ಶ್ರಾವಣ ಮಾಸದ ಪ್ರವಚನದಿಂದ ಆತ್ಮಶುದ್ಧಿ-ಸದಾಶಿವ ಸ್ವಾಮೀಜಿ

KannadaprabhaNewsNetwork |  
Published : Aug 14, 2024, 01:00 AM IST
೧೩ಎಚ್‌ವಿಆರ್೧ | Kannada Prabha

ಸಾರಾಂಶ

ಶ್ರಾವಣ ಮಾಸದ ಪ್ರವಚನ ಎಂದರೆ ಮಹಾತ್ಮರ ಸ್ಮರಣೆ ಮಾತ್ರವಲ್ಲ, ಮಹಾಮಹಿಮರ ಜೀವನ ದರ್ಶನದ ಶ್ರವಣದಿಂದ ಸಂಕಲ್ಪ, ಸಂಕಲ್ಪದಿಂದ ದೇಹವು ಪ್ರಸಾದಕಾಯವಾಗಿ, ತಪೋಶಕ್ತಿ ವೃದ್ಧಿಸಿ, ನಮ್ಮ ಬದುಕಿಗೆ ಪ್ರೇರಕಶಕ್ತಿಯಾಗಿ ನಿರ್ಮಲ ಮನಸ್ಸಿನಿಂದ ಆತ್ಮಶುದ್ಧಿಯಾಗುತ್ತದೆ ಎಂದು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹೇಳಿದರು.

ಹಾವೇರಿ: ಶ್ರಾವಣ ಮಾಸದ ಪ್ರವಚನ ಎಂದರೆ ಮಹಾತ್ಮರ ಸ್ಮರಣೆ ಮಾತ್ರವಲ್ಲ, ಮಹಾಮಹಿಮರ ಜೀವನ ದರ್ಶನದ ಶ್ರವಣದಿಂದ ಸಂಕಲ್ಪ, ಸಂಕಲ್ಪದಿಂದ ದೇಹವು ಪ್ರಸಾದಕಾಯವಾಗಿ, ತಪೋಶಕ್ತಿ ವೃದ್ಧಿಸಿ, ನಮ್ಮ ಬದುಕಿಗೆ ಪ್ರೇರಕಶಕ್ತಿಯಾಗಿ ನಿರ್ಮಲ ಮನಸ್ಸಿನಿಂದ ಆತ್ಮಶುದ್ಧಿಯಾಗುತ್ತದೆ ಎಂದು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹೇಳಿದರು.ನಗರದ ಹುಕ್ಕೇರಿಮಠದಲ್ಲಿ ಶ್ರಾವಣ ಮಾಸದ ನಿಮಿತ್ತ ಹಮ್ಮಿಕೊಂಡಿರುವ ಮಹಾತಪಸ್ವಿ ಅಥಣಿ ಮುರುಘೇಂದ್ರ ಶಿವಯೋಗಿಗಳ ಪುರಾಣ ಪ್ರವಚನದ ಉದ್ಘಾಟನೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.ಅಂತರಂಗದಲ್ಲಿ ಪ್ರೀತಿ, ದಯೆ, ವಿಶ್ವಾಸ, ಕೃತಜ್ಞತೆ ಹಾಗೂ ಮಾನವೀಯತೆಯ ಮೌಲ್ಯಗಳು ಬೆಳೆಯಬೇಕಾದರೆ ಮಹಾತ್ಮರ ಜೀವನ ದರ್ಶನವನ್ನು ನಾವು ಅರಿಯಬೇಕು. ಒತ್ತಡದ ಬದುಕಿನಲ್ಲಿ ಜೀವಿಸುತ್ತಿರುವ ನಾವು ನೆಮ್ಮದಿಯ ಬದುಕಿಗಾಗಿ ಪರಿತಪಿಸುತ್ತಿದ್ದೇವೆ. ಸಂತ ಮಹಾತ್ಮರ ಜೀವನವು, ತಪಸ್ಸು, ವಿನಯ, ಕಲ್ಯಾಣ ಗುಣಗಳು ತ್ರೀವೇಣಿ ಸಂಗಮಗಳು. ಇಂಥ ಸಾಧನೆ ಮಾಡಿದವರು ಹಲವರು. ಅಂಥಹ ಮಹಾನ ಚೇತನಗಳ ಜೀವನ ಚರಿತ್ರೆಯ ಅವಲೋಕನ ಕತ್ತಲು ಕವಿದ ನಮ್ಮ ಬೆಳಕಿಗೆ ದಾರಿದೀಪವಾಗುತ್ತದೆ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಮಾತನಾಡಿ, ಭಾರತ ಆಧ್ಯಾತ್ಮದ ನೆಲೆವೀಡು. ಇಲ್ಲಿನ ಪ್ರತಿಯೊಂದು ಆಚರಣೆಗೆ ವೈಜ್ಞಾನಿಕ ಹಿನ್ನೆಲೆ ಇದೆ. ಈ ಮಾಸದಲ್ಲಿ ಇಳೆ, ಗಾಳಿ, ಮಳೆ, ನದಿ, ಪರ್ವತಗಳು ಕಂಗೊಳಿಸುತ್ತಿರುತ್ತವೆ. ಸೃಷ್ಟಿಯು ಸಮೃದ್ಧವಾಗಿರುತ್ತದೆ. ಅದೇ ರೀತಿ ಮಾನವನ ಬದುಕಿನಲ್ಲಿ ತಾಮಸ ಗುಣಗಳು ಹೋಗಿ ಆಧ್ಯಾತ್ಮಿಕ ಸಂಪತ್ತು ಬರಲಿ ಎಂಬ ಭಾವನೆಯಿಂದ ಶ್ರಾವಣ ಮಾಸವನ್ನು ಆಚರಿಸುತ್ತಾರೆ. ಶ್ರವಣ, ಮನನ, ಧ್ಯಾನ ನಮ್ಮನ್ನು ಮುಕ್ತಿ ಮಾರ್ಗಕ್ಕೆ ಕೊಂಡೊಯ್ಯುತ್ತದೆ ಎಂದರು. ಹೊಳಲಿನ ಮಲ್ಲಿಕಾರ್ಜುನಸ್ವಾಮಿ ಮಠದ ಚನ್ನಬಸವ ದೇವರು ಮಾತನಾಡಿ, ಅಥಣಿ ಶಿವಯೋಗಿಗಳು ನಾಡಿನ ಮಹಾನ್ ಮಹಾತ್ಮರು. ಅವರ ಜೀವನ ಪಥ ಎಂದರೆ ಅದು ಆಧ್ಯಾತ್ಮ, ಯೋಗ, ಧ್ಯಾನ, ಹಾಗೂ ದಿವ್ಯತೆ ಹಾಗೂ ಭವ್ಯತೆಯನ್ನು ಒಳಗೊಂಡಿದೆ. ವಚನ ಸಾಹಿತ್ಯ ಸಮ್ಮೇಳನಕ್ಕೆ ನಾಂದಿ, ಬಸವ ತತ್ವವನ್ನು ಬೋಧಿಸದೇ ಬದುಕಿನಲ್ಲಿ ಅನುಷ್ಠಾನ ಮಾಡಿದ ದಿವ್ಯಜ್ಯೋತಿಯಾಗಿದ್ದಾರೆ. ಅಂಥವರ ಸ್ಮರಣೆ ಶ್ರಾವಣ ತಿಂಗಳು ನಡೆಯುತ್ತಿದ್ದು, ಅವರ ಜೀವನ ದರ್ಶನ ಮಾಡಿಕೊಂಡು ಪುನೀತರಾಬೇಕೆಂದು ಹೇಳಿದರು.ಇದೇ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಎಂ.ಎಸ್. ಮೆಡ್ಲೇರಿ ಅವರನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಎಸ.ಎಮ್. ಹಾಲಯ್ಯನವರಮಠ, ಬಿ. ಬಸವರಾಜ, ವೀರಣ್ಣ ಅಂಗಡಿ, ಶಿವಣ್ಣ ಶಿರೂರ, ಜೆ.ಬಿ. ಸಾವಿರಮಠ, ಮಹಾಂತೇಶ ಮಳಿಮಠ, ರಾಚಪ್ಪ ಮಾಗನೂರ, ಚಂಪಾ ಹುಣಸಿಕಟ್ಟಿ, ಚನ್ನಪ್ಪ ಹಳಕೊಪ್ಪ, ಎಸ್.ಎಸ್.ಮಠಪತಿ, ಎಸ್.ವಿ. ಹಿರೇಮಠ, ರವಿ ಸಿ.ವಿ, ಮತ್ತಿತರರು ಉಪಸ್ಥಿತರಿದ್ದರು.ಕಲಾವಿದ ಸುರೇಶ ಅಂಗಡಿ ಪ್ರಾರ್ಥಿಸಿದರು. ಶಿವಯೋಗಿ ವಾಲಿಶೆಟ್ಟರ ಸ್ವಾಗತಿಸಿದರು. ಶಿವಬಸವ ಮರಳಿಹಳ್ಳಿ ಕಾರ್ಯಕ್ರಮ ನಿರೂಪಿಸಿದರು. ಎಸ್.ಎನ್. ಮಳೆಪ್ಪನವರ ವಂದಿಸಿದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ