ಸೇವಾ ನಿವೃತ್ತ ಯೋಧರ ಪರ ಲೋಕಸಭೆಯಲ್ಲಿ ಶೂನ್ಯವೇಳೆಯಲ್ಲಿ ಧ್ವನಿಯೆತ್ತಿದ ಸಂಸದ ಕ್ಯಾ. ಚೌಟ

KannadaprabhaNewsNetwork |  
Published : Dec 13, 2025, 03:15 AM IST
32 | Kannada Prabha

ಸಾರಾಂಶ

ದೇಶಕ್ಕಾಗಿ ಸೇವೆ ಸಲ್ಲಿಸಿರುವ ನಮ್ಮ ಯೋಧರು ಹಾಗೂ ಅವರ ಕುಟುಂಬದವರಿಗೆ ಜಾರಿಯಲ್ಲಿರುವ ಮಾಜಿ ಸೈನಿಕರ ಕೊಡುಗೆ ಆರೋಗ್ಯ ಯೋಜನೆ (ECHS)ಯಡಿ ವೈದ್ಯಕೀಯ ವೆಚ್ಚದ ಬಿಲ್‌ ಪಾವತಿ ವಿಳಂಬದ ಬಗ್ಗೆ ಗುರುವಾರ ಅವರು ಲೋಕಸಭೆಯಲ್ಲಿ ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿದ್ದಾರೆ.

ಮಂಗಳೂರು: ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ಮಾಜಿ ಸೈನಿಕರ ಪರವಾಗಿ ಸದನದಲ್ಲಿ ಧ್ವನಿಯೆತ್ತಿದ್ದು, ದೇಶಕ್ಕಾಗಿ ಸೇವೆ ಸಲ್ಲಿಸಿರುವ ನಮ್ಮ ಯೋಧರು ಹಾಗೂ ಅವರ ಕುಟುಂಬದವರಿಗೆ ಜಾರಿಯಲ್ಲಿರುವ ಮಾಜಿ ಸೈನಿಕರ ಕೊಡುಗೆ ಆರೋಗ್ಯ ಯೋಜನೆ (ECHS)ಯಡಿ ವೈದ್ಯಕೀಯ ವೆಚ್ಚದ ಬಿಲ್‌ ಪಾವತಿ ವಿಳಂಬದ ಬಗ್ಗೆ ಗುರುವಾರ ಅವರು ಲೋಕಸಭೆಯಲ್ಲಿ ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿದ್ದಾರೆ.ಈ ಗಂಭೀರ ವಿಚಾರದ ಬಗ್ಗೆ ಯೋಧರಾಗಿಯೂ ಸದನದ ಗಮನಸೆಳೆದಿರುವ ಕ್ಯಾ. ಚೌಟ ಅವರು, ಸೇವೆಯಿಂದ ನಿವೃತ್ತಿ ಪಡೆದ ಸೈನಿಕರ ಚಿಕಿತ್ಸಾ ವೆಚ್ಚದ ಬಿಲ್‌ಗಳು ಸಕಾಲದಲ್ಲಿ ಮರುಪಾವತಿಯಾಗದೆ ದೀರ್ಘ ವಿಳಂಬ ಆಗುತ್ತಿರುವ ಕಾರಣದಿಂದ ಖಾಸಗಿ ಆಸ್ಪತ್ರೆಗಳು ಈ ECHS ಯೋಜನೆಯಿಂದ ಹಿಂದೆ ಸರಿಯುತ್ತಿರುವ ಬಗ್ಗೆ ಕಳವಳ ಕೂಡ ವ್ಯಕ್ತಪಡಿಸಿದ್ದಾರೆ.

ಯೋಧನಾಗಿ ದೇಶಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಸೇವೆಯಿಂದ ನಿವೃತ್ತರಾದ ಸೈನಿಕರು ಮತ್ತು ಅವರ ಅವಲಂಬಿತರು ಚಿಕಿತ್ಸೆ ಸಂದರ್ಭದಲ್ಲಿ ಎದುರಿಸುತ್ತಿರುವ ತೊಂದರೆಗಳನ್ನು ಸದನದ ಮುಂದಿಡುವುದು ನನ್ನ ಕರ್ತವ್ಯವಾಗಿದೆ. ಪ್ರಧಾನಿಮಂತ್ರಿ ನರೇಂದ್ರ ಮೋದಿ ನೇತೃತ್ವದ ನಮ್ಮ ಸರ್ಕಾರ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮತ್ತು ನಿವೃತ್ತರಾದ ಯೋಧರು ಹಾಗೂ ಅವರ ಕುಟುಂಬಗಳ ಕಲ್ಯಾಣಕ್ಕೆ ಬದ್ಧವಾಗಿದೆ. ಹೀಗಿರುವಾಗ, ECHS ಯೋಜನೆಯಲ್ಲಿನ ಈ ನಿರ್ವಹಣೆ ಲೋಪವನ್ನು ಸಚಿವಾಲಯ ತುರ್ತಾಗಿ ಗಮನಹರಿಸಿ ಅಗತ್ಯ ಕ್ರಮ ತೆಗೆದುಕೊಳ್ಳುತ್ತದೆ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದ್ದಾರೆ.ವಿಶಿಷ್ಟ ಮಿಲಿಟರಿ ಪರಂಪರೆಗೆ ಹೆಸರಾದ ನೆರೆಯ ಜಿಲ್ಲೆ ಕೊಡಗಿನ ಪರಿಸ್ಥಿತಿಯ ಬಗ್ಗೆ ಉದಾಹರಿಸಿದ ಸಂಸದರು, ಆ ಜಿಲ್ಲೆಯಲ್ಲಿ ECHS-ಗೆ ನೊಂದಾಯಿತ ಖಾಸಗಿ ಆಸ್ಪತ್ರೆಗಳ ಕೊರತೆಯಿಂದಾಗಿ, ಸೇವೆಯಿಂದ ನಿವೃತ್ತರಾಗಿರುವ ಇಲ್ಲಿನ ಹಿರಿಯ ಯೋಧರು ಪ್ರಾಥಮಿಕ ವೈದ್ಯಕೀಯ ಚಿಕಿತ್ಸೆಗೂ ಬೆಟ್ಟ-ಗುಡ್ಡಗಳ ದಾರಿಯಲ್ಲಿ 100-150 ಕಿ.ಮೀ ದೂರ ಪ್ರಯಾಣಿಸಬೇಕಾದ ಅನಿವಾರ್ಯತೆಯಿದೆ. ಇಂಥಹ ಸನ್ನಿವೇಶಗಳ ನಡುವೆ, ಚಿಕಿತ್ಸಾ ವೆಚ್ಚ ವಿಳಂಬ ಪಾವತಿಗಳಿಂದಾಗಿ ದೇಶಾದ್ಯಂತ ಹಲವು ಆಸ್ಪತ್ರೆಗಳು ಈ ಯೋಜನೆಯಲ್ಲಿ ಮುಂದುವರಿಯದೆ ಹಿಂದೆ ಸರಿಯುತ್ತಿರುವುದು ಈ ಸಮಸ್ಯೆಯ ಮತ್ತಷ್ಟು ಗಂಭೀರತೆಯನ್ನು ಎತ್ತಿ ತೋರಿಸುತ್ತದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.ECHS ವ್ಯವಸ್ಥೆಯಡಿ ಪ್ರಸ್ತುತ ವಾರ್ಷಿಕವಾಗಿ ಒಂದು ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ಚಿಕಿತ್ಸಾ ಸೌಲಭ್ಯ ಒದಗಿಸಲಾಗುತ್ತಿದೆ. ಆದರೆ ಈ ಚಿಕಿತ್ಸಾ ವೆಚ್ಚ ಪಾವತಿ ವಿಳಂಬ ಇಡೀ ವ್ಯವಸ್ಥೆಯ ಮೇಲಿನ ವಿಶ್ವಾಸಾರ್ಹತೆಯನ್ನು ಕುಗ್ಗಿಸುವುದರಿಂದ, ನಿವೃತ್ತ ಯೋಧರಿಗೆ ಈ ಆರೋಗ್ಯ ಸೇವೆಯಡಿ ಯಾವುದೇ ವಿಳಂಬವಾಗದೆ ಕಾಲಮಿತಿಯೊಳಗೆ ಚಿಕಿತ್ಸಾ ವೆಚ್ಚ ಪಾವತಿಯಾಗಬೇಕು. ಈ ಹಿನ್ನಲೆಯಲ್ಲಿ ರಕ್ಷಣಾ ಸಚಿವರು ಈ ಕೂಡಲೇ ಗಮನಹರಿಸಿ ECHS ಯೋಜನೆ ಅನುಷ್ಠಾನದಲ್ಲಿನ ನ್ಯೂನತೆ ಸರಿಪಡಿಸಿ ಸಕಾಲದಲ್ಲಿ ಸೈನಿಕ ಸಮುದಾಯದ ಅರ್ಹ ಫಲಾನುಭವಿಗಳ ಚಿಕಿತ್ಸಾ ವೆಚ್ಚ ಪಾವತಿಯಾಗುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಕ್ಯಾ. ಚೌಟ ಒತ್ತಾಯಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಶೇಷ ಅಗತ್ಯತೆಯುಳ್ಳ 50 ಮಕ್ಕಳ ವೈದ್ಯಕೀಯ ಮೌಲ್ಯಾಂಕನ: ಟಿ. ಮಂಜುನಾಥ್
ಕ್ರೀಡಾಂಗಣ ಕಟ್ಟಲು ಸ್ಥಳ ಮಂಜೂರು