ಜಿಲ್ಲೆಯಲ್ಲಿ ರೈಲ್ವೆ ಕ್ರಾಂತಿಗೆ ಸಂಸದ ಬಿ.ವೈ.ರಾಘವೇಂದ್ರ ಸಂಸತ್ತಿನಲ್ಲಿ ಧ್ವನಿ

KannadaprabhaNewsNetwork |  
Published : Mar 17, 2026, 01:45 AM IST
ಪೊಟೊ: 16ಎಸ್‌ಎಂಜಿಕೆಪಿ05 | Kannada Prabha

ಸಾರಾಂಶ

ಶಿವಮೊಗ್ಗ ಹಾಗೂ ಮಲೆನಾಡು ಭಾಗದ ದಶಕಗಳ ರೈಲ್ವೆ ಕನಸುಗಳನ್ನು ನನಸಾಗಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಮೂಲಕ ಮತ್ತೊಮ್ಮೆ ಕ್ಷೇತ್ರದ ಅಭಿವೃದ್ಧಿಗಾಗಿ ಸಂಸತ್ತಿನಲ್ಲಿ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಧ್ವನಿ ಎತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಶಿವಮೊಗ್ಗ ಹಾಗೂ ಮಲೆನಾಡು ಭಾಗದ ದಶಕಗಳ ರೈಲ್ವೆ ಕನಸುಗಳನ್ನು ನನಸಾಗಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಮೂಲಕ ಮತ್ತೊಮ್ಮೆ ಕ್ಷೇತ್ರದ ಅಭಿವೃದ್ಧಿಗಾಗಿ ಸಂಸತ್ತಿನಲ್ಲಿ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಧ್ವನಿ ಎತ್ತಿದ್ದಾರೆ.

ಕೇಂದ್ರ ಬಜೆಟ್ 2026-27ರ ರೈಲ್ವೆ ಅನುದಾನ ಬೇಡಿಕೆಗಳ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತವು ''''''''ವಿಳಂಬ ಗತಿಯಿಂದ, ಅತಿ ವೇಗದ ವಿತರಣೆಯ'''''''' ಯುಗಕ್ಕೆ ಕಾಲಿಟ್ಟಿದೆ ಎಂದು ಶ್ಲಾಘಿಸಿದರು.

ಕರ್ನಾಟಕದ ರೈಲ್ವೆ ಯೋಜನೆಗಳಿಗೆ ಈ ಬಾರಿ ದಾಖಲೆಯ 7,748 ಕೋಟಿ ರು. ಅನುದಾನ ನೀಡಿದ್ದಕ್ಕಾಗಿ ಮೋದಿ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದರು. ಹಿಂದಿನ ಯುಪಿಎ ಸರ್ಕಾರಕ್ಕೆ ಹೋಲಿಸಿದರೆ ಕರ್ನಾಟಕಕ್ಕೆ ಸಿಗುತ್ತಿರುವ ರೈಲ್ವೆ ಅನುದಾನದಲ್ಲಿ ಒಂಬತ್ತು ಪಟ್ಟು ಹೆಚ್ಚಳವಾಗಿದೆ ಎಂದು ಅವರು ಅಂಕಿ-ಅಂಶಗಳ ಸಮೇತ ವಿವರಿಸಿದರು.

ಶಿವಮೊಗ್ಗವನ್ನು ಪ್ರಮುಖ ರೈಲ್ವೆ ಸಂಪರ್ಕ ಕೇಂದ್ರವನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಸಂಸದರು ಹಲವು ಪ್ರಮುಖ ಯೋಜನೆಗಳ ಶೀಘ್ರ ಅನುಷ್ಠಾನಕ್ಕೆ ಸದನದಲ್ಲೇ ಹಾಜರಿದ್ದ ರೈಲ್ವೆ ಸಚಿವರನ್ನು ಒತ್ತಾಯಿಸಿದ್ದು ವಿಶೇಷವಾಗಿತ್ತು. ಪ್ರಮುಖವಾಗಿ ಮಲೆನಾಡು ಹಾಗೂ ಉತ್ತರ ಕರ್ನಾಟಕವನ್ನು ಸಂಪರ್ಕಿಸುವ ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ರೈಲ್ವೆ ಯೋಜನೆಯನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು ಮತ್ತು ಶಿಕಾರಿಪುರದಿಂದ ರಾಣೆಬೆನ್ನೂರುವರೆಗಿನ ಎರಡನೇ ಹಂತದ ಕಾಮಗಾರಿಗೆ ಕೂಡಲೇ ಟೆಂಡರ್ ಕರೆಯುವಂತೆ ಮನವಿ ಮಾಡಿದರು. ಈ ಯೋಜನೆಯ ಸಾಕಾರಕ್ಕಾಗಿ ರಾಜ್ಯ ಸರ್ಕಾರದ ವತಿಯಿಂದ 50:50 ವೆಚ್ಚ ಹಂಚಿಕೆ ಹಾಗೂ ಭೂಸ್ವಾಧೀನ ಪ್ರಕ್ರಿಯೆಗೆ ಶ್ರಮಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಕೊಡುಗೆಯನ್ನು ಸಂಸದರು ಇದೇ ವೇಳೆ ಸ್ಮರಿಸಿದರು. ಶಿವಮೊಗ್ಗದ ಕೋಟೆಗಂಗೂರು ಕೋಚಿಂಗ್ ಟರ್ಮಿನಲ್‌ನ ಎರಡನೇ ಹಂತದ ಕಾಮಗಾರಿಗೆ ತಕ್ಷಣದ ಅನುಮೋದನೆ ನೀಡಬೇಕು ಮತ್ತು ಎರಡನೇ ಪೂರ್ಣ ಪ್ರಮಾಣದ ಪಿಟ್ ಲೈನ್ ಹಾಗೂ ಸ್ವಯಂಚಾಲಿತ ಕೋಚ್ ವಾಷಿಂಗ್ ಪ್ಲಾಂಟ್ ಸ್ಥಾಪಿಸಬೇಕು ಎಂದು ಪ್ರತಿಪಾದಿಸಿದರು.

ಇವುಗಳ ಜೊತೆಗೆ ಶಿವಮೊಗ್ಗದಿಂದ ವಂದೇ ಭಾರತ್ ರೈಲುಗಳ ಕಾರ್ಯಾಚರಣೆ ಪ್ರಾರಂಭಿಸಲು ಈ ಟರ್ಮಿನಲ್ ಅಗತ್ಯವನ್ನು ಒತ್ತಿ ಹೇಳಿದ ಸಂಸದರು, ಇದರೊಂದಿಗೆ ಬೀರೂರು-ಶಿವಮೊಗ್ಗ ರೈಲ್ವೆ ಹಳಿ ಜೋಡಿ ಮಾರ್ಗ ಯೋಜನೆಗೆ ಕೂಡಲೇ ಆಡಳಿತಾತ್ಮಕ ಮಂಜೂರಾತಿ ನೀಡುವಂತೆ ಆಗ್ರಹಿಸಿದರು.

ತೀರ್ಥಹಳ್ಳಿ, ಸೊರಬಕ್ಕೆ ರೈಲ್ವೆ ಸಂಪರ್ಕ ಯೋಜನೆಗಳ ಶೀಘ್ರ ಅನುಷ್ಠಾನಕ್ಕೆ ಒತ್ತಾಯ: ಮಲೆನಾಡಿನ ಸಾಂಸ್ಕೃತಿಕ ಕೇಂದ್ರ, ಕುವೆಂಪು ಜನ್ಮಭೂಮಿ ತೀರ್ಥಹಳ್ಳಿಗೆ ರೈಲು ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಶಿವಮೊಗ್ಗ-ತೀರ್ಥಹಳ್ಳಿ-ಶೃಂಗೇರಿ-ಮಂಗಳೂರು ಹಾಗೂ ಶಿವಮೊಗ್ಗ-ತೀರ್ಥಹಳ್ಳಿ-ಶೃಂಗೇರಿ-ಚಿಕ್ಕಮಗಳೂರು ರೈಲು ಮಾರ್ಗದ ಸಮೀಕ್ಷೆಯನ್ನು ವೇಗಗೊಳಿಸಬೇಕು ಎಂದು ಮನವಿ ಮಾಡಿದರು.

ತಾಳಗುಪ್ಪ-ಸಿದ್ದಾಪುರ-ಶಿರಸಿ-ಹುಬ್ಬಳ್ಳಿ ಮಾರ್ಗವನ್ನು ಸೊರಬದ ಮೂಲಕವೇ ಹಾದುಹೋಗುವಂತೆ ಮಾಡುವ ಮೂಲಕ ಅರಣ್ಯ ನಾಶವನ್ನು ತಡೆಗಟ್ಟುವ ಮತ್ತು ಸೊರಬಕ್ಕೆ ರೈಲ್ವೆ ಸಂಪರ್ಕ ಕಲ್ಪಿಸುವ ಸಾರ್ವಜನಿಕರ ಬೇಡಿಕೆಯನ್ನು ಈಡೇರಿಸುವ ಮಹತ್ವಪೂರ್ಣ ಪ್ರಸ್ತಾಪವನ್ನು ರಾಘವೇಂದ್ರ ಮುಂದಿಟ್ಟರು. ಇದರ ಜೊತೆಗೆ ಬೈಂದೂರಿಗೆ ಸಂಬಂಧಪಟ್ಟಂತೆ ಪ್ರಯಾಣಿಕರ ಅನುಕೂಲತೆ ಹೆಚ್ಚಿಸುವ ಬದ್ಧತೆಯ ಭಾಗವಾಗಿ, ಸಂಸದರು ಮೂಕಾಂಬಿಕಾ ರಸ್ತೆ ಬೈಂದೂರು ರೈಲು ನಿಲ್ದಾಣದಲ್ಲಿ ಎರ್ನಾಕುಲಂ-ಪುಣೆ ಎಕ್ಸ್ ಪ್ರೆಸ್, ತಿರುವನಂತಪುರಂ-ನಿಜಾಮುದ್ದೀನ್ ಎಕ್ಸ್ ಪ್ರೆಸ್, ಕೊಚಿವೇಲಿ-ಹೃಷೀಕೇಶ್ ಎಕ್ಸ್ ಪ್ರೆಸ್, ಮಂಗಳ ಲಕ್ಷದ್ವೀಪ್ ಎಕ್ಸ್ ಪ್ರೆಸ್ - ಈ ನಾಲ್ಕು ಎಕ್ಸ್‌ಪ್ರೆಸ್ ರೈಲುಗಳಿಗೆ ನಿಲುಗಡೆ ಒದಗಿಸುವಂತೆ ಒತ್ತಾಯಿಸಿದರು.

ಪ್ರಧಾನಿ ಮೋದಿಯವರ ವಿಕಸಿತ ಭಾರತ ಸಂಕಲ್ಪಕ್ಕೆ ಪೂರಕವಾಗಿ ಶಿವಮೊಗ್ಗ ಕೂಡ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದ್ದು, ಮುಂದಿನ ದಿನಗಳಲ್ಲೂ ಕೇಂದ್ರ ಸರ್ಕಾರದ ಸಹಕಾರ ಇದೇ ರೀತಿ ಮುಂದುವರಿಯಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಲಾ ನಿರ್ಮಾಣಕ್ಕಾಗಿ ಭೂ ಸ್ವಾಧೀನ; ರೈತರಿಗೆ ವೈಜ್ಞಾನಿಕ ಪರಿಹಾರ ನೀಡದೆ ತಾರತಮ್ಯ
ಐದಳ್ಳ ಕಾವಲು ಭೂಮಿ ಬಿಡಲ್ಲ ಎಂದು ರೈತರ ಪ್ರತಿಭಟನೆ