡಿಗರ ವಿರುದ್ಧ ಅಘೋಷಿತ ತಾರತಮ್ಯ ನಡೆಯುತ್ತಿದೆಯೇ? ಉದ್ಯೋಗದ ಅರ್ಜಿಯಲ್ಲಿ ಮಾತೃಭಾಷೆ ‘ಕನ್ನಡ’ ಎಂದು ಬರೆದಿದ್ದರೆ ಅಂಥ ರೆಸ್ಯೂಮ್ಗಳನ್ನು ಕಸದ ಬುಟ್ಟಿಗೆ ಎಸೆಯಲಾಗುತ್ತಿದೆಯೇ?
ಇಂತಹದ್ದೊಂದು ಗಂಭೀರ ಆರೋಪ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋ ಮೂಲಕ ಹೊರಬಿದ್ದಿದ್ದು, ರಾಜ್ಯಾದ್ಯಂತ ಕನ್ನಡಿಗರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಯುವತಿಯೊಬ್ಬಳು ಹಂಚಿಕೊಂಡಿರುವ ವಿಡಿಯೋದಲ್ಲಿ, ಖಾಸಗಿ ವಲಯದಲ್ಲಿ ಸ್ಥಳೀಯ ಅಭ್ಯರ್ಥಿಗಳು ಎದುರಿಸುತ್ತಿರುವ ಕಟು ವಾಸ್ತವ ತೆರೆದಿಟ್ಟಿದ್ದಾರೆ. ಅರ್ಹತೆ, ಪ್ರತಿಭೆ ಇದ್ದರೂ ರೆಸ್ಯೂಮ್ನಲ್ಲಿ ಮಾತೃಭಾಷೆ ‘ಕನ್ನಡ’ ಎಂದಿರುವುದೇ ಉದ್ಯೋಗ ವಂಚನೆಗೆ ಕಾರಣವಾಗುತ್ತಿದೆ ಎಂಬ ಆಘಾತಕಾರಿ ಆರೋಪ ಕೇಳಿಬಂದಿದೆ.
ಕನ್ನಡ ನೆಲದ ಸ್ಥಳೀಯ ಪ್ರತಿಭೆಗಳನ್ನು ಕಡೆಗಣಿಸಿ, ಹೊರರಾಜ್ಯಗಳಲ್ಲಿ ಕ್ಯಾಂಪಸ್ ಡ್ರೈವ್ ನಡೆಸಿ ಕಡಿಮೆ ವೇತನಕ್ಕೆ ಸಿಗುವ ಅಭ್ಯರ್ಥಿಗಳನ್ನು ಕರೆತಂದು ತರಬೇತಿ ನೀಡಿ ಕೆಲಸಕ್ಕೆ ಸೇರಿಸಿಕೊಳ್ಳಲಾಗುತ್ತಿದೆ. ಈ ವಿಷಯ ರಾಜ್ಯದ ಕಾರ್ಮಿಕ ಇಲಾಖೆಯ ಅಧಿಕಾರಿಗಳಿಗೆ ತಿಳಿದಿದ್ದರೂ ಸದ್ಯ ಏನೂ ಮಾಡಲಾರದ ಹಂತಕ್ಕೆ ಬಂದು ತಲುಪಿದೆ.
ಬಿಡದಿಯಲ್ಲಿ ಬೃಹತ್ ಟೌನ್ಶಿಪ್ ನಿರ್ಮಿಸಿ ಲಕ್ಷಾಂತರ ಉದ್ಯೋಗ ಸೃಷ್ಟಿಸುತ್ತೇವೆ ಎಂಬ ಭರವಸೆ ನೀಡುತ್ತಿರುವ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಯನ್ನು ವೈರಲ್ ವಿಡಿಯೋದಲ್ಲಿ ಮಹಿಳೆ ಪ್ರಶ್ನಿಸಿದ್ದಾರೆ. ಹೊಸ ಟೌನ್ಶಿಪ್ ಮಾಡಿ ಉದ್ಯೋಗ ಕೊಡುವುದು ಅಮೇಲಿರಲಿ, ಮೊದಲು ಈಗಾಗಲೇ ರಾಜ್ಯದಲ್ಲಿ ತಲೆ ಎತ್ತಿರುವ ಸಾವಿರಾರು ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಆಗುತ್ತಿರುವ ಘೋರ ಅನ್ಯಾಯ ತಡೆಯಿರಿ ಎಂದು ನೇರವಾಗಿ ಆಗ್ರಹಿಸಿದ್ದಾರೆ.
ಕನ್ನಡಿಗರಿಗೆ ಅನ್ಯಾಯ:
ರಾಜ್ಯದ ಐಟಿ ಮತ್ತು ಬಿಟಿ ಕಂಪನಿಗಳಲ್ಲಿ ಕನ್ನಡಿಗರಿಗೆ ಸರಿಯಾದ ಉದ್ಯೋಗಾವಕಾಶಗಳು ಸಿಗುತ್ತಿಲ್ಲ. ಅವರಿಗೆ ಅನ್ಯಾಯವಾಗುತ್ತಿದೆ. ರಾಜ್ಯ ಸರ್ಕಾರಕ್ಕೆ ಕನ್ನಡಿಗರ ಬಗ್ಗೆ ಸ್ವಾಭಿಮಾನವಿಲ್ಲ. ಕೇವಲ ಅನಗತ್ಯ ವಿಚಾರಗಳು ಹಾಗೂ ವಿವಾದಗಳಲ್ಲೇ ಮುಳುಗಿದ್ದು, ಕನ್ನಡಿಗರ ಹಿತಾಸಕ್ತಿ ಸಂಪೂರ್ಣವಾಗಿ ಕಡೆಗಣಿಸಿದೆ. ಕನ್ನಡಿಗರಿಗೆ ಉದ್ಯೋಗ ನೀಡದ ಐಟಿಬಿಟಿ ಸಂಸ್ಥೆಗಳನ್ನು ಪರಿಶೀಲಿಸಿ, ಸರ್ಕಾರ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರ ತಕ್ಷಣವೇ ಕ್ರಮಕೈಗೊಳ್ಳಬೇಕು. ಯಾವ ಕಂಪನಿಗಳು ಈ ರೀತಿ ಮಾಡುತ್ತಿವೆ ಎಂದು ನಾವು ಕೂಡ ಪರಿಶೀಲಿಸಿ ಅವುಗಳ ವಿರುದ್ಧ ಹೋರಾಟ ನಡೆಸಲು ಸಿದ್ಧತೆ ನಡೆಸುತ್ತಿದ್ದೇವೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಅವರು ಕನ್ನಡಪ್ರಭಕ್ಕೆ ತಿಳಿಸಿದರು.
ಕನ್ನಡಿಗರದ್ದು ಅಸಹಾಯಕ ಸ್ಥಿತಿ:
ಹಲವು ಕಂಪನಿಗಳಲ್ಲಿ ಕನ್ನಡಿಗರನ್ನು ನಿರ್ಲಕ್ಷ್ಯಿಸಲಾಗುತ್ತಿದೆ. ಬಹುತೇಕ ಕಂಪನಿಗಳಲ್ಲಿ ಆಡಳಿತ ಮಂಡಳಿ ಮಟ್ಟದಲ್ಲಿ ಕನ್ನಡಿಗರ ಪ್ರಾತಿನಿಧ್ಯವೇ ಇಲ್ಲ. ಉಳಿದ ಅಲ್ಪಸ್ವಲ್ಪ ಕನ್ನಡಿಗರು ಕಚೇರಿಗಳಲ್ಲಿ ಕನ್ನಡ ಮಾತನಾಡಲೂ ಹಿಂಜರಿಯುವ, ಕನ್ನಡ ರಾಜ್ಯೋತ್ಸವ ಆಚರಿಸಲು ಅಂಗಲಾಚುವ ಅಸಹಾಯಕ ಸ್ಥಿತಿ ನಿರ್ಮಾಣವಾಗಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಭಾಷಾ ತಾರತಮ್ಯಕ್ಕೆ ಒಳಗಾದ ಯುವಕ-ಯುವತಿಯರು ಇ-ಮೇಲ್ ಮತ್ತು ಮೆಸೆಂಜರ್ ಮೂಲಕ ಮಾಹಿತಿ ಹಾಗೂ ದಾಖಲೆಗಳನ್ನು ಹಂಚಿಕೊಳ್ಳುವಂತೆ ಯುವ ಕರ್ನಾಟಕ ವೇದಿಕೆ ರಾಜ್ಯಾಧ್ಯಕ್ಷ ರೂಪೇಶ್ ರಾಜಣ್ಣ ಮನವಿ ಮಾಡಿದ್ದಾರೆ.
ಸರ್ಕಾರಕ್ಕೆ ಇಚ್ಛಾಶಕ್ತಿ ಕೊರತೆಯೇ?:
ಇತ್ತೀಚೆಗೆ ಮಂಡನೆಯಾಗಿದ್ದ ಖಾಸಗಿ ವಲಯದಲ್ಲಿ ಸ್ಥಳೀಯರಿಗೆ ಮೀಸಲಾತಿ ನೀಡುವ ವಿಧೇಯಕವು ಕಾರ್ಪೊರೇಟ್ ವಲಯದ ಒತ್ತಡಕ್ಕೆ ಮಣಿದು ನೆನೆಗುದಿಗೆ ಬಿದ್ದಿರುವುದು ಕನ್ನಡಿಗರಲ್ಲಿ ಸರ್ಕಾರದ ಇಚ್ಛಾಶಕ್ತಿ ಬಗ್ಗೆ ಅನುಮಾನ ಮೂಡಿಸಿದೆ. ಉದ್ದೇಶಪೂರ್ವಕವಾಗಿ ಕನ್ನಡಿಗರನ್ನು ಕಡೆಗಣಿಸುವ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಸರೋಜಿನಿ ಮಹಿಷಿ ವರದಿಯ ಪರಿಣಾಮಕಾರಿ ಅನುಷ್ಠಾನ, ಖಾಸಗಿ ಸಂಸ್ಥೆಗಳಲ್ಲಿ ಸ್ಥಳೀಯರಿಗೆ ಕಡ್ಡಾಯ ಉದ್ಯೋಗ ಮೀಸಲಾತಿ ಹಾಗೂ ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಲು ಸರ್ಕಾರ ತಕ್ಷಣವೇ ಉನ್ನತ ಮಟ್ಟದ ಸಮಿತಿ ರಚಿಸಿ ಕಠಿಣ ಕಾನೂನು ತರಬೇಕು ಎಂದು ಕರ್ನಾಟಕ ವಿಕಾಸರಂಗದ ಅಧ್ಯಕ್ಷ ವ.ಚ.ಚನ್ನೇಗೌಡ ಒತ್ತಾಯಿಸಿದ್ದಾರೆ.
ಕನ್ನಡಿಗರನ್ನು ಕಡೆಗಣಿಸುವ ಖಾಸಗಿ ಕಂಪನಿಗಳ ವಿರುದ್ಧ ಎಲ್ಲ ಕನ್ನಡಪರ ಹೋರಾಟಗಾರರು, ಸಂಘಟನೆಗಳು ಒಂದಾಗಬೇಕು. ಕನ್ನಡ ಮತ್ತು ಕನ್ನಡಿಗರನ್ನು ನಿರ್ಲಕ್ಷ್ಯಿಸುವ ಕಂಪನಿಗಳಿಗೆ ನುಗ್ಗಿ ಬೀಗ ಜಡಿದು ಪ್ರತಿಭಟನೆ ನಡೆಸಬೇಕಾಗುತ್ತದೆ. ರಾಜ್ಯ ಸರ್ಕಾರ ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಒದಗಿಸಲು ಮೊದಲ ಆದ್ಯತೆ ನೀಡುವಂತ ಕಾನೂನು ಜಾರಿಗೆ ತರಬೇಕು. ಇಂತಹ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಬೇಕೆಂದು ಕನ್ನಡಪರ ಸಂಘಟನೆಗಳು ಆಗ್ರಹಿಸಿವೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.