ಕಾಮಗಾರಿಗೂ, ಅನುದಾನಕ್ಕೂ ಅಜಗಜಾಂತರ ವ್ಯತ್ಯಾಸ । ಅಂಬಲಿ ಕುಡಿಸಿ, ಮೀಸೆ ತಿಕ್ಕಿದರಾ ಅಧಿಕಾರಿಗಳು!
ಚಿಕ್ಕಪ್ಪನಹಳ್ಳಿ ಷಣ್ಮುಖ
ಕನ್ನಡಪ್ರಭ ವಾರ್ತೆ ಚಿತ್ರದುರ್ಗಬಸವ ಪುತ್ಥಳಿ ನಿರ್ಮಾಣದ ಹೆಸರಲ್ಲಿ 25 ಕೋಟಿ ರು.ಗೂ ಹೆಚ್ಚು ಸರ್ಕಾರಿ ಹಣ ಕಬಳಿಸಿದ ಶಂಕೆಯ ಒಡಲಲ್ಲಿ ಹುದುಗಿಸಿಕೊಂಡಿರುವ ಚಿತ್ರದುರ್ಗ ಇದೀಗ ಅಂತಹದ್ದೇ ಮತ್ತೊಂದು ಪ್ರಕರಣಕ್ಕೆ ಸುದ್ದಿಯಾಗುತ್ತಿದೆ. ಬಸವ ಪುತ್ಥಳಿ ವಿಚಾರದಲ್ಲಿ ಕೇವಲ ಪಾದುಕೆಗಳು ಮಾತ್ರ ಕಂಡು ಬಂದರೆ, ಗೊಲ್ಲರ ಸಂಘದ ಹೊಸ ಪ್ರಕರಣದಲ್ಲಿ ಉದ್ದನೆಯ ಗೋಡೆ ನಿರ್ಮಾಣವಾಗಿದೆ.
ಚಿತ್ರದುರ್ಗದ ಹೃದಯ ಭಾಗವಾದ ರಂಗಯ್ಯನ ಬಾಗಿಲು ಬಳಿ ಗೊಲ್ಲರ, ಯಾದವ ಸಂಘದ (ವಿದ್ಯಾರ್ಥಿನಿಲಯ) ಕಟ್ಟಡವಿದ್ದು, ಅದನ್ನು ನೆಲಸಮ ಮಾಡಿ ಅಲ್ಲೊಂದು ಸಮುದಾಯ ಭವನವ ನಿರ್ಮಿಸಲು ಸಂಸದರು, ವಿಧಾನ ಪರಿಷತ್ ಸದಸ್ಯರಿಂದ ಇದುವರೆಗೂ 80 ಲಕ್ಷ ರು. ಅನುದಾನ ಪಡೆಯಲಾಗಿದೆ. ಕಟ್ಟಡ ನೆಲ ಬಿಟ್ಟು ಮೇಲೆ ಎದ್ದಿಲ್ಲ. ಹಳ್ಳದ ತೀರದಲ್ಲಿ ತಡೆಗೋಡೆ ನಿರ್ಮಾಣ ಮಾಡಿದಂತೆ ಹತ್ತಾರು ಮೀಟರ್ ಉದ್ದದ ಗೋಡೆ ಮಾತ್ರ ಕಾಣಿಸುತ್ತಿದೆ. ಇದೀಗ ಮತ್ತೆ 25 ಲಕ್ಷ ರು. ಅನುದಾನಕ್ಕೆ ಸಂಸದರಿಗೆ ಬೇಡಿಕೆ ಸಲ್ಲಿಸಲಾಗಿದೆ. ಮುಂದುವರಿದ ಕಾಮಗಾರಿ ಹೆಸರಲ್ಲಿ ಜಿಲ್ಲಾಧಿಕಾರಿ ಸರ್ಕಾರಿ ಅನುದಾನವ ತುಂಬಾ ಉದಾರವಾಗಿ ಬಿಡುಗಡೆ ಮಾಡಿದ್ದಾರೆ ಎನ್ನಲಾಗಿದೆ.
ಊರಲ್ಲಿ ಸಣ್ಣದೊಂದು ಸಮುದಾಯ ಭವನ ನಿರ್ಮಿಸುತ್ತೇವೆ, ಹತ್ತು ಲಕ್ಷ ರು. ಅನುದಾನ ಕೊಡಿ ಎಂದು ಗ್ರಾಮೀಣರು ಕೇಳಿದರೂ ಅವರ ಬೇಡಿಕೆ ಈಡೇರಿಸಿಕೊಳ್ಳುವಷ್ಟರಲ್ಲಿ ಸುಸ್ತಾಗಿರುತ್ತಾರೆ. ಹಾಗೊಂದು ವೇಳೆ ಅನುದಾನ ಪಡೆದುಕೊಂಡರೂ ಸಮುದಾಯ ಭವನ (ಗುಣಮಟ್ಟದ ಖಾತರಿ ಇಲ್ಲ) ಮೇಲೆದ್ದಿರುತ್ತದೆ. ಆದರೆ ಚಿತ್ರದುರ್ಗದ ಯಾದವ ಸಂಘಕ್ಕೆ ನೀಡಲಾದ ಅನುದಾನ ನಾಯಕನಹಟ್ಟಿ ತಿಪ್ಪೇಶನ ರಥದ ಮೇಲೆ ಎಸೆಯುವ ಸೂರು ಬೆಲ್ಲ, ಮೆಣಿಸಿನಂತೆ ಭಾಸವಾಗುತ್ತಿದೆ. ಸರ್ಕಾರಿ ಅನುದಾನ ಸಿಕ್ಕವರಿಗೆ ಸೀರುಂಡೆ ಎಂಬಂತಾಗಿದೆ. ಗೊಲ್ಲರ ಸಂಘದ ವಿಚಾರದಲ್ಲಿ ಅಧಿಕಾರಿಗಳು ಸಂಘ ಸಂಸ್ಥೆಗಳಿಗೆ ಅನುದಾನದ ಅಂಬಲಿ ಕುಡಿಸಿ, ಮೀಸೆ ತಿಕ್ಕಿದರಾ? ಎಂಬ ಮಾತು ನೆನಪಾಗುತ್ತಿದೆ.
ಫೋಟೋ ಪೈಲ್ ನೇಮ್: ವೆಂಕಟೇಶ್, ಜಿಲ್ಲಾಧಿಕಾರಿ.