ಕನ್ನಡಪ್ರಭ ವಾರ್ತೆ ಮಂಗಳೂರುಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ‘ಹರ್ ಘರ್ ತಿರಂಗಾ’ ಅಭಿಯಾನವನ್ನು ದೇಶದೆಲ್ಲೆಡೆ ಸಾರ್ಥಕಗೊಳಿಸುವಂತೆ ಪ್ರಧಾನಿ ಮೋದಿ ಅವರು ಈಗಾಗಲೇ ಕರೆ ನೀಡಿದ್ದಾರೆ. ಅದರಂತೆ ದ.ಕ. ವ್ಯಾಪ್ತಿಯ ಎಲ್ಲ ಪಿಎಂ ಆವಾಸ್ ಫಲಾನುಭವಿಗಳ ಯೋಜನೆ ಮನೆಗಳ ಮೇಲೂ ತ್ರಿವರ್ಣ ಧ್ವಜ ಹಾರಾಡಿಸುವ ವಿನೂತನ ಪ್ರಯತ್ನಕ್ಕೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಮುಂದಾಗಿದ್ದಾರೆ.
ಹರ್ ಘರ್ ಅಭಿಯಾನದ ಪ್ರಯುಕ್ತ ನಮ್ಮ ಎಲ್ಲ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಜನಪ್ರತಿನಿಧಿಗಳು, ಮಹಾನಗರ ಪಾಲಿಕೆ ಸದಸ್ಯರು ಪಿಎಂ ಆವಾಜ್ ಯೋಜನೆ ಫಲಾನುಭವಿಗಳ ಮನೆಗಳಿಗೆ ಭೇಟಿ ಕೊಟ್ಟು ಹೆಚ್ಚಿನ ಸಂಖ್ಯೆ ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಾಡಿಸುವಂತೆ ಪ್ರೇರಣೆ, ಉತ್ತೇಜನ ನೀಡಬೇಕು. ಆ ಮೂಲಕ ಅವರೊಂದಿಗೆ ಪ್ರಧಾನಿ ಮೋದಿ ಅವರ ವಿಷನ್ ಹಂಚಿಕೊಳ್ಳುವಂತೆ ಸಂಸದರು ಮನವಿ ಮಾಡಿದ್ದಾರೆ.
ಪ್ರತಿಯೊಂದು ಪಿಎಂ ಅವಾಜ್ ಮನೆಯೂ ನಮ್ಮ ದೇಶದ ಬಡವರು, ಮಹಿಳೆಯರು ಮತ್ತು ಯುವಕರ ಬಗ್ಗೆ ನಮ್ಮ ಪ್ರಧಾನಿಯವರ ಕಾಳಜಿಯ ಸಂಕೇತವಾಗಿದೆ. ಹೀಗಿರುವಾಗ ಅಂತಹ ಮನೆಗಳ ಮೇಲೆ ನಮ್ಮ ತ್ರಿವರ್ಣ ಹಾರಿಸುವ ಮೂಲಕ ಅವರನ್ನು ರಾಷ್ಟ್ರೀಯತೆಯ ದಾರದಿಂದ ಒಗ್ಗೂಡಿಸುವ ಪ್ರಯತ್ನವಾಗಿದೆ ಎಂದು ಅವರು ವಿವರಿಸಿದ್ದಾರೆ.ತ್ರಿವರ್ಣ ದ್ವಜದ ಬಗ್ಗೆ ಹಾಗೂ ತಮ್ಮ ಸೇನಾ ಅನುಭವದ ಬಗ್ಗೆ ಮಾತನಾಡುತ್ತಾ, ನಮ್ಮ ದೇಶದ ಸೈನಿಕರ ಪಾಲಿಗೆ ತ್ರಿವರ್ಣ ದ್ವಜ ಎನ್ನುವುದು ಅವರ ಪಾಲಿನ ಉಸಿರು. ದೇಶದ ಪ್ರತೀಕವಾದ ಧ್ವಜಕ್ಕಾಗಿಯೇ ಬದುಕುತ್ತಾನೆ ಮತ್ತು ಸಾಯುತ್ತಾನೆ. ಪ್ರತಿ ಸೈನಿಕನೂ ದೇಶಕ್ಕಾಗಿ ವೀರಮರಣ ಹೊಂದಿ ಧ್ವಜದಲ್ಲಿ ಸುತ್ತಿ ಮನೆಗೆ ಹಿಂದಿರುಗುವ ಕನಸು ಕಾಣುತ್ತಾನೆ. ಬದುಕಿರುವ ಪ್ರತಿ ಕ್ಷಣವೂ ತಿರಂಗವನ್ನು ಇನ್ನಷ್ಟು ಎತ್ತರದಲ್ಲಿ ಹಾರಾಡಬೇಕೆನ್ನುವ ದೃಢಸಂಕಲ್ಪ ಹೊಂದಿರುತ್ತಾರೆ ಎಂದು ಹೇಳಿದರು.
ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ಸ್ಥಳೀಯ ಬಿಜೆಪಿ ಮುಖಂಡರು ಹಾಗೂ ಬಿಜೆಪಿ ಕಾರ್ಯಕರ್ತರು ಮತ್ತಿತರರಿದ್ದರು.