ರಾಜ್ಯದಲ್ಲಿ ಪ್ರತ್ಯೇಕ ಮಹಿಳಾ ಆರೋಗ್ಯ ನೀತಿ ಜಾರಿಗೆ ಚಿಂತನೆ: ಸಚಿವ ಯು.ಟಿ.ಖಾದರ್‌

KannadaprabhaNewsNetwork |  
Published : Nov 23, 2026, 01:45 AM IST
ಚಿತ್ರ 22ಬಿಡಿಆರ್‌2ಬೀದರ್‌  ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ ಖಾದರ್‌  ಮಾತನಾಡಿದರು. | Kannada Prabha

ಸಾರಾಂಶ

ಮಹಿಳೆಯರ ಆರೋಗ್ಯ ರಕ್ಷಣೆಗೆ ಪ್ರತ್ಯೇಕ ಮಹಿಳಾ ಆರೋಗ್ಯ ನೀತಿ ರೂಪಿಸುವುದು, ಬಡವರ ಬಂಜೆತನ ನಿವಾರಣೆಗೆ ಸರ್ಕಾರಿ ಐವಿಎಫ್ ಕೇಂದ್ರಗಳ ಸ್ಥಾಪನೆಗೆ ಸರ್ಕಾರ ಯೋಜಿಸುತ್ತಿದೆ ಎಂದು ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್‌ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೀದರ್‌

ಮಹಿಳೆಯರ ಆರೋಗ್ಯ ರಕ್ಷಣೆಗೆ ಪ್ರತ್ಯೇಕ ಮಹಿಳಾ ಆರೋಗ್ಯ ನೀತಿ ರೂಪಿಸುವುದು, ಬಡವರ ಬಂಜೆತನ ನಿವಾರಣೆಗೆ ಸರ್ಕಾರಿ ಐವಿಎಫ್ ಕೇಂದ್ರಗಳ ಸ್ಥಾಪನೆಗೆ ಸರ್ಕಾರ ಯೋಜಿಸುತ್ತಿದೆ ಎಂದು ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್‌ ತಿಳಿಸಿದರು.

ಅವರು ಈ ಕುರಿತಂತೆ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಣ್ಣ ಮಗುವಿನಿಂದ ಹಿಡಿದು ದೊಡ್ಡವರಾಗುವವರೆಗಿನ ವಿವಿಧ ಹಂತಗಳಲ್ಲಿ ಮಹಿಳೆಯರ ಆರೋಗ್ಯಕ್ಕೆ ಸಂಬಂಧಿಸಿದ ಯೋಜನೆಗಳು ಹಾಗೂ ನಮ್ಮ ಸೋದರಿಯರು ಎದುರಿಸುವ ಸಮಸ್ಯೆಗಳ ಕುರಿತು ಅಧ್ಯಯನ ನಡೆಸಿ, ಪ್ರತ್ಯೇಕ ಮಹಿಳಾ ಆರೋಗ್ಯ ನೀತಿಯನ್ನು ರೂಪಿಸಲಾಗುವುದು ಎಂದರು.

ಬಂಜೆತನ ಸಮಸ್ಯೆಯಿಂದ ಬಳಲುತ್ತಿರುವ ಕುಟುಂಬಗಳಿಗೆ ನೆರವಾಗಲು ಸರ್ಕಾರದ ವತಿಯಿಂದ ಐವಿಎಫ್‌ (IVF) ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ. ಮಂಗಳೂರು, ಬೆಂಗಳೂರು, ಮೈಸೂರು, ಕಲಬುರಗಿ ಮತ್ತು ಹುಬ್ಬಳ್ಳಿಯಲ್ಲಿ ಐವಿಎಫ್‌ ಕೇಂದ್ರಗಳನ್ನು ಪ್ರಾರಂಭಿಸಲಾಗುತ್ತಿದೆ. ಅತ್ಯಂತ ಕಡಿಮೆ ದರದಲ್ಲಿ ಚಿಕಿತ್ಸೆ ಲಭ್ಯವಾಗುವಂತೆ ಮಾಡಿ, ಅಗತ್ಯ ಇರುವವರಿಗೆ ಸಬ್ಸಿಡಿ ನೀಡುವ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ ಎಂದರು.

ರಾಜ್ಯದ ಆರೋಗ್ಯ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಈಗಾಗಲೇ 200ಕ್ಕೂ ಅಧಿಕ ಎಂಬಿಬಿಎಸ್‌ ವೈದ್ಯರ ನೇಮಕಾತಿ ಪ್ರಕ್ರಿಯೆ ನಡೆದಿದ್ದು, ವೈದ್ಯರು ಮತ್ತು ನರ್ಸ್‌ಗಳು ಸೇರಿದಂತೆ ಸುಮಾರು 1,000 ಸಿಬ್ಬಂದಿ ನೇಮಕಕ್ಕೆ ಸರ್ಕಾರ ಒಪ್ಪಿಗೆ ನೀಡಿದೆ ಅಲ್ಲದೆ ತಾಲೂಕು ಆಸ್ಪತ್ರೆಯಲ್ಲಿ ಕನಿಷ್ಠ ಐದು ಹಾಸಿಗೆಗಳ ಐಸಿಯು ಘಟಕ ಸ್ಥಾಪಿಸಿ ಗಂಭೀರ ಕಾಯಿಲೆಗಳಿಗೆ ಅಲ್ಲಿಯೇ ಟೆಲಿಮೆಡಿಸಿನ್‌ ವ್ಯವಸ್ಥೆಯನ್ನೂ ಅಭಿವೃದ್ಧಿಪಡಿಸಲಾಗುವುದು ಎಂದರು.

ಇದೇ ವೇಳೆ ಜನೌಷಧಿ ಕೇಂದ್ರಗಳ ದುರ್ಬಳಕೆ ತಡೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ತಾಲೂಕು ಆಸ್ಪತ್ರೆಗಳ ಬಲವರ್ಧನೆ, ಹೊಸ ಆಂಬ್ಯುಲೆನ್ಸ್ ಸೇರ್ಪಡೆ ನಿಲುವುಗಳನ್ನು ಖಾದರ್‌ ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕ ರಹೀಮ್‌ ಖಾನ್‌, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಅಬ್ದುಲ್‌ ಮನ್ನಾನ್ ಸೇಠ್, ಸಂಜಯ್‌ ಜಾಗಿರ್ದಾರ್, ಮಾಲಾ ಬಿ ನಾರಾಯಣರಾವ್‌, ವಿನೋದ ಅಪ್ಪೆ ಹಾಗೂ ದತ್ತಾತ್ರಿ ಮೂಲಗೆ ಇದ್ದರು.

ಇನ್ಮುಂದೆ ಹೋಟೆಲ್‌ಗಳು ಬಳಸಿ ಉಳಿದ ಎಣ್ಣೆಯ ಲೆಕ್ಕ ಕೊಡಬೇಕು: ಒಮ್ಮೆ ಬಳಸಿದ ಅಡುಗೆ ಎಣ್ಣೆಯನ್ನು ಪದೇಪದೇ ಬಿಸಿ ಮಾಡಿ ಬಳಸುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆಯಿದೆ. ಹೀಗಾಗಿ ಹೋಟೆಲ್‌ಗಳು ಹಾಗೂ ಆಹಾರ ಉತ್ಪಾದನಾ ಘಟಕಗಳಲ್ಲಿ ಬಳಸಿದ ಎಣ್ಣೆಯ ಸಂಗ್ರಹ ಮತ್ತು ವಿಲೇವಾರಿಗೆ ನಿಯಮಬದ್ಧ ವ್ಯವಸ್ಥೆ ಜಾರಿಗೆ ತರಲು ಸರ್ಕಾರ ಮುಂದಾಗಿದೆ. ಎಣ್ಣೆ ಎಲ್ಲಿಂದ ಖರೀದಿಸಲಾಗಿದೆ, ಎಷ್ಟು ಪ್ರಮಾಣದಲ್ಲಿ ಬಳಸಲಾಗಿದೆ ಮತ್ತು ಬಳಸಿದ ಎಣ್ಣೆಯನ್ನು ಯಾರಿಗೆ ನೀಡಲಾಗಿದೆ ಎಂಬುವದನ್ನು ಪ್ರತಿ ತಿಂಗಳೂ ದಾಖಲಿಸುವ ಅಲ್ಲದೆ ಮನೆಗಳಿಂದಲೂ ಬಳಸಿದ ಅಡುಗೆ ಎಣ್ಣೆ ಸಂಗ್ರಹಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದ ಅವರು ಅದಕ್ಕಾಗಿ ನಿವೃತ್ತ ನೌಕರ, ಹಿರಿಯ ನಾಗರಿಕರ ಒಂದು ತಪಾಸಣಾ ತಂಡವನ್ನೂ ರಚಿಸಲು ಸರ್ಕಾರ ಯೋಜಿಸಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್‌ ತಿಳಿಸಿದರು.

ಹೋಟೆಲ್‌ಗಳು, ಅಂಗಡಿಗಳು ಹಾಗೂ ಔಷಧ ಮಳಿಗೆಗಳಲ್ಲಿ ಕ್ಯೂಆರ್‌ ಕೋಡ್‌ ಅಳವಡಿಸುವ ವ್ಯವಸ್ಥೆ ರೂಪಿಸಲಾಗಿದೆ. ಗ್ರಾಹಕರು ಕಳಪೆ ಆಹಾರ, ನಕಲಿ ಔಷಧ, ಬಿಲ್‌ ನೀಡದಿರುವುದು ಅಥವಾ ಗುಣಮಟ್ಟದ ಕೊರತೆ ಕಂಡು ಬಂದಲ್ಲಿ ಕ್ಯೂಆರ್‌ ಕೋಡ್‌ ಮೂಲಕ ದೂರು ಸಲ್ಲಿಸಬಹುದು. ದೂರು ಬಂದ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಿದ್ದಾರೆ ಎಂದರು.

ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೂ ಸರ್ಕಾರದಿಂದ ಉಚಿತ ಲ್ಯಾಪ್‌ಟಾಪ್‌: ವಕ್ಫ್‌ ಇಲಾಖೆಯ ಮುಖಾಂತರ ಮಹಿಳಾ ಪದವಿ ಕಾಲೇಜು ಸ್ಥಾಪನೆಗೆ ಸರ್ಕಾರ ಮುಂದಾಗಿದೆ. ಜೊತೆಗೆ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್‌, ಎಂಜಿನಿಯರಿಂಗ್‌, ಎಂಸಿಎ, ಬಿಸಿಎ, ಎಂಬಿಎ ಮತ್ತು ಎಂಟೆಕ್‌ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಟ್‌ಟಾಪ್‌ ವಿತರಣೆ, ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಹಾಗೂ ಶೈಕ್ಷಣಿಕ ಸಾಲ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ, ಬೀದರ್‌ ಜಿಲ್ಲೆಯಲ್ಲಿಯೂ ಸಾಕಷ್ಟು ಯೋಜನೆಗಳನ್ನು ಮಂಜೂರು ಮಾಡಲಾಗಿದೆ ಎಂದರು.

ಆಶಾ ಸಮಸ್ಯೆಗಳ ಕುರಿತು ಪರಿಹಾರಕ್ಕೆ ಅಧಿವೇಶನ ಅಂತ್ಯದವರೆಗೆ ಕಾಯಬೇಕು: ಈಗಾಗಲೇ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಆಶಾ ಕಾರ್ಯಕರ್ತರ ಸಂಘಟನೆಯ ಜೊತೆಗೆ ಸುದೀರ್ಘವಾಗಿ ಮಾತನಾಡಿದ್ದಾರೆ. ನಾನೂ ಸಹ ಮಾತನಾಡಿದ್ದೇನೆ. ಬೇಡಿಕೆ ಈಡೇರಿಕೆಗೆ ಹಣಕಾಸು ಇಲಾಖೆಯ ಪರವಾನಿಗೆ ಬೇಕು. ಸರ್ಕಾರದ ನಿರ್ಧಾರಕ್ಕಾಗಿ ಅಧಿವೇಶನ ಅಂತ್ಯದವರೆಗೆ ಕಾಯಲೇಬೇಕು ಎಂದ ಅವರು ಅಧಿವೇಶನ ನಡೆಯಲು ಬಿಡೋಲ್ಲ ಎಂದಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅ‍ವರು ಅಧಿವೇಶನ ಯಾತಕ್ಕಾಗಿ ನಡೆಯುತ್ತದೆ, ಎಂಬು ವುದನ್ನು ಅರ್ಥೈಸಿಕೊಳ್ಳಲಿ. ಅಧಿವೇಶನದಲ್ಲಿಯೇ ಕಬ್ಬು ಬೆಳೆಗಾರರ ಸಮಸ್ಯೆ ಬಗ್ಗೆ ಸುದೀರ್ಘವಾಗಿ ಚರ್ಚಿಸಿ ನಿರ್ಧಾರ ಕೈಗೊಳ್ಳಲು ಸಹಕರಿಸಲಿ ಎಂದು ಯು.ಟಿ. ಖಾದರ್‌ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂತಾರಾಷ್ಟ್ರೀಯ ಸಮ್ಮೇಳನ ಯಶಸ್ವಿ
ಸರ್ಕಾರದ ಅನುದಾನದ ಜೊತೆಗೆ ದಾನಿಗಳ ನೆರವು ಪಡೆಯಿರಿ: ವಿಜಯ ಮಾನೆ