ಪ್ರತಿಭಾ ಪುರಸ್ಕಾರದಿಂದ ಸಾಧನೆಗೆ ಪ್ರೇರಣೆ

KannadaprabhaNewsNetwork | Published : Sep 9, 2024 1:32 AM

ಸಾರಾಂಶ

ಪ್ರತಿಭಾ ಪುರಸ್ಕಾರದಿಂದ ವಿದ್ಯಾರ್ಥಿಗಳ ಸಾಧನೆಗೆ ಪ್ರೇರಣೆ ನೀಡಲಿದೆ. ಶೈಕ್ಷಣಿಕ, ಕ್ರೀಡೆ, ಸಾಂಸ್ಕೃತಿಕವಾಗಿ ಸಾಧನೆ ಮಾಡುವುದಕ್ಕೆ ಸ್ಫೂರ್ತಿ ನೀಡಲಿದೆ ಎಂದು ಕೆ.ಬಿ.ಎಲ್ ಸಿದ್ಧಿ ವಿನಾಯಕ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಡಾ.ಈ.ಸಿ.ನಿಂಗರಾಜ್‌ಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಪ್ರತಿಭಾ ಪುರಸ್ಕಾರದಿಂದ ವಿದ್ಯಾರ್ಥಿಗಳ ಸಾಧನೆಗೆ ಪ್ರೇರಣೆ ನೀಡಲಿದೆ. ಶೈಕ್ಷಣಿಕ, ಕ್ರೀಡೆ, ಸಾಂಸ್ಕೃತಿಕವಾಗಿ ಸಾಧನೆ ಮಾಡುವುದಕ್ಕೆ ಸ್ಫೂರ್ತಿ ನೀಡಲಿದೆ ಎಂದು ಕೆ.ಬಿ.ಎಲ್ ಸಿದ್ಧಿ ವಿನಾಯಕ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಡಾ.ಈ.ಸಿ.ನಿಂಗರಾಜ್‌ಗೌಡ ಹೇಳಿದರು.

ಶೀರಂಗಪಟ್ಟಣ ತಾಲೂಕು ಬಸ್ತೀಪುರ ಗ್ರಾಮದಲ್ಲಿರುವ ಕೆ.ಬಿ.ಎಲ್ ಸಿದ್ಧಿ ವಿನಾಯಕ ಟ್ರಸ್ಟ್ ವತಿಯಿಂದ ಗೌರಿ-ಗಣೇಶ ಹಬ್ಬದ ಪ್ರಯುಕ್ತ ಪ್ರತಿಭಾ ಪುರಸ್ಕಾರ ಮತ್ತು ದಾನಿಗಳಿಗೆ ಅಭಿನಂದನಾ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರತಿಯೊಂದು ಮಗುವಿನಲ್ಲೂ ಪ್ರತಿಭೆ ಇದ್ದೇ ಇರುತ್ತದೆ. ಅದನ್ನು ಗುರುತಿಸಿ ನೀರೆರೆಯುವ ಕೆಲಸವನ್ನು ಪೋಷಕರು ಮತ್ತು ಶಿಕ್ಷಕರು ಮಾಡಬೇಕು. ಇದರಿಂದ ಮುಂದೆ ಮಕ್ಕಳು ಆ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ನುಡಿದರು.

ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಮಾತ್ರವಲ್ಲದೆ ಕ್ರೀಡೆ, ಸಾಹಿತ್ಯ, ವಿಜ್ಞಾನ, ತಂತ್ರಜ್ಞಾನ, ಬಾಹ್ಯಾಕಾಶ, ಸಾಂಸ್ಕೃತಿಕ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಮೂಲಕ ಭಾರತ ವಿಶ್ವಗುರುವಾಗಲು ಶ್ರಮಿಸುವಂತೆ ತಿಳಿಸಿದರು.ಶಿಕ್ಷಕರು ನಿರಂತರ ಅಧ್ಯಯನಶೀಲರಾಗಿ ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶಕರಾಗಬೇಕು. ಅವರ ಸಾಧನೆಗೆ ದಾರಿದೀಪವಾದಾಗ ಶಿಕ್ಷಕ ವೃತ್ತಿಗೆ ಗೌರವ ಹೆಚ್ಚುತ್ತದೆ. ಪ್ರಚಲಿತ ವಿದ್ಯಮಾನಗಳನ್ನು ತಾವೂ ಗ್ರಹಿಸಿ ವಿದ್ಯಾರ್ಥಿಗಳಿಗೂ ಮನದಟ್ಟು ಮಾಡಿಕೊಟ್ಟಾಗ ಗುರು ಎಂಬ ಮಾತು ಅರ್ಥಪೂರ್ಣಗೊಳ್ಳುತ್ತದೆ ಎಂದು ಹೇಳಿದರು.

ಕೆ.ಬಿ.ಎಲ್ ಸಿದ್ಧಿ ವಿನಾಯಕ ಟ್ರಸ್ಟ್ ವತಿಯಿಂದ ವರ್ಷಪೂರ್ತಿ ಕಾರ್ಯಕ್ರಮಗಳನ್ನೂ ಮಾಡಿಕೊಂಡು ಬರುತ್ತಿದೆ. ಮಕ್ಕಳಲ್ಲಿ ಮತ್ತು ಸಾರ್ವಜನಿಕರಿಗೆ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಸಿಲಿಕಾನ್ ಸಿಟಿ ಪಾರ್ಕ್ ಆವರಣದಲ್ಲಿರುವ 4 ಎಕರೆ ಜಾಗದಲ್ಲಿ ಸಾಲುಮರದ ತಿಮ್ಮಕ್ಕ ಹೆಸರಿನಲ್ಲಿಯೇ ಪರಿಸರಕ್ಕೆ ಪೂರಕವಾದ ಹಲವಾರು ಗಿಡಗಳನ್ನು ನೆಟ್ಟು ಬೆಳೆಸುವುದರ ಮೂಲಕ ಉತ್ತಮ ರೀತಿಯಲ್ಲಿ ಉದ್ಯಾನವನವನ್ನು ನಿರ್ವಹಣೆ ಮಾಡುತ್ತಿದ್ದೇವೆ ಎಂದು ನುಡಿದರುಉ.ಟ್ರಸ್ಟ್‌ ವತಿಯಿಂದ ವಿಶೇಷ ಚೇತನರಿಗೆ ಅಗತ್ಯವಿರುವ ಕೃತಕ ಕಾಲು, ಗಾಲಿ, ಕುರ್ಚಿಗಳನ್ನೂ ನೀಡಿದ್ದೇವೆ. ಮಹಿಳೆಯರು ಸ್ವಾವಲಂಬಿ ಆಗಬೇಕು ಎನ್ನುವ ಉದ್ದೇಶದಿಂದ ಉಚಿತವಾಗಿ ಹೊಲಿಗೆ ತರಬೇತಿ ಮತ್ತು ಹೊಲಿಗೆ ಯಂತ್ರಗಳನ್ನೂ ನೀಡಿದ್ದೇವೆ. ಶ್ರೀ ವಿನಾಯಕ ದೇವಸ್ಥಾನದ ಆವರಣದಲ್ಲಿ ವರ್ಷಪೂರ್ತಿ ಉಚಿತ ಯೋಗ, ಭಜನೆ, ಸತ್ಸಂಗ ತರಗತಿಗಳನ್ನೂ ನಡೆಸಿಕೊಂಡು ಸಾಂಸ್ಕೃತಿಕ ವಾತಾವರಣ ಸೃಷ್ಟಿಸಿರುವುದಾಗಿ ಹೇಳಿದರು.ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಂಡ್ಯ ಮತ್ತು ಮೈಸೂರು ಜಿಲ್ಲೆಯ ವಿದ್ಯಾರ್ಥಿಗಳು, ಕ್ರೀಡಾ ಕ್ಷೇತ್ರದಲ್ಲಿ ಖೊ-ಖೋ, ಕರಾಟೆ, ಯೋಗ, ಬಾಕ್ಸಿಂಗ್, ಕಬಡ್ಡಿ ಹಾಗೂ ಇತರೇ ಕ್ರೀಡೆಗಳಲ್ಲಿ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ, ಭರತನಾಟ್ಯದಲ್ಲಿ ವಿಶೇಷ ಸಾಧನೆ ಮಾಡಿದ 18 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ದೇವಸ್ಥಾನದ ನಿರ್ಮಾಣಕ್ಕೆ ಉದಾರವಾಗಿ ದೇಣಿಗೆ ನೀಡಿದ ಮುರುಗೇಶ್, ಗೋಪಾಲ್, ಸುದೀರ್ ದೇವರಾಜು, ಕಿರಣ್, ಸುರೇಶ್ , ಮಹೇಶ್ ಮತ್ತು ಶಿವಣ್ಣರವರನ್ನೂ ಅಭಿನಂದಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಕೆಬಿಎಲ್‌ ಟ್ರಸ್ಟ್‌ ಅಧ್ಯಕ್ಷ ರವಿ, ಕೆ.ಬಿ.ಎಲ್ ಸಿಲಿಕಾನ್ ಸಿಟಿ ಓನರ್ಸ್ ವೆಲ್ ಫೇರ್ ಅಸೋಸಿಯನ್ ಅಧ್ಯಕ್ಷ ಕೆ.ಎನ್. ಸಂತೋಷ್, ಖಜಾಂಚಿ ಎಂ. ಮೋಹನ್, ಉಮಾಶಂಕರ್ ಆರಾಧ್ಯ, ಎನ್.ಕಿರಣ್, ಬಿ.ಎನ್. ಸುರೇಶ್, ಬಿ.ಬಿ.ಮಧುಕರ್, ನಿತೀನ್, ದೀಲಿಪ್ ಆರಾಧ್ಯ, ವಿಜಯವಾಣಿ ಪತ್ರಿಕೆಯ ಸ್ಥಾನಿಕ ಸಂಪಾದಕರಾದ ಎಂ.ಆರ್. ಸತ್ಯನಾರಾಯಣ, ರವಿ, ರಾಜು, ವೆಂಕಟೇಶ್, ಪ್ರಶಾಂತ್, ಕೆ. ವಿವೇಕ್ ಗೌಡ, ವೈ.ಚ್. ಲೋಹಿತ್ ಕುಮಾರ್, ಡಿ.ಶ್ರೀಕಂಠೇಗೌಡ, ಹೆಚ್.ಡಿ.ರಮೇಶ್, ಸೂನಗಹಳ್ಳಿ ಮಹೇಶ್, ಪಿ.ಕೆ.ರಮೇಶ್, ಬೆಟ್ಟೇಗೌಡ, ಸುಭಾಷ್ ಗೌಡ, ವಿಜಯ್ ಅರಸ್, ಅರ್ಚಕರಾದ ರತ್ನಾಕರ ಭಾರದ್ವಾಜ್, ಡಾ.ಮಜ್ಜಿಗೆಪುರ ಕೆ. ಶಿವರಾಮು, ಕಾರ್ತಿಕ್, ಶ್ರೀನಿವಾಸ್, ಡಾ.ಸ್ವಾಮಿ, ಈ.ಸಿ.ವಸಂತಕುಮಾರ್ ಹಾಜರಿದ್ದರು.

Share this article