ದಾವಣಗೆರೆ: ಗ್ರಾಮೀಣರಿಗೆ ಉದ್ಯೋಗ ಕಲ್ಪಿಸುವ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಮಹತ್ವಕಾಂಕ್ಷೆಯ ಮನರೇಗಾ ಯೋಜನೆಯಲ್ಲಿ ಯಥಾಸ್ಥಿತಿಯಲ್ಲಿ ಕಾಪಾಡುವಂತೆ, ವಿಬಿ ಜಿ ರಾಮ್ ಜಿ ಯೋಜನೆ ಕೈಬಿಡುವಂತೆ ಜ.25ರಂದು ತಾಲೂಕಿನ ಹಳೆ ಕಡ್ಲೆಬಾಳ್ ಗ್ರಾಮದಿಂದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ನೇತೃತ್ವದಲ್ಲಿ ಐದು ಕಿಮೀ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ ಪಕ್ಷದ ಉತ್ತರ ಗ್ರಾಮಾಂತರ ಅಧ್ಯಕ್ಷ ಮಾಗಾನಹಳ್ಳಿ ಬಿ.ಕೆ.ಪರಶುರಾಮ ತಿಳಿಸಿದರು.
ಕೇಂದ್ರವು ಹೊಸದಾಗಿ ಜಾರಿಗೆ ತರುತ್ತಿರುವ ವಿಬಿ ಜಿ ರಾಮ್ ಜಿ ಯೋಜನೆ ಕೈಬಿಡಬೇಕು. ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಮನರೇಗಾ ಯೋಜನೆಯನ್ನು ಯಥಾಸ್ಥಿತಿ ಕಾಪಾಡುವಂತೆ ಒತ್ತಾಯಿಸಿ ಹೋರಾಟ ನಡೆಯಲಿದೆ. ಹಳೆ ಕಡ್ಲೆಬಾಳು ಗ್ರಾಮದಿಂದ ಆರಂಭವಾಗುವ ಪಾದಯಾತ್ರೆಯು ವಾಲ್ಮೀಕಿ ನಗರ, ಕಡ್ಲೇಬಾಳು, ಅರಸಾಪುರ, ಚಿಕ್ಕ ಓಬಜ್ಜಿಹಳ್ಳಿ ಗ್ರಾಮಗಳನ್ನು ಹಾದು ಹೋಗಲಿದೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರವು 2005ರಲ್ಲಿ ಆರಂಭಿಸಿದ್ದ ನರೇಗಾ ಮಹಾತ್ಮ ಗಾಂಧೀಜಿ ಹೆಸರಿನೊಂದಿಗೆ 2025ರವರೆಗೂ ಕೋಟ್ಯಂತರ ಗ್ರಾಮೀಣ ಕೂಲಿ ಕಾರ್ಮಿಕರಿಗೆ ಕೈತುಂಬಾ ಕೆಲಸ, ಅನ್ನ ಕೊಡುವ ಯೋಜನೆ ಇದಾಗಿದೆ. ಬೆದ್ದಲು, ಮಳೆಯಾಶ್ರಿತ ಪ್ರದೇಶ, ಹಿಂದುಳಿದ ಪ್ರದೇಶ, ಬರ ಪೀಡಿತ ಪ್ರದೇಶಗಳ ಬಡವರು, ಕೂಲಿ ಕಾರ್ಮಿಕರು, ಕೃಷಿ ಕೂಲಿ ಕಾರ್ಮಿಕರು ಕೆಲಸ ಅರಸಿ ಕಾಫಿ ಸೀಮೆ, ಘಟ್ಟ ಪ್ರದೇಶ, ಮಹಾನಗರ ಪ್ರದೇಶಕ್ಕೆ ಗುಳೇ ಹೋಗುವುದನ್ನು ತಡೆಯುತ್ತಿದ್ದ ಮನರೇಗಾಗೆ ಎಳ್ಳು ನೀರು ಬಿಡುವ ದುಸ್ಸಾಹಸಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದರು.ಗಾಂಧೀಜಿ ಕಂಡ ರಾಮನೇ ಬೇರೆ, ಬಿಜೆಪಿ ಕಂಡ ರಾಮನೇ ಬೇರೆ. ಮನರೇಗಾದಲ್ಲಿ ಭ್ರಷ್ಟಾಚಾರವಾಗುತ್ತಿದೆಯೆಂಬ ಅರಿವಾಗಲು ನರೇಂದ್ರ ಮೋದಿ ಸರ್ಕಾರಕ್ಕೆ 12 ವರ್ಷ ಬೇಕಾಯಿತಾ? ಹೊಸದಾಗಿ ಯೋಜನೆಯಲ್ಲಿ 125 ದಿನಕ್ಕೆ ಕೆಲಸದ ದಿನಗಳನ್ನು ಹೆಚ್ಚಿಸಿದ್ದನ್ನು ಸ್ವಾಗತಿಸುತ್ತೇವೆ. ಆದರೆ, ಉದ್ಯೋಗ ಖಾತರಿಯ ಹಕ್ಕು, ಮನರೇಗಾ ಹೆಸರನ್ನು ಬದಲಿಸಲು ನಾವು ಅವಕಾಶ ಕೊಡುವುದಿಲ್ಲ ಎಂದು ಎಚ್ಚರಿಸಿದರು.
ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ದೂಡಾ ಮಾಜಿ ಅಧ್ಯಕ್ಷ ದಿನೇಶ ಕೆ.ಶೆಟ್ಟಿ, ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಮುದೇಗೌಡ್ರ ಗಿರೀಶ, ತಾಪಂ ಮಾಜಿ ಅಧ್ಯಕ್ಷ, ಚಿತ್ರನಟ, ನಿರ್ಮಾಪಕ ಮೇಕಾ ಮುರಳೀಕೃಷ್ಣ, ಅಂಜಿನಪ್ಪ ಹಳೆಬಾತಿ, ಕೆಂಪ್ಪ ಹಳೆ ಬಾತಿ, ಕಡ್ಡೆಬಾಳು ಎ.ಬಿ.ಪ್ರಭಾಕರ್, ರಾಘವೇಂದ್ರ ನಾಯ್ಕ ಇತರರು ಇದ್ದರು.ಮನರೇಗಾ ಕತ್ತು ಹಿಸುಕುವ ಕೆಲಸ ಇದು!
ಮನರೇಗಾದಲ್ಲಿ ಕೆರೆ ಹೂಳೆತ್ತುವ, ಚರಂಡಿ ನಿರ್ಮಾಣ, ಕೃಷಿ ಹೊಂಡ ಸೇರಿದಂತೆ ಅನೇಕ ಅಭಿವೃದ್ಧಿ ಕಾಮಗಾರಿಗಳಾಗಿವೆ. ಆದರೆ, ಹೊಸ ಯೋಜನೆಯಲ್ಲಿ ಕೇಂದ್ರ ನಿರ್ದೇಶಿಸಿದ ಕಾಮಗಾರಿಗಳನ್ನಷ್ಟೇ ಮಾಡಬೇಕಾಗುತ್ತದೆ. ಆಗ ಗ್ರಾಪಂಗೆ ಕಾಮಗಾರಿ ಆಯ್ಕೆ ಸ್ವಾತಂತ್ರ ಇರುವುದಿಲ್ಲ. ಮಹಾತ್ಮ ಗಾಂಧಿ ಹೆಸರಿನ ಮನರೇಗಾ ಯೋಜನೆ ಮೂಲ ಸ್ವರೂಪವನ್ನೇ ಬದಲಿಸಿ, ವಿಬಿ ಜೀ ರಾಮ್ ಜೀ ಹೆಸರಲ್ಲಿ ಕೇಂದ್ರ ಸರ್ಕಾರ ಹೊಸ ಕಾಯ್ದೆ ತಂದಿದೆ. ಹಂತ ಹಂತವಾಗಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಕತ್ತು ಹಿಸುಕಲು ಕೇಂದ್ರ ಹೊರಟಿದೆ ಎಂದು ಉತ್ತರ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಮಾಗಾನಹಳ್ಳಿ ಬಿ.ಕೆ.ಪರಶುರಾಮ ಹೇಳಿದರು, 23ಕೆಡಿವಿಜಿ4: ದಾವಣಗೆರೆಯಲ್ಲಿ ಉತ್ತರ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಮಾಗಾನಹಳ್ಳಿ ಬಿ.ಕೆ.ಪರಶುರಾಮ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು. ಕಾಂಗ್ರೆಸ್ ಮುಖಂಡರು ಹಾಜರಿದ್ದರು.