ಭಾವಾಭಿವ್ಯಕ್ತಿಗೆ ಮಾತೃಭಾಷೆ ಕನ್ನಡ ಆಪ್ತ: ಡಾ.ಬಸವರಾಜ್‌

KannadaprabhaNewsNetwork | Published : Sep 13, 2024 1:30 AM

ಸಾರಾಂಶ

ವಿರಾಜಪೇಟೆ ಬೇಟೋಳಿ ಗ್ರಾಮದ ಗುಂಡಿಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಶ್ರೀ ಎನ್ ಮಹಾಬಲೇಶ್ವರ ಭಟ್ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ವಿರಾಜಪೇಟೆ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಬೇಟೋಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆಶ್ರಯದಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಇಂಗ್ಲಿಷ್ ಉದ್ಯೋಗದ ಭಾಷೆ ಆದರೂ ಭಾವಾಭಿವ್ಯಕ್ತಿಗೆ ಹೃದ್ಯವಾದುದು ಮಾತೃಭಾಷೆ ಕನ್ನಡ ಎಂದು ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಕೆ.ಬಸವರಾಜ್‌ ಅಭಿಪ್ರಾಯಪಟ್ಟಿದ್ದಾರೆ.

ವಿರಾಜಪೇಟೆ ಬೇಟೋಳಿ ಗ್ರಾಮದ ಗುಂಡಿಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಶ್ರೀ ಎನ್ ಮಹಾಬಲೇಶ್ವರ ಭಟ್ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮದಲ್ಲಿ ಕನ್ನಡದ ಏಳು ಬೀಳುಗಳ ಸಮೀಕ್ಷೆ ಬಗ್ಗೆ ಅವರು ಉಪನ್ಯಾಸ ನೀಡಿದರು.

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ವಿರಾಜಪೇಟೆ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಬೇಟೋಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.

ಪಂಪ, ರನ್ನ, ಪೊನ್ನರು ರಚಿಸಿದ ಕಾವ್ಯಗಳು ಇಂದಿಗೂ ಜೀವಂತ, ಸಾರ್ವಕಾಲಿಕ ಸಂದೇಶ ನೀಡುತ್ತವೆ. ವಚನ ಸಾಹಿತ್ಯವು ವಿಶ್ವ ಮಾನ್ಯವಾಗಿದ್ದು ಸಾರ್ವತ್ರಿಕವಾಗಿ ಜನಮನ ಸೆಳೆದಿದೆ. ಭಕ್ತಿ ರಸ ಚೆಲ್ಲಿದ ದಾಸ ಸಾಹಿತ್ಯದ ಕೀರ್ತನೆಗಳು ಎಂದೆಂದೂ ಜನಪ್ರಿಯ ಆಗಿವೆ, ಇಷ್ಟೆಲ್ಲಾ ಶ್ರೀಮಂತಿಕೆ ಸತ್ವ ಇರುವ ಭಾಷೆ ಇಂದು ಅಭಿಮಾನ ಶೂನ್ಯತೆಯಿಂದ ಮಾತನಾಡುವವರ ಸಂಖ್ಯೆ ಕ್ಷೀಣಿಸುತ್ತಿದೆ, ಕನ್ನಡ ಭಾಷೆಯು ಇಂಗ್ಲಿಷ್ ಹಿಂದಿ ಭಾಷೆ ಗಳಿಂದಾಗಿ ನಲುಗುತ್ತಿದೆ ಎಂದರು.

ಮೀತಲತಂಡ ಇಸ್ಮಾಯಿಲ್ ಮಾತನಾಡಿ, ಕನ್ನಡ ಭಾಷೆಯಲ್ಲಿ ಮಾತನಾಡಬೇಕಾದ ನಾವು ಬೇರೆ ಭಾಷೆಗಳಿಗೆ ಆಸಕ್ತಿ ತೋರಿಸುತ್ತಿರುವುದು ಹೆಚ್ಚಾಗಿ ಕಂಡುಬರುತ್ತಿದೆ. ಕೇರಳ ರಾಜ್ಯದಲ್ಲಿ ಮೊಬೈಲ್ ಸಂಖ್ಯೆ ಕೇಳಿದರೆ ಅವರು ಮಲಯಾಳಂ ಭಾಷೆಯಲ್ಲಿ ಹೇಳುತ್ತಾರೆ. ನಮ್ಮ ರಾಜ್ಯದಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಹೇಳುತ್ತಾರೆ. ನಾವು ನಮ್ಮ ಮಾತೃ ಭಾಷೆ ಮಾತನಾಡುವ ಮೂಲಕ ಕನ್ನಡವನ್ನು ಬೆಳೆಸಬಹುದು ಎಂದರು.

ಬೇಟೋಳಿ ಗ್ರಾಮ ಪಂಚಾಯಿತಿ ಸದಸ್ಯ ಎಂ.ಎಂ. ರಜಾಕ್ ಮಾತನಾಡಿ ನಮ್ಮ ಗ್ರಾಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ದತ್ತಿನಿಧಿ ಕಾರ್ಯಕ್ರಮ ನೀಡಿ ಮಕ್ಕಳಲ್ಲಿ ಕನ್ನಡ ಭಾಷೆ ಬಗ್ಗೆ ಹೆಚ್ಚು ಹೆಚ್ಚು ಆಸಕ್ತಿ ಮೂಡುವಂತೆ ಮಾಡಿದೆ ಎಂದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಿ. ರಾಜೇಶ್ ಪದ್ಮನಾಭ ಅಧ್ಯಕ್ಷೀಯ ಭಾಷಣ ಮಾಡಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಎಚ್.ಜಿ ಸಾವಿತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಬೇಟೋಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸೀತಾ ಹಾಗೂ ಶಾಲೆಯ ಶಿಕ್ಷಕರು ಹಾಗೂ ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು.

Share this article