ಬಾಣಂತಿಯರ ಸಾವು ಪ್ರಕರಣ ಮುಚ್ಚಿ ಹಾಕಲ್ಲ, ಉನ್ನತ ಮಟ್ಟದ ತನಿಖೆ ನಡೆಸುತ್ತೇವೆ: ದಿನೇಶ್ ಗುಂಡೂರಾವ್

KannadaprabhaNewsNetwork |  
Published : Dec 08, 2024, 01:17 AM ISTUpdated : Dec 08, 2024, 01:04 PM IST
ಬಾಣಂತಿಯರ ಸಾವು ಪ್ರಕರಣ ಖಂಡಿಸಿ ಬಳ್ಳಾರಿ ಜಿಲ್ಲಾಸ್ಪತ್ರೆ ಎದುರು ಉಪವಾಸ ಸತ್ಯಾಗ್ರಹ  ಆರಂಭಿಸಿದ್ದ ಮಾಜಿ ಸಚಿವ ಬಿ.ಶ್ರೀರಾಮುಲು ಅವರನ್ನು ಭೇಟಿ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಪ್ರಕರಣದ ಉನ್ನತ ತನಿಖೆಯ ಭರವಸೆ ನೀಡಿದರು.  | Kannada Prabha

ಸಾರಾಂಶ

ಬಳ್ಳಾರಿ ಪ್ರಕರಣವನ್ನು ಉನ್ನತ ಮಟ್ಟದ ತನಿಖೆ ನಡೆಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಬಳ್ಳಾರಿ: ಜಿಲ್ಲಾಸ್ಪತ್ರೆಯ ಬಾಣಂತಿಯರ ಸಾವು ಪ್ರಕರಣದಲ್ಲಿ ಯಾವುದನ್ನೂ ಮುಚ್ಚಿ ಹಾಕಲ್ಲ. ರಾಜ್ಯದಲ್ಲಿನ 327 ಬಾಣಂತಿಯರ ಸಾವಿನ ವರದಿ ಕೇಳಲಾಗಿದ್ದು, ಬಳ್ಳಾರಿ ಪ್ರಕರಣವನ್ನು ಉನ್ನತ ಮಟ್ಟದ ತನಿಖೆ ನಡೆಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಬಾಣಂತಿಯರ ಸಾವು ಪ್ರಕರಣದ ಹಿನ್ನೆಲೆಯಲ್ಲಿ ಇಲ್ಲಿನ ಜಿಲ್ಲಾಸ್ಪತ್ರೆ ಎದುರು ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಬಿ. ಶ್ರೀರಾಮುಲು ಸೇರಿದಂತೆ ಪಕ್ಷದ ಮುಖಂಡರನ್ನು ಭೇಟಿ ಮಾಡಿದ ಸಚಿವರು, ಸತ್ಯಾಗ್ರಹ ಕೈ ಬಿಡುವಂತೆ ಮನವಿ ಮಾಡಿದರು.

ಬಾಣಂತಿಯರ ಸಾವನ್ನು ಸರಕಾರ ಗಂಭೀರವಾಗಿ ಪರಿಗಣಿಸಿದೆ. ಸದನದಲ್ಲೂ ಚರ್ಚೆ ಮಾಡಲಿದೆ. ಹೆಚ್ಚಿನ ಪರಿಹಾರದ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.

ಬಾಣಂತಿಯರ ಸಾವು ಸಂಭವಿಸಿದ ತಕ್ಷಣ ತನಿಖಾ ತಂಡ ರಚಿಸಿದೆ. ಐವಿ ಪ್ಲೂಯಿಡ್ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಈ ಹಿಂದೆ ಪರೀಕ್ಷೆ ಮಾಡಿಸಿದಾಗ ಸರಿಯಿಲ್ಲ ಎಂದು ವರದಿ ಬಂದಿತ್ತು. ಇದರಿಂದಾಗಿ ತಡೆ ಹಿಡಿದಿದ್ದರಿಂದ ಅವರು ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತಂದರು. ಕೇಂದ್ರದ ಲ್ಯಾಬ್ ಗೆ ಕಳಿಸಿ ಪರೀಕ್ಷೆ ಮಾಡಿ ಸರಿಯಿದೆ ಎಂದು ವರದಿ ಬಂತು. ಹಾಗಾಗಿ, ಮುಂದುವರಿಸಿತ್ತಾದರೂ, 22 ಲಾಟ್ ಪರೀಕ್ಷೆ ಸರಿಯಿಲ್ಲ ಎಂದಿದ್ದರಿಂದ ಅದನ್ನು ನಿಲ್ಲಿಸಿತ್ತು. ಡೆಂಘೀ ಹೆಚ್ಚಾದಾಗ ಉಳಿದಿದ್ದನ್ನು ಬಳಸಿತ್ತು ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಅವರಿಗೆ ತಿಳಿಸಿದರು.

ಮಾಜಿ‌ ಸಚಿವ ಬಿ. ಶ್ರೀರಾಮುಲು ಮಾತನಾಡಿ, ಬಾಣಂತಿಯರ ಸಾವು ಪ್ರಕರಣ ಹಿನ್ನೆಲೆಯಲ್ಲಿ ಆರೋಗ್ಯ ಸಚಿವರು ರಾಜಿನಾಮೆ ಕೊಡಬೇಕಾಗಿಲ್ಲ. ಆದರೆ, ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಬಾಣಂತಿಯರ ಸಾವುಗಳು ನಿಲ್ಲಬೇಕು. ಆಗಿರುವ ಲೋಪ ಎಲ್ಲಿಯದ್ದು ಎಂಬುದನ್ನು ಪತ್ತೆಹಚ್ಚಬೇಕು. ರಾಜ್ಯದ ಆರೋಗ್ಯ ವ್ಯವಸ್ಥೆಗೆ ಕ್ರಮ ವಹಿಸಬೇಕು. ಸಾವು ಪ್ರಕರಣ ವೈದ್ಯರ ನಿರ್ಲಕ್ಷ್ಯದಿಂದಾಗಿಲ್ಲ. ಸರ್ಕಾರದ ಲೋಪ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಸಾವು ಪ್ರಕರಣದಿಂದ ಸರ್ಕಾರಿ ಆಸ್ಪತ್ರೆಗಳ ಮೇಲೆ ವಿಶ್ವಾಸ ಹೋಗಿದೆ. ಮೃತಪಟ್ಟ ಬಾಣಂತಿಯರು ಮರಣೋತ್ತರ ಪರೀಕ್ಷೆ ನಡೆಸಬೇಕು. ಹಾಲಿ ನ್ಯಾಯಾಧೀಶರ ಮೂಲಕ ತನಿಖೆ ಆಗಬೇಕು. ಮೃತಪಟ್ಟ ಬಾಣಂತಿಯರ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.ಆರೋಗ್ಯ ಸಚಿವರ ಸೂಕ್ತ ಕ್ರಮದ ಭರವಸೆ ಮೇರೆಗೆ ಬಿಜೆಪಿ ನಾಯಕರು ಉಪವಾಸ ಸತ್ಯಾಗ್ರಹ ಹಿಂದಕ್ಕೆ ಪಡೆದರು. ಮಾಜಿ ಶಾಸಕ ಸೋಮಶೇಖರ ರೆಡ್ಡಿ, ಶಾಸಕ ಗಣೇಶ್, ಬಿಜೆಪಿ ಜಿಲ್ಕಾ ಅಧ್ಯಕ್ಷ ಅನಿಲ್ ಕುಮಾರ್ ಮೋಕಾ ಇತರರಿದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ