ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ತಾಕೀತು: ಸಂಸದ ಗೋವಿಂದ ಕಾರಜೋಳ

KannadaprabhaNewsNetwork | Published : Mar 15, 2025 1:03 AM

ಸಾರಾಂಶ

ಚಿತ್ರದುರ್ಗ ನಗರದಲ್ಲಿ ಕೃತಕವಾಗಿ ಸೃಷ್ಟಿಯಾಗಿರುವ ಕುಡಿಯುವ ನೀರಿನ ಅಭಾವ ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಸದ ಗೋವಿಂದ ಕಾರಜೋಳ ನಗರಸಭೆ ಪೌರಾಯುಕ್ತೆ ಹಾಗೂ ಎಂಜಿನಿಯರ್‌ಗೆ ಸೂಚನೆ ನೀಡಿದರು.

ನಗರಸಭೆ ಪೌರಾಯುಕ್ತರು, ಎಂಜಿನಿಯರ್‌ಗಳೊಂದಿಗೆ ಸಭೆ, ಚರ್ಚೆ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಚಿತ್ರದುರ್ಗ ನಗರದಲ್ಲಿ ಕೃತಕವಾಗಿ ಸೃಷ್ಟಿಯಾಗಿರುವ ಕುಡಿಯುವ ನೀರಿನ ಅಭಾವ ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಸದ ಗೋವಿಂದ ಕಾರಜೋಳ ನಗರಸಭೆ ಪೌರಾಯುಕ್ತೆ ಹಾಗೂ ಎಂಜಿನಿಯರ್‌ಗೆ ಸೂಚನೆ ನೀಡಿದರು.

ಸಾರ್ವಜನಿಕರಿಂದ ಬಂದ ದೂರುಗಳ ಹಿನ್ನೆಲೆಯಲ್ಲಿ ಶುಕ್ರವಾರ ಸಂಸದ ಕಚೇರಿಯಲ್ಲಿ ನಗರಸಭೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಚಿತ್ರದುರ್ಗ ನಗರಕ್ಕೆ ಪ್ರಸ್ತುತ ವಿವಿ ಸಾಗರ ಮತ್ತು ದಾವಣಗೆರೆ ಜಿಲ್ಲೆಯ ಶಾಂತಿಸಾಗರದಿಂದ ಕುಡಿಯುವ ನೀರು ಸರಬರಾಜಾಗುತ್ತಿದೆ, ಹೀಗಿದ್ದೂ ಕೂಡ ಚಿತ್ರದುರ್ಗ ನಗರದ 2,3,4 ಮತ್ತು 5 ನೇ ವಾರ್ಡುಗಳಿಗೆ ಕಳೆದ ಒಂದು ತಿಂಗಳಿನಿಂದ ಕುಡಿಯುವ ನೀರು ಸರಬರಾಜಾಗುತ್ತಿಲ್ಲ. ನೀರು ಪೂರೈಕೆಯಲ್ಲಿ ಯಾವುದೇ ತೊಂದರೆ ಇಲ್ಲದಿಂದರೂ ಜನರಿಗೆ ನೀರು ಕೊಡಲು ಏಕೆ ಉದಾಸೀನ ಎಂದರು. ಬೇಸಿಗೆ ಕಾಲದಲ್ಲಿ ನಗರದ ಜನತೆಗೆ ಕುಡಿಯುವ ನೀರು ಕೊಡಲಾಗುತ್ತಿಲ್ಲ ಎಂದರೆ ಏನರ್ಥ? ಕೂಡಲೇ ಸಮಸ್ಯೆ ಪರಿಹರಿಸಿ ವರದಿ ನೀಡುವಂತೆ ತಾಕೀತು ಮಾಡಿದರು.

ಚಿತ್ರದುರ್ಗ ನಗರದ ಕರುವಿನಕಟ್ಟೆ ಸರ್ಕಲ್, ಕೋಟೆ ರಸ್ತೆ, ದೊಡ್ಡಪೇಟೆ, ಚಿಕ್ಕಪೇಟೆ ಸೇರಿದಂತೆ ಅನೇಕ ಬಡಾವಣೆಗಳಿಗೆ ನಗರಸಭೆಯಿಂದ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿಲ್ಲ. ಕಳೆದ ಒಂದು ತಿಂಗಳ ಹಿಂದೆ ಐದು ದಿನಕ್ಕೊಮ್ಮೆ ನೀರು ಕೊಡಲಾಗುತ್ತಿತ್ತು, ಈಗ ಒಂದು ತಿಂಗಳಿನಿಂದ ನೀರನ್ನು ಸಾರ್ವಜನಿಕರಿಗೆ ಕೊಡುತ್ತಿಲ್ಲ, ಕುಡಿಯುವ ನೀರೇ ಸಿಗದಿದ್ದರೆ ಸಾರ್ವಜನಿಕರ ಪಾಡೇನು ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತೆ ರೇಣುಕಾ, ಶಾಂತಿಸಾಗರದ ಬಳಿ ಟ್ರಾನ್ಸ್ ಫಾರ್ಮರ್ ಸುಟ್ಟಿರುವುದರಿಂದ ಸಮಸ್ಯೆ ವಿಕೋಪಕ್ಕೆ ಹೋಗಿದೆ. ಒಂದು ಹೆಚ್ಚುವರಿ ಪರಿವರ್ತಕವನ್ನು ಇಟ್ಟುಕೊಳ್ಳಲಾಗಿಲ್ಲ. ಇದರಿಂದಾಗಿ ಅಡಚಣೆಯಾಗಿದೆ ಎಂದು ಸಂಸದರಿಗೆ ಸಮಜಾಯಿಷಿ ನೀಡಲು ಪ್ರಯತ್ನಿಸಿದರು. ಮಾತಿಗೆ ಕೋಪಗೊಂಡ ಸಂಸದ ಗೋವಿಂದ ಕಾರಜೋಳ, ಚಿತ್ರದುರ್ಗದಂತರ ನಗರಕ್ಕೆ ನೀರು ಪೂರೈಕೆ ಮಾಡುವಾಗ ಅಗತ್ಯ ಮುಂಜಾಗ್ರತೆ ಕ್ರಮಗಳ ಕೈಗೊಳ್ಳಬೇಕು. ಹೆಚ್ಚುವರಿ ಪರಿವರ್ತಕ ಇಲ್ಲವೆಂದು ಸಮಜಾಯಿಷಿ ನೀಡಲು ನಿಮಗೆ ಹೇಗಾದರೂ ಮನಸ್ಸು ಬರುತ್ತದೆ. ಹೆಚ್ಚುವರಿ ಪರಿವರ್ತಕ ಸ್ಟಾಕ್ ಇಟ್ಟುಕೊಳ್ಳದೇ ಇದ್ದರೆ ಹೇಗೆ. ಕೂಡಲೇ ಪರಿವರ್ತಕದ ಸಿದ್ದಪಡಿಸಿ ನಗರದ ಜನತೆಗೆ ಕುಡಿಯುವ ನೀರು ಕೊಡಿ ಎಂದು ಸೂಚಿಸಿದರು.

ಚಿತ್ರದುರ್ಗದಲ್ಲಿ ಅವೈಜ್ಞಾನಿಕವಾಗಿ ನಿರ್ಮಾಣಗೊಂಡಿರುವ ಡಿವೈಡರ್‌ಗಳಿಂದ ಉಂಟಾಗುತ್ತಿರುವ ಸಮಸ್ಯೆಗಳ ಸಂಸದರ ಮುಂದೆ ಇದೇ ವೇಳೆ ಹರವಿದ ವ್ಯಾಪಾರಸ್ಥರು ಮಳೆಗಾಲದಲ್ಲಿ ಅನುಭವಿಸುತ್ತಿರುವ ನೋವು ತೋಡಿಕೊಂಡರು. ಮಳೆಗಾಲದಲ್ಲಿ ನೀರು ಅಂಗಡಿಗಳೊಳಕ್ಕೆ ನುಗ್ಗುತ್ತಿದೆ ಎಂದು ದೂರಿದರು.

ಚಿತ್ರದುರ್ಗ ನಗರ ವ್ಯಾಪ್ತಿಯಲ್ಲಿರುವ ಬಹುತೇಕ ಸ್ಲಂಗಳಿಗೆ ಹಕ್ಕುಪತ್ರಗಳನ್ನೇ ವಿತರಣೆ ಮಾಡಿಲ್ಲ, ಈಗಾಗಲೇ ವಿತರಣೆ ಮಾಡಿರುವ ಹಕ್ಕುಪತ್ರಗಳು ನೊಂದಣಾಧಿಕಾರಿಗಳ ಕಛೆರಿಯಲ್ಲಿ ನೊಂದಣಿಯಾಗುತ್ತಿಲ್ಲ. ಸುಮಾರು 750 ಕ್ಕೂ ಹೆಚ್ಚು ಹಕ್ಕುಪತ್ರಗಳನ್ನು ನೋಂದಣಾಧಿಕಾರಿಗಳ ಕಚೇರಿಗೆ ಕಳುಹಿಸುವುದು ನಗರಸಭೆಯಲ್ಲಿ ಬಾಕಿ ಇದೆ ಎಂಬುದನ್ನು ನಗರಸಭಾ ಮಾಜಿ ಸದಸ್ಯ ನಾಗರಾಜ್ ಸಂಸದರ ಗಮನಕ್ಕೆ ತಂದರು.

ಸ್ಲಂ ಬೋರ್ಡ್ ಎಂಜಿನಿಯರ್‌ಗಳಿಗೆ ಈ ಸಮಸ್ಯೆಯನ್ನು ಏ.5ನೇ ತಾರೀಖಿನೊಳಗಾಗಿ ಪರಿಹರಿಸಿ ಹಕ್ಕುಪತ್ರಗಳನ್ನು ವಿತರಣೆ ಮಾಡಲು ದಿನಾಂಕ ನೀಡುತ್ತೇನೆ. ಎಲ್ಲರೂ ಸೇರಿ ಹಕ್ಕುಪತ್ರಗಳನ್ನು ಜನರಿಗೆ ನೀಡೋಣ ಎಂದು ಗೋವಿಂದ ಕಾರಜೋಳ ಹೇಳಿದರು.

ನಗರಸಭೆ ಎಂಜಿನಿಯರ್ ಮುನಿಸ್ವಾಮಿ, ಸ್ಲಂ ಬೋರ್ಡ್ ಅಧಿಕಾರಿಗಳು, ಜಿಲ್ಲಾ ಬಿಜೆಪಿ ಅಧ್ಯಕ್ಷ ಮುರುಳಿ, ಮಧುಗಿರಿ ಜಿಲ್ಲಾ ಬಿಜೆಪಿ.ಅಧ್ಯಕ್ಷ ಹನುಮಂತೇಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಪತ್‍ಕುಮಾರ್, ಇತರರು ಹಾಜರಿದ್ದರು.

Share this article