ಕಾರವಾರ: ಗೋವಾದ ಮಡಗಾಂವದಲ್ಲಿ ನಡೆದ ಕೊಂಕಣ ರೈಲ್ವೆ ಬಳಕೆದಾರರ ಸಮಾಲೋಚನಾ ಸಮಿತಿ ಸಭೆಯಲ್ಲಿ ಪಾಲ್ಗೊಂಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ರೈಲು ಸೇವೆಗಳ ವಿಸ್ತರಣೆ ಸೌಲಭ್ಯವನ್ನು ಕರಾವಳಿ ಜನತೆಗೆ ಒದಗಿಸಿಕೊಟ್ಟಿದ್ದಾರೆ.
ಮುರ್ಡೇಶ್ವರ ಎಕ್ಸ್ ಪ್ರೆಸ್ ರೈಲನ್ನುಗೋವಾದ ವಾಸ್ಕೋ ತನಕ ವಿಸ್ತರಿಸಲು ರೈಲ್ವೆ ಮಂಡಳಿಗೆ ಮರುಪ್ರಸ್ತಾವನೆಯನ್ನು ಸಲ್ಲಿಸಲು ಸಭೆಯಲ್ಲಿ ಒಮ್ಮತದ ನಿರ್ಧಾರ ತೆಗೆದುಕೊಳ್ಳಲಾಯಿತು. ಇದು ಪ್ರಯಾಣಿಕರಿಗೆ ಮತ್ತಷ್ಟು ಅನುಕೂಲ ಕಲ್ಪಿಸಲಿದೆ.
ಕಾರವಾರ-ಮಡಗಾಂ ನಡುವೆ ಸಂಚರಿಸುವ ಮೆಮು ರೈಲನ್ನು ಗೋವಾದ ಪೆರ್ನಮ್ ವರೆಗೆ ವಿಸ್ತರಿಸುವ ಬಗ್ಗೆ ಅಂತಿಮ ನಿರ್ಣಯ ಕೈಗೊಳ್ಳಲಾಯಿತು. ಈ ವಿಸ್ತರಣೆಯು ಶೀಘ್ರದಲ್ಲೇ ಜಾರಿಗೆ ಬರಲಿದೆ ಎಂದು ಸಭೆಗೆ ತಿಳಿಸಲಾಯಿತು.ಕಾರವಾರ ಬೆಂಗಳೂರು ನಡುವೆ ಸಂಚರಿಸುವ ಪಂಚಗಂಗಾ ಎಕ್ಸ್ ಪ್ರೆಸ್ ರೈಲಿಗೆ ಈಗಿರುವ 19 ಬೋಗಿಗಳ ಜತೆಗೆ ಇನ್ನೂ 3 ಹೆಚ್ಚುವರಿ ಬೋಗಿಗಳನ್ನು ಸೇರಿಸಲು ರೈಲ್ವೆ ಮಂಡಳಿಗೆ ಪ್ರಸ್ತಾವನೆಯನ್ನು ಸಲ್ಲಿಸಲು ಸಭೆಗೆ ಸೂಚಿಸಲಾಯಿತು.
ಹೊಸ ಮೊಬೈಲ್ ಅಪ್ಲಿಕೇಶನ್ ಬಿಡುಗಡೆ:
ಸಭೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ರೈಲ್ವೆ ಸಂಬಂಧಿತ ಇತರ ಸಮಸ್ಯೆಗಳ ಕುರಿತು ಕೂಡ ಚರ್ಚಿಸಲಾಯಿತು. ಸಭೆಯಲ್ಲಿ ಕೊಂಕಣ ರೈಲ್ವೆ ಸಿ.ಎಂ.ಡಿ. ಸಂತೋಷ್ ಕುಮಾರ್ ಝಾ ಸೇರಿದಂತೆ ಒಟ್ಟು ಎಂಟು ಲೋಕಸಭಾ ಸದಸ್ಯರು ಭಾಗವಹಿಸಿದ್ದರು. ಈ ಸಭೆಯ ನಿರ್ಣಯಗಳು ಕೊಂಕಣ ರೈಲ್ವೆ ಮಾರ್ಗದಲ್ಲಿ ಪ್ರಯಾಣಿಕರ ಅನುಕೂಲವನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸಲಿವೆ.