ನಮ್ಮವರಿಗೆ ಏಕವಚನದಲ್ಲಿ ಮಾತನಾಡಿದ್ರೆ ಸುಮ್ಮನಿರಬೇಕಾ?

KannadaprabhaNewsNetwork | Published : Jan 18, 2024 2:02 AM

ಸಾರಾಂಶ

ರಣಭೈರವ ಎದ್ದು ನಿಂತಾಗಿದೆ. ಇನ್ನೇನಿದ್ದರೂ ಮೊಘಲರೂ ಸೇರಿದಂತೆ ಇತರೆ ಹಿಂದೂಗಳ ಮೇಲೆ ನಡೆಸಿದ ದೌರ್ಜನ್ಯಕ್ಕೆ ತಕ್ಕ ಉತ್ತರ ನೀಡುವ ಮೂಲಕ ಅಳಿಸಿರುವ ಹಿಂದೂ ದೇವಾಲಯಗಳು ತಲೆ ಎತ್ತಲಿವೆ.

ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು

ಬಾಟಲಿ ಹಾಲು ಕುಡಿದು ಬೆಳೆದವ ನಾನಲ್ಲ. ತಾಯಿಯ ಎದೆ ಹಾಲು ಕುಡಿದು ಬೆಳೆದಿದ್ದೇನೆ. ತಾಯಿ ಬಗ್ಗೆ ಹಾಗೂ ದೇಶದ ಬಗ್ಗೆ ನನಗೆ ಅಪಾರ ಗೌರವವಿದೆ. ತಾಯಿ ಹಾಗೂ ದೇಶದ ಬಗ್ಗೆ ಯಾರೋ ಏನೇನೋ ಮಾತನಾಡಿದರೆ ನಾನು ಸುಮ್ಮನಿರಲು ಸಾಧ್ಯವೇ ಇಲ್ಲ ಎಂದು ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ ಹೇಳಿದರು.

ಬೆಳಗಾವಿ ಜಿಲ್ಲೆಯ ಚ.ಕಿತ್ತೂರಿನ ಬಿಜೆಪಿ ಕಚೇರಿಯಲ್ಲಿ ಬುಧವಾರ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಅವರು ಮೈಸೂರು ಗರಡಿಯಲ್ಲಿ ಬೆಳೆದಿದ್ದರೆ, ನಾನು ಕೂಡ ಮೈಸೂರು ಗರಡಿಯಲ್ಲಿಯೇ ಬೆಳೆದವನು. ಅದೇ ಗರಡಿಯಲ್ಲಿಯೇ ನಾನೂ ಕುಸ್ತಿ ಆಡಿದ್ದೇನೆ. ನಮ್ಮವರಿಗೆ ಏಕವಚನದಲ್ಲಿ ಮಾತಾಡಿದರೆ ಏನು ಮಾಡಲಿ? ಎಂದು ಸಿದ್ದರಾಮಯ್ಯ ಹೆಸರು ಹೇಳದೇ ಸಂಸದರು ತಿರುಗೇಟು ನೀಡಿದರು.ಯುದ್ಧ ಭೂಮಿಯಲ್ಲಿ ಶಾಸ್ತ್ರೀಯ ಸಂಗೀತಕ್ಕೂ ಹಾಗೂ ಭರತ ನಾಟ್ಯಕ್ಕೂ ಅವಕಾಶವಿಲ್ಲ. ರಣಭೈರವ ಎದ್ದು ನಿಂತಾಗಿದೆ. ಇನ್ನೇನಿದ್ದರೂ ಮೊಘಲರೂ ಸೇರಿದಂತೆ ಇತರೆ ಹಿಂದೂಗಳ ಮೇಲೆ ನಡೆಸಿದ ದೌರ್ಜನ್ಯಕ್ಕೆ ತಕ್ಕ ಉತ್ತರ ನೀಡುವ ಮೂಲಕ ಅಳಿಸಿರುವ ಹಿಂದೂ ದೇವಾಲಯಗಳು ತಲೆ ಎತ್ತಲಿವೆ ಎಂದು ಹೇಳಿದರು.

ಯಾರೊಬ್ಬರ ಸಂಕಲ್ಪದಿಂದ ಮಾತ್ರ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಿಲ್ಲ. ರಾಮಮಂದಿರ ನಿರ್ಮಾಣದ ಕನಸನ್ನು ಎಲ್ಲ ಹಿಂದೂಗಳು ಹೊಂದಿದ್ದರು. ಆದರೆ ದೇವರ ಸಂಕಲ್ಪದಿಂದ ಇಂದು ದೇವಾಲಯ ನಿರ್ಮಾಣವಾಗಿದೆ. ಇಲ್ಲಿ ದೇಶದ ಎಲ್ಲ ಹಿಂದೂಗಳಿಗೂ ಮುಕ್ತ ಅವಕಾಶವಿದೆ. ಆಮಂತ್ರಣ ನನಗೆ ದೊರೆತಿಲ್ಲ ಎಂದು ಕ್ಯಾತೆ ತೆಗೆಯುವ ಬದಲು ಮುಕ್ತ ಮನಸ್ಸಿನಿಂದ ದೇವಾಲಯಕ್ಕೆ ಬರಬಹುದಲ್ಲವೇ ಎಂದು ಕಾಂಗ್ರೆಸಿಗರನ್ನು ಪ್ರಶ್ನಿಸಿದರು.ದೇಶದ ಹಳ್ಳಿ ಹಳ್ಳಿಗಳಿಂದಲೂ ಕಳುಹಿಸಿದ ಇಟ್ಟಿಗೆಯಿಂದ ಇಂದು ದೇವಾಲಯ ನಿರ್ಮಿಸಲಾಗಿದೆ. ಈ ದೇವಾಲಯ ನಿರ್ಮಿಸುವಾಗ ಗೆಲುವಿಗಿಂತ ಹೆಚ್ಚು ಸೋಲೇ ಹೆಚ್ಚಾಗಿತ್ತು. ಆದರೆ ಸೋಲಿನಿಂದ ಹಿಂದೂ ಸಮಾಜ ಸತ್ತಿರಲಿಲ್ಲ. ಹಿಂದೂ ಸಮಾಜ ಎಂದರೆ ಮೃತ್ಯುಂಜಯ ಸಮಾಜವಿದ್ದಂತೆ. ಇದರ ಪ್ರತೀಕವೆ ಇಂದು ರಾಮ ಮಂದಿರ ನಿರ್ಮಾಣವಾಗಿದೆ ಎಂದು ಹೇಳಿದರು.

ಆರೋಗ್ಯದ ವ್ಯತ್ಯಾಸದಿಂದಾಗಿ ನನ್ನ ಹಾಗೂ ನನ್ನ ಕ್ಷೇತ್ರದ ಜನರ ನಡುವೆ ಸಂಪರ್ಕ ಕಡಿಮೆಯಾಗಿತ್ತು. ಇದರಿಂದಾಗಿಯೇ ಚುನಾವಣೆಯಿಂದ ದೂರ ಉಳಿಯುವ ನನ್ನ ಸ್ಪಷ್ಟ ನಿಲುವು ಮುಖಂಡರಿಗೆ ತಲುಪಿಸಿದ್ದೇನೆ. ಸೂಕ್ತ ವ್ಯಕ್ತಿಯನ್ನು ಪಕ್ಷ ಆಯ್ಕೆ ಮಾಡಲಿದೆ ಎಂದರು.ಅಯೋಧ್ಯೆ, ಇದು ಈಗ ಪ್ರಾರಂಭವಾಗಿದೆ. ಕಾಶಿ, ಮಥುರಾ ಬಾಕಿ ಇದೆ. ಎಲ್ಲ ಕಡೆಗೂ ಬದಲಾವಣೆ ಆಗುತ್ತಿದೆ. ಇಲ್ಲಿಯೂ ಎಲ್ಲ ಬದಲಾವಣೆಯಾಗುತ್ತದೆ ಎಂದ ಅವರು, ಇತ್ತೀಚೆಗೆ ನನ್ನ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ. ನನಗೆ ಮತ ಹಾಕಿದವರು ದುಡ್ಡು ತೆಗೆದುಕೊಂಡಿಲ್ಲ. ಸ್ವಾಭಿಮಾನದಿಂದ ಮತ ಕೊಟ್ಟವರು. ನಮ್ಮ ರಾಮ, ಹಿಂದೂಗಳ, ಹಿರಿಯರ ಬಗ್ಗೆ ಮಾತನಾಡಿದರೆ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.ಇದುವರೆಗೂ ನನ್ನ ಹಣೆ ಮೇಲೆ ಅಪವಾದವನ್ನು ದೇವರು ಬರೆದಿಲ್ಲ. ಇಲ್ಲಿ ನಿಮ್ಮ ಮುಂದೊಂದು ಭಾಷಣ ಅಲ್ಲಿ ಹೋಗಿ ಬೇರೆಯವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳೋದು. ಇಂಥದ್ದು ಈ ನನ್ನ ರಕ್ತದಲ್ಲಿ ಇಲ್ಲ. ಮಹಾಸಂಗ್ರಾಮ ಶುರುವಾಗಿದೆ. ನಾವು ಗೆದ್ದೆವು ಅನ್ನೋದಿಲ್ಲ. ''''''''''''''''ಗೆದ್ದಿದ್ದೇವೆ ಲೇ ಗೆದ್ದಿದ್ದೇವೆ'''''''''''''''' ಅಂತಾ ಗಟ್ಟಿಯಾಗಿ ಬರಬೇಕು. ಗಂಡು ದನಿಯ ನೆಲವಿದು. ಗಟ್ಟಿಯಾಗಿ ಮಾತಾಡಬೇಕು. ಅಭ್ಯರ್ಥಿ ಯಾರೇ ಆಗಿರಲಿ. ಈ ಕ್ಷೇತ್ರದಲ್ಲಿ ರಾಷ್ಟ್ರೀಯ ದಾಖಲೆಯಾಗಬೇಕು. ಭಗವಂತ ನಮ್ಮ ಜೊತೆಗಿದ್ದಾನೆ. ಈ ಬಾರಿ ಗೆಲುವು ದೇವರಿಗೆ ಬೇಕಾಗಿದೆ. ಏಕೆಂದರೆ ಈ ಗೆಲವು ಆತನಿಗೂ ಬೇಕಾಗಿದೆ. ಎಲ್ಲ ದೇವಸ್ಥಾನಗಳ ಮುಕ್ತಿಯಾಗಬೇಕಿದೆ. ಇಲ್ಲವಾದರೆ ಅವನಿಗೂ ಇಲ್ಲಿ ಜಾಗ ಇರೋದಿಲ್ಲ. ಹೀಗಾಗಿ ಈ ಬಾರಿಯ ಗೆಲುವು ಅವನೇ ಮಾಡುತ್ತಾನೆ ಎಂದರು.ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಮಾತನಾಡಿ, ರಾಜ್ಯದಲ್ಲಿ ಅಭಿವೃದ್ಧಿ ಮರಿಚಿಕೆಯಾಗಿದೆ. ಬರಗಾಲದಲ್ಲೂ ರಾಜ್ಯ ಸರ್ಕಾರ ರೈತರಿಗೆ ಅನುಕೂಲ ಒದಗಿಸಲು ವಿಫಲವಾಗಿದೆ. ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಅತಿವೃಷ್ಠಿ ಸಂದರ್ಭದಲ್ಲಿ ಅಂದಿನ ಸಿಎಂ ಯಡಿಯೂರಪ್ಪನವರು ಮನೆಕಟ್ಟಿಕೊಡಲು ಹಾಗೂ ಬೆಳೆ ಹಾನಿಯಾದವರಿಗೆ ಸೂಕ್ತ ಪರಿಹಾರ ಕಲ್ಪಿಸಿದರು. ಆದರೆ ಈ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರು ಹಾಗೂ ಶಾಸಕರು ಹಣದ ಕೊರತೆ ಇದೆ ಎಂದು ಹೇಳುತ್ತಿದ್ದಾರೆ ಎಂದು ಹೇಳಿದರು.

ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಅನುದಾನ ನೀಡುವ ಮೂಲಕ ಕಿತ್ತೂರು ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಧಾರವಾಡ ಬೆಳಗಾವಿ ರೈಲು ಮಾರ್ಗ, ಕಿತ್ತೂರು ಹಾಗೂ ಎಂ.ಕೆ.ಹುಬ್ಬಳ್ಳಿಯಲ್ಲಿ ೨೪ ಘಂಟೆ ಕುಡಿಯುವ ನೀರಿನ ಯೋಜನೆ, 100 ಬೆಡ್ ಆಸ್ಪತ್ರೆಗೆ ಅನುದಾನ, ಗ್ರಾಮ ಸಡಕ್ ಯೋಜನೆಗೆ ಅನುದಾನ, ಕೆರೆ ತುಂಬುವ ಯೋಜನೆ ಸೇರಿದಂತೆ ನೂರಾರು ಕೋಟಿ ಅನುದಾನ ನೀಡಿದೆ. ಈ ಕುರಿತು ಯಾರು ಪ್ರಶ್ನಿಸಿದರು ನಾನು ಉತ್ತರ ಕೊಡಲು ಸಿದ್ದ. ಅದಲ್ಲದೆ ಈ ಕುರಿತು ಚರ್ಚೆಗೆ ಕರೆದರೂ ನಾನು ಬರಲು ಸಿದ್ದ ಎಂದ ಅವರು, ಕಿತ್ತೂರು ಕ್ಷೇತ್ರಕ್ಕೆ ಅನುದಾನ ಮಂಜೂರು ಮಾಡಿಸಲು ಅನಂತಕುಮಾರ ಹೆಗಡೆ ಅವರ ಶ್ರಮ ಅಪಾರ ಎಂದು ಸ್ಮರಿಸಿದರು.ಬೆಳಗಾವಿ ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಸುಭಾಷ ಪಾಟೀಲ ಹಾಗೂ ಕಿತ್ತೂರು ಮಂಡಲ ಅಧ್ಯಕ್ಷ ಬಸವರಾಜ ಪರವಣ್ಣವರ ಮಾತನಾಡಿದರು. ಈ ವೇಳೆ

ಹಿರಿಯ ಚನ್ನಬಸಪ್ಪ ಮೊಕಾಶಿ, ಜಗದೀಶ ವಸ್ತ್ರದ, ವಿಶ್ವನಾಥ ಬಿಕ್ಕಣ್ಣವರ, ಬಿ.ಎಫ್.ಕೊಳದೂರ, ಅಪ್ಪಣ್ಣ ಪಾಗಾದ, ಶ್ರೀಕರ ಕುಲಕರ್ಣಿ, ಉಳವಪ್ಪ ಉಳ್ಳೆಗಡ್ಡಿ, ನಿಜಲಿಂಗಯ್ಯಾ ಹಿರೇಮಠ, ಚಿನ್ನಪ್ಪ ಮುತ್ನಾಳ, ಸರಸ್ವತಿ ಹೈಬತ್ತಿ, ಪಕ್ಷದ ಕಾರ್ಯಕರ್ತರು ಇದ್ದರು. --ಚಿತ್ರ 17ಕೆಟಿಆರ್01: ಸಂಸದ ಅನಂತಕುಮಾರ ಹೆಗಡೆ ಅವರನ್ನು ಸನ್ಮಾನಿಸುತ್ತಿರುವ ಬಿಜೆಪಿ ಕಾರ್ಯಕರ್ತರು ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಹಾಗೂ ಇತರರು ಇದ್ದಾರೆ.

Share this article