ಆನೆಗಳ ಸ್ಥಳಾಂತರಿಸಿ ಇಲ್ಲವೇ ನಮ್ಮನ್ನೇ ಎತ್ತಂಗಡಿ ಮಾಡಿ: ಅರೇಹಳ್ಳಿ ರೈತರ ಆಗ್ರಹ

KannadaprabhaNewsNetwork |  
Published : Jun 02, 2024, 01:46 AM IST
1ಎಚ್ಎಸ್ಎನ್10 : ತೋಟಕ್ಕೆ ನೀರು ಹಾಯಿಸುವ ಪಂಪ್‌ ಸೆಟ್ಟನ್ನು ಕಾಡಾನೆಗಳು ಬುಡಮೇಲು ಮಾಡಿರುವುದು. | Kannada Prabha

ಸಾರಾಂಶ

ತೀವ್ರ ಬರ ಪರಿಸ್ಥಿಯಲ್ಲಿ ಜೀವನ ಸಾಗಿಸುತ್ತಿರುವ ನಡುವೆ ಇತ್ತೀಚಿನ ದಿನಗಳಲ್ಲಿ ಎಲ್ಲೆಂದರಲ್ಲಿ ನಿತ್ಯ ಕಾಡಾನೆಗಳ ಹಾವಳಿ ಹೆಚ್ಚಾಗುತ್ತಿದ್ದು ಬೇಲೂರು ತಾಲೂಕಿನ ಅರೇಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ರೈತರು, ಕಾಫಿ ಬೆಳೆಗಾರರು ಕಂಗಾಲಾಗಿದ್ದಾರೆ.

ಕಾಡಾನೆ ಹಾವಳಿಗೆ ತತ್ತರಿಸಿದ ಮಲೆನಾಡಿಗರು । ಬರದ ಪರಿಸ್ಥಿತಿ ಜತೆಗೆ ಆನೆಗಳ ಕಾಟ

ಕನ್ನಡಪ್ರಭ ವಾರ್ತೆ ಅರೇಹಳ್ಳಿ

ಬೇಲೂರು ತಾಲೂಕಿನ ಅರೇಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೆಚ್ಚಾಗಿ ಕೃಷಿಯನ್ನೇ ಅವಲಂಬಿಸಿರುವ ರೈತರು, ಕಾಫಿ ಬೆಳೆಗಾರರು ತಾವು ಬೆಳೆದ ಫಸಲಿಗೆ ಸೂಕ್ತ ಬೆಲೆ ದೊರಕದೆ ತೀವ್ರ ಬರ ಪರಿಸ್ಥಿಯಲ್ಲಿ ಜೀವನ ಸಾಗಿಸುತ್ತಿರುವ ನಡುವೆ ಇತ್ತೀಚಿನ ದಿನಗಳಲ್ಲಿ ಎಲ್ಲೆಂದರಲ್ಲಿ ನಿತ್ಯ ಕಾಡಾನೆಗಳ ಹಾವಳಿ ಹೆಚ್ಚಾಗುತ್ತಿದ್ದು ರೈತರು, ಕಾಫಿ ಬೆಳೆಗಾರರು ಕಂಗಾಲಾಗಿದ್ದಾರೆ.

ನಮ್ಮ ಜಮೀನಿನ ಸುತ್ತ ಮುತ್ತ ಬೋರ್ವೆಲ್ ಕೊರೆಯಿಸಿದರೂ ನೀರಿನ ಲಭ್ಯತೆ ಇಲ್ಲದ ಕಾರಣ ಬೇರೆ ಸ್ಥಳದಿಂದ ನೀರನ್ನು ಟ್ಯಾಂಕರಿನ ಮೂಲಕ ತಂದು ಶೇಖರಿಸಿಟ್ಟು ಕಾಫಿ, ಮೆಣಸಿನ ಬಳ್ಳಿಗಳಿಗೆ ಔಷಧಿ ಸಿಂಪಡಿಸಬೇಕು ಎನ್ನುವಷ್ಟರಲ್ಲಿ ಕಾಡಾನೆಗಳು ದಾಳಿ ನಡೆಸಿ ಬೆಳೆಗಳನ್ನು ಹಾನಿ ಮಾಡುವುದಲ್ಲದೆ ನೀರಿನ ಟ್ಯಾಂಕ್, ಬ್ಯಾರಲ್, ಬಿಂದಿಗೆಗಳನ್ನು ಸಹ ದ್ವಂಸ ಮಾಡಿವೆ. ಜಮೀನಿನ ಸುತ್ತಮುತ್ತ ಮೂರ್ನಾಲ್ಕು ಗುಂಪಿನ ಕಾಡಾನೆಗಳ ಹಿಂಡು ನಿತ್ಯ ದಾಂಧಲೆ ನಡೆಸುತ್ತಿದ್ದು ಜಮೀನಿನ ಕೆಲಸ ನಿರ್ವಹಿಸಲು ಕೂಲಿ ಕಾರ್ಮಿಕರೂ ಬರಲು ಬಯದಿಂದ ಹಿಂದೇಟು ಹಾಕುತ್ತಿದ್ದಾರೆ ಎಂದು ರೈತರು ದೂರಿದ್ದಾರೆ.

ಇಷ್ಟೊತ್ತಿಗಾಗಲೇ ಕಾಫಿ ಮೆಣಸುಗಳಿಗೆ ಔಷಧಿ ಸಿಂಪಡಿಸಿ ರಸಗೊಬ್ಬರ ಪೂರೈಸಬೇಕಿತ್ತು. ಆದರೆ ಕಾಡಾನೆಗಳು ಇರುವ ಕಾರಣ ವ್ಯತ್ಯಯವಾಗಿದೆ. ಇದರಿಂದ ನಮಗೆ ತುಂಬಲಾರದ ನಷ್ಟ ಆನುಭವಿಸಬೇಕಾಗುತ್ತದೆ ಎಂದು ರೈತರು ಹೇಳಿದ್ದಾರೆ.

ಬ್ಯಾಂಕಿನಲ್ಲಿ ಸಾಲ ಪಡೆದು ಆದಾಯದ ನಿರೀಕ್ಷೆಯಲ್ಲಿ ಜೀವನ ಸಾಗಿಸುವ ತಮ್ಮ ಪರಿಸ್ಥಿತಿಯು ಅತ್ಯಂತ ಕಠಿಣವಾಗಿದೆ. ಆದ್ದರಿಂದ ಕಾಡಾನೆಗಳನ್ನು ಇಲ್ಲಿಂದ ಬೇರೆಡೆ ಸ್ಥಳಾಂತರ ಮಾಡಿ ತಮಗೆ ನಿರ್ಭಯವಾಗಿ ಬದುಕಲು ಅವಕಾಶ ಕಲ್ಪಿಸಿ ಇಲ್ಲದಿದ್ದರೆ ತಮ್ಮ ಜಮೀನಿಗೆ ಸೂಕ್ತ ಬೆಲೆಯನ್ನು ನೀಡಿ ತಮ್ಮನ್ನು ಬೇರೆಡೆ ಸ್ಥಳಾಂತರ ಮಾಡಿ ಎಂದು ಕಾಫಿ ಬೆಳೆಗಾರರಾದ ಗಫಾರ್ ಅಹಮ್ಮದ್ ಅಳಲು ತೋಡಿಕೊಂಡರು.

ಅರಣ್ಯ ಇಲಾಖೆ ನಿರ್ಲಕ್ಷ್ಯ ಕಾರಣ

‘ಈ ಮೊದಲು ನಮ್ಮ ಬಾಗದಲ್ಲಿ ಕಾಡಾನೆಗಳ ಸುಳಿವು ಇರಲಿಲ್ಲ. ಆದರೆ 2019 ರ ಕೊವಿಡ್ ಮಹಾಮಾರಿ ವಿಶ್ವದೆಲ್ಲೆಡೆ ವ್ಯಾಪಿಸಿ ಲಾಕ್‌ಡೌನ್ ಸಮಯದಲ್ಲಿ ವಾಹನಗಳ ಸಂಚಾರ ಸ್ಥಗಿತಗೊಂಡಾಗ ಸಕಲೇಶಪುರ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಮೂಲಕ ಹಲವು ವರ್ಷಗಳಿಂದ ವಾಸ್ತವ್ಯ ಹೂಡಿದ್ದ ಸಕಲೇಶಪುರ, ಕೊಡಗು, ಹೆತ್ತೂರು ಹಾಗೂ ಸುತ್ತಮುತ್ತಲಿನ ಗುಡ್ಡಗಾಡು ಪ್ರದೇಶಗಳಿಂದ ನಮ್ಮ ಭಾಗಕ್ಕೆ ವಲಸೆ ಬಂದಿವೆ. ಆ ಸಂದರ್ಭದಲ್ಲಿ ಅರಣ್ಯ ಇಲಾಖೆಯವರು ನಿರ್ಲಕ್ಷ್ಯ ತೋರದೆ ವಾಪಸ್ಸು ಕಾಡುಗಟ್ಟಿದ್ದರೆ ನಮಗೆ ಇಂತಹ ದುಸ್ಥಿತಿ ಎದುರಾಗುತ್ತಿರಲಿಲ್ಲ. ಸರ್ಕಾರವು ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ಶಾಶ್ವತ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮಹತ್ವದ ಯೋಜನೆ ರೂಪಿಸಬೇಕು ಎಂದು ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ಉಪಾಧ್ಯಕ್ಷ ಮಂಜುನಾಥ್ ಶೆಟ್ಟಿ ಆಗ್ರಹಿಸಿದ್ದಾರೆ.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...