ಪುತ್ತೂರು ನಗರಸಭಾ ಡಂಪಿಂಗ್ ಯಾರ್ಡ್‌ಗೆ ಸಂಸದ ಕ್ಯಾ. ಚೌಟ ಭೇಟಿ, ಪರಿಶೀಲನೆ

KannadaprabhaNewsNetwork |  
Published : Oct 29, 2025, 11:15 PM IST
ಫೋಟೋ: ೨೭ಪಿಟಿಆರ್-ಡಂಪಿಂಗ್ಡಂಪಿಂಗ್ ಯಾರ್ಡ್ ಗೆ ಖರೀದಿಸಿದ ಹೊಸ ಜೇಸಿಬಿಯನ್ನು ಸಂಸದರು ಲೋಕಾರ್ಪಣೆಗೊಳಿಸಿದರು. | Kannada Prabha

ಸಾರಾಂಶ

ಸೋಮವಾರ ಪುತ್ತೂರು ನಗರಸಭಾ ವ್ಯಾಪ್ತಿಯ ಬನ್ನೂರಿನಲ್ಲಿರುವ ಡಂಪಿಂಗ್ ಯಾರ್ಡ್ ಗೆ ಭೇಟಿ ನೀಡಿದ ಸಂಸದ ಕ್ಯಾ.ಬ್ರಿಜೇಶ್ ಚೌಟ ಪರಿಶೀಲನೆ ನಡೆಸಿದರು.

ಪುತ್ತೂರು: ನಗರಸಭೆ ಸಾರ್ವಜನಿಕ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಶೂನ್ಯ ತ್ಯಾಜ್ಯ ಯೋಜನೆ ಜಾರಿಗೊಳಿಸುತ್ತಿರುವುದು ಭವಿಷ್ಯದ ಪುತ್ತೂರಿಗೆ ಬಹುದೊಡ್ಡ ಕೊಡುಗೆಯಾಗಿದೆ. ಹಸಿ ಕಸವೆಲ್ಲವೂ ಇಲ್ಲಿ ಬಯೋಗ್ಯಾಸ್ ಆಗಿ ಮಾರ್ಪಾಟುಗೊಳ್ಳುತ್ತಿದೆ. ಕೇಂದ್ರ ಸರ್ಕಾರವು ಸ್ವಚ್ಛ ಭಾರತ್ ಮಿಶನ್ ಯೋಜನೆಯಲ್ಲಿ ನೀಡಿದ ಅನುದಾನದಲ್ಲಿ ಪಾರಂಪರಿಕ ತ್ಯಾಜ್ಯ ನಿರ್ವಹಣೆ ಮಾಡಲಾಗುತ್ತಿದೆ ಎಂದು ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದ್ದಾರೆ.

ಸೋಮವಾರ ಪುತ್ತೂರು ನಗರಸಭಾ ವ್ಯಾಪ್ತಿಯ ಬನ್ನೂರಿನಲ್ಲಿರುವ ಡಂಪಿಂಗ್ ಯಾರ್ಡ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇಲ್ಲಿನ ಡಂಪಿಂಗ್ ಯಾರ್ಡ್ ನ್ನು ಸಂಪೂರ್ಣವಾಗಿ ಶೂನ್ಯ ತ್ಯಾಜ್ಯ(ಝೀರೋ ವೇಸ್ಟ್) ಪ್ರದೇಶವಾಗಿ ಮಾರ್ಪಡಿಸುವ ನಿಟ್ಟಿನಲ್ಲಿ ಯೋಜನೆಗಳು ಕಾರ್ಯಗತಗೊಳ್ಳುತ್ತಿದ್ದು, ಯಾರ್ಡ್ ನಲ್ಲಿರುವ ಸಿಎನ್‌ಜಿ ಘಟಕ ಮತ್ತು ಎಂಆರ್‌ಎಫ್ ಘಟಕಗಳು ಕಾರ್ಯಾರಂಭಗೊಳ್ಳಲಿದೆ. ಸಂಸದರು ಘಟಕಗಳ ಪರಿಶೀಲನೆ ನಡೆಸಿ ನೂತನವಾಗಿ ಅನುಷ್ಠಾನಗೊಳ್ಳುತ್ತಿರುವ ಯೋಜನೆಗಳ ಕುರಿತು ಮಾಹಿತಿ ಪಡೆದುಕೊಂಡರು.

ಸಂಸದರಿಗೆ ಮಾಹಿತಿ ನೀಡಿದ ನಗರಸಭಾ ಅಧಿಕಾರಿಗಳು ಘಟಕದಲ್ಲಿ ೧೯೯೦ ರಿಂದ ಸಂಗ್ರಹಗೊಂಡ ಸುಮಾರು ೩೬,೭೭೫ ಟನ್ ಹಳೆಯ ತ್ಯಾಜ್ಯ (ಪಾರಂಪರಿಕ) ರಾಶಿಯಿದ್ದು, ಇದನ್ನು ವಿಲೇವಾರಿ ಮಾಡಲು ಮೆಗಾ ಯೋಜನೆ ಜಾರಿಗೊಳಿಸಲಾಗುತ್ತಿದೆ. ಕೇಂದ್ರ ಸರ್ಕಾರದ ಸ್ವಚ್ಛ ಭಾರತ್ ಮಿಶನ್ ೨.೦ ಯೋಜನೆಯಲ್ಲಿ ರು.೩ ಕೋಟಿ ರು. ಮಂಜೂರಾಗಿದೆ. ಹಳೆ ತ್ಯಾಜ್ಯ ಖಾಲಿ ಮಾಡುವ ಯೋಜನೆ ಆರಂಭಗೊಂಡಿದೆ. ಈಗಾಗಲೇ ೩,೬೦೦ ಟನ್ ಹಳೆ ತ್ಯಾಜ್ಯ ಸಂಸ್ಕರಣೆ ಮಾಡಿ ೩ ಹಂತದಲ್ಲಿ ಬೇರ್ಪಡಿಸಲಾಗುತ್ತಿದೆ. ಪ್ರಗತಿಯಲ್ಲಿರುವ ಕಾಮಗಾರಿಯನ್ನು ಸಂಸದರು ವೀಕ್ಷಿಸಿದರು.

ಮುಂದಿನ ಮಾರ್ಚ್ ವೇಳೆ ಪಾರಂಪರಿಕ ತ್ಯಾಜ್ಯ ಶೂನ್ಯ ಸ್ಥಿತಿಗೆ ಬರಲಿದೆ. ರೋಟರಿ ಕ್ಲಬ್ ಪುತ್ತೂರು ಪೂರ್ವ, ರೋಟರಿ ಚ್ಯಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ಕೃಷ್ಣ ಮುಳಿಯ ಗ್ರೀನ್ ಎಲ್‌ಎಲ್‌ಪಿ ಮತ್ತು ರೀಟ್ಯಾಪ್ ಸೊಲ್ಯೂಶನ್ ಸಂಸ್ಥೆಗಳು ಜಂಟಿಯಾಗಿ ಯಾರ್ಡ್‌ನಲ್ಲಿ ಬಯೋಗ್ಯಾಸ್ ಘಟಕ ಸ್ಥಾಪಿಸಿವೆ. ಇಲ್ಲಿಗೆ ಬರುವ ಹಸಿ ಕಸ ಬಳಸಿಕೊಂಡು ಸಿಎನ್‌ಜಿ (ಬಯೋ ಗ್ಯಾಸ್) ಉತ್ಪಾದಿಸುತ್ತಿವೆ. ಪೆಸೋ ಲೈಸೆನ್ಸ್ ಸಿಕ್ಕಿದ ತಕ್ಷಣ ಸಿಎನ್‌ಜಿ ಮಾರಾಟ ಆರಂಭವಾಗಲಿದೆ. ಒಣ ಕಸ ಸ್ವೀಕರಿಸಿ, ಬೇರ್ಪಡಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಎಂಆರ್‌ಎಫ್ ಘಟಕ ೧.೬೦ ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಗಿದೆ. ಕಟ್ಟಡ ಕಾಮಗಾರಿ ಪೂರ್ತಿಗೊಂಡಿದ್ದು, ಯಂತ್ರ ಅಳವಡಿಕೆ ನಡೆಯಬೇಕಿದೆ ಎಂದು ಮಾಹಿತಿ ನೀಡಿದರು.

ಸಂಸದರು ಯೋಜನೆ ಕಾರ್ಯಗತಗೊಳಿಸಿರುವ ಕೃಷ್ಣ ಮುಳಿಯ ಗ್ರೀನ್ ಎಲ್‌ಎಲ್‌ಪಿ ಸಂಸ್ಥೆಯ ಕೃಷ್ಣ ನಾರಾಯಣ ಮುಳಿಯ ಮತ್ತು ರೀಟ್ಯಾಪ್ ಸೊಲ್ಯೂಶನ್ ಸಂಸ್ಥೆಯ ಪ್ರಶಾಂತ್ ದೇವಾಡಿಗ ಮತ್ತು ಭವ್ಯಾ ದಾಮೋದರ್ ಅವರನ್ನು ಶ್ಲಾಘಿಸಿದರು. ನಗರಸಭೆ ವ್ಯಾಪ್ತಿಯಲ್ಲಿ ನಿತ್ಯ ಸಂಗ್ರಹಗೊಳ್ಳುವ ತ್ಯಾಜ್ಯ ಪ್ರಮಾಣ, ಪೌರ ಕಾರ್ಮಿಕರ ಸಂಖ್ಯೆ, ಸಂಗ್ರಹ ವ್ಯವಸ್ಥೆ ಮತ್ತಿತರ ವ್ಯವಸ್ಥೆಗಳ ಬಗ್ಗೆ ಅಧಿಕಾರಿಗಳು ಸಂಸದರಿಗೆ ಮಾಹಿತಿ ನೀಡಿದರು.ನಗರಸಭೆಯ ೧೫ನೇ ಹಣಕಾಸು ನಿಧಿಯಲ್ಲಿ ರು. ೨೬ ಲಕ್ಷ ವೆಚ್ಚದಲ್ಲಿ ಡಂಪಿಂಗ್ ಯಾರ್ಡ್‌ಗೆ ಖರೀದಿಸಲಾದ ಹೊಸ ಜೇಸಿಬಿಯನ್ನು ಸಂಸದರು ಲೋಕಾರ್ಪಣೆಗೊಳಿಸಿದರು.

ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು, ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ಉಪಾಧ್ಯಕ್ಷ ಬಾಲಚಂದ್ರ ಕೆಮ್ಮಿಂಜೆ, ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು, ನಗರಸಭೆ ಮಾಜಿ ಅಧ್ಯಕ್ಷ ಜೀವಂಧರ ಜೈನ್, ನಗರಸಭೆ ಸದಸ್ಯರು, ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಪಿ.ಬಿ., ಮುಖಂಡ ಹರಿಪ್ರಸಾದ್ ಯಾದವ್, ಕೃಷ್ಣ ಮುಳಿಯ ಗ್ರೀನ್ ಎಲ್‌ಎಲ್‌ಪಿಯ ಕೃಷ್ಣ ನಾರಾಯಣ ಮುಳಿಯ, ರೀಟ್ಯಾಪ್ ಸೊಲ್ಯೂಶನ್ ಸಂಸ್ಥೆಯ ಪ್ರಶಾಂತ್ ದೇವಾಡಿಗ, ಭವ್ಯಾ ದಾಮೋದರ್, ಪ್ರಾಜೆಕ್ಟ್ ಡೈರೆಕ್ಟರ್ ಡಾ.ರಾಜೇಶ್ ಬೆಜ್ಜಂಗಳ, ನಗರಸಭೆ ಇಂಜಿನಿಯರ್‌ಗಳು ಉಪಸ್ಥಿತರಿದ್ದರು.

PREV

Recommended Stories

ನವೆಂಬರ್‌ ಕ್ರಾಂತಿ ಬಗ್ಗೆ ಚರ್ಚಿಸಿ ದಣಿವು ಮಾಡ್ಕೊಬೇಡಿ - ಶಿವಕುಮಾರ್‌ ಸಲಹೆ
ಹಣೆಯಲ್ಲಿ ಬರೆದಿದ್ದರೆ ಡಿಕೆಶಿ ಸಿಎಂ ಆಗ್ತಾರೆ ಇಲ್ದಿದ್ರೆ ಇಲ್ಲ : ಡಿಕೆಸು