ಪ್ರತಿಭಟನೆ । ಸಿದ್ದರಾಮಯ್ಯ ಕುರಿತು ಏಕವಚನದಲ್ಲಿ ನಿಂದಿಸಿದ್ದ ಸಂಸದ ಹೆಗಡೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಕುರಿತು ಏಕವಚನದಲ್ಲಿ ನಿಂದಿಸಿರುವ ಸಂಸದ ಅನಂತ್ ಕುಮಾರ್ ಹೆಗಡೆ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿ ಶಾಸಕ ಕೆ,ಎಂ ಶಿವಲಿಂಗೇಗೌಡರ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಪ್ರತಿಭಟನಾಕಾರರು ಅನಂತ್ ಕುಮಾರ್ ಹೆಗಡೆ ವಿರುದ್ಧ ಘೋಷಣೆ ಕೂಗುತ್ತ ರಾಷ್ಟ್ರೀಯ ಹೆದ್ದಾರಿ 206 ಟಿ,ಎಚ್ ರಸ್ತೆ ಮೂಲಕ ಬಸವೇಶ್ವರ ವೃತ್ತದವರೆಗೂ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ನಂತರ ಅನಂತ್ ಕುಮಾರ್ ಹೆಗಡೆ ಅವರ ಪ್ರತಿಕೃತಿ ದಹಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಭಟನಾಕಾರರು ಉದ್ದೇಶಿಸಿ ಶಾಸಕ ಶಿವಲಿಂಗೇಗೌಡ ಮಾತನಾಡಿ, ಒಬ್ಬ ಚುನಾಯಿತ ಜನಪ್ರತಿನಿಧಿಯಾಗಿ ಸಂವಿಧಾನವನ್ನೇ ಬದಲಿಸುತ್ತೇವೆ ಎಂದು ಹೇಳಿಕೆ ನೀಡುವುದು, ರಾಜ್ಯದ ಮುಖ್ಯಮಂತ್ರಿಗೆ ಏಕವಚನದಲ್ಲಿ ನಿಂದಿಸುವುದು, ಪದೇ ಪದೇ ತಮ್ಮ ನಾಲಿಗೆಯನ್ನು ಅರಿಬಿಡುವ ಮೂಲಕ ಅನಂತ್ ಕುಮಾರ್ ಹೆಗಡೆ ರಾಜ್ಯದಲ್ಲಿ ಅಶಾಂತಿ ವಾತಾವರಣ ಉಂಟು ಮಾಡುವ ಇಂಥ ಮನಸ್ಥಿತಿಯ ರಾಜಕಾರಣಿಯನ್ನು ಬಿಜೆಪಿಯವರೇ ಪಕ್ಷದಿಂದ ಉಚ್ಚಾಟನೆ ಮಾಡಿದರೆ ಅವರ ಪಕ್ಷಕ್ಕೆ ಮರ್ಯಾದೆ ಹೆಚ್ಚುತ್ತದೆ ಎಂದರು.
ನಾವು ರಾಮ ಭಕ್ತರೆ:
ಗಂಡಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೆಟ್ರೋ ಬಾಬು ಮಾತನಾಡಿ, ದೇಶದ ಸಂವಿಧಾನದ ಬಗ್ಗೆ ಗೌರವವಿಲ್ಲದೆ ಮುಖ್ಯಮಂತ್ರಿ ಸೇರಿದಂತೆ ಪ್ರತಿ ಪಕ್ಷದ ಜನಪ್ರತಿನಿಧಿಗಳನ್ನು ಹೇಗೆ ಗೌರವದಿಂದ ಮಾತನಾಡಿಸಬೇಕು ಎಂಬ ಕನಿಷ್ಠ ಜ್ಞಾನವಿಲ್ಲದ ಅನಂತ್ ಕುಮಾರ್ ಹೆಗಡೆ ಹಾಗೂ ಅಂತಹ ಮನಸ್ಥಿತಿಯುಳ್ಳ ಇನ್ನು ಕೆಲ ಬಿಜೆಪಿ ಮುಖಂಡರನ್ನು ಬಿಜೆಪಿ ನಾಯಕರು ಪಕ್ಷದಿಂದ ಉಚ್ಚಾಟಿಸಿದರೆ ಮಾತ್ರ ತಮಗೆ ಹಾಗೂ ತಮ್ಮ ಪಕ್ಷಕ್ಕೆ ಗೌರವ ಹೆಚ್ಚುತ್ತದೆ. ಇಲ್ಲದೆ ಹೋದರೆ ನಾಡಿನ ಜನತೆಯೇ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.