ಕನ್ನಡಪ್ರಭ ವಾರ್ತೆ ಟೇಕಲ್
ಜೂನ್ 4 ನಮ್ಮೆಲ್ಲರಿಗೆ ಶುಭ ದಿನವಾಗಿತ್ತು, ಅಂದು ನಮ್ಮ ಎನ್‌ಡಿಎ ಅಭ್ಯರ್ಥಿ ಮಲ್ಲೇಶಬಾಬುರವರು 71 ಸಾವಿರಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸಿದ್ದು ಸಂತಸ ತಂದಿದೆ ಎಂದು ಕೋಲಾರ ಜಿಲ್ಲಾ ರೇಣುಕಾ ಯಲ್ಲಮ್ಮ ಅಭಿವೃದ್ಧಿ ಬಳಗದ ಜಿಲ್ಲಾಧ್ಯಕ್ಷ ಹಾಗೂ ಬಂಡೂರು ಅಗ್ರಹಾರದ ಸಮಾಜ ಸೇವಕ ಪಿ.ನಾರಾಯಣಸ್ವಾಮಿ ತಿಳಿಸಿದರು.ಟೇಕಲ್‌ನ ತಮ್ಮ ಸ್ವಗ್ರಾಮ ಬಂಡೂರು ಅಗ್ರಹಾರದಲ್ಲಿನ ಶ್ರೀ ಮಾತಾ ರೇಣುಕಾ ಯಲ್ಲಮ್ಮ ದೇವಾಲಯದಲ್ಲಿ ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ, ಕೋಲಾರ ಜಿಲ್ಲೆಯಿಂದ ಮೈತ್ರಿ ಅಭ್ಯರ್ಥಿ ಮಲ್ಲೇಶಬಾಬು ಗೆಲುವು ಸಾಧಿಸಿದ್ದರಿಂದ ಅಮ್ಮನವರಿಗೆ ವಿಶೇಷ ಅಭಿಷೇಕ, ಪೂಜಾ ಕೈಂಕರ್ಯ, ಅನ್ನದಾನ ಮಾಡಿ ಸುದ್ದಿಗಾರರೊಡನೆ ಮಾತನಾಡಿದರು.
ಮಲ್ಲೇಶಬಾಬುರವರು ಸಜ್ಜನ ರಾಜಕಾರಣಿ, ವಿದ್ಯಾವಂತರು, ಬುದ್ಧಿವಂತರು ಇವರ ತಂದೆ ಐಎಎಸ್ ಅಧಿಕಾರಿಯಾದಾಗ ಮೈಸೂರು ಕ್ಯಾಂಪಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಆಗ ಅವರು ಕೋಲಾರ ಜಿಲ್ಲೆಯ ಹಲವು ಜನರಿಗೆ ಉದ್ಯೋಗ ಅವಕಾಶ ಕಲ್ಪಿಸಿದ್ದಾರೆ. ತಾಯಿ ಮಂಗಮ್ಮ ಮುನಿಸ್ವಾಮಿರವರು ಎರಡು ಬಾರಿ ಜಿಪಂ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದ್ದು, ಮುಂದಿನ ಐದು ವರ್ಷಗಳ ಕಾಲ ಕೋಲಾರ ಜಿಲ್ಲೆಯನ್ನು ಮಲ್ಲೇಶಬಾಬುರವರು ಪ್ರತಿನಿಧಿಸಲಿದ್ದಾರೆ. ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಆಡಳಿತ ನಡೆಸಬೇಕೆಂದು ಅಭಿನಂದಿಸಿದರು.ಕರ್ನಾಟಕಕ್ಕೆ ಮೋದಿ ಸರ್ಕಾರದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಇದೀಗ ಕೇಂದ್ರ ಸಚಿವ ಸ್ಥಾನ ಬೃಹತ್ ಕೈಗಾರಿಕೆ ಮತ್ತು ಉಕ್ಕಿನ ಸಚಿವರಾಗುವ ಮೂಲಕ ಎಚ್.ಡಿ.ಕುಮಾರಸ್ವಾಮಿಯವರು ದೊಡ್ಡ ಹುದ್ದೆ ಅಲಂಕರಿಸಿದ್ದಾರೆ. ವಿಶ್ವೇಶ್ವರಯ್ಯ ಉಕ್ಕಿನ ಕಾರ್ಖಾನೆ ಭದ್ರಾವತಿಯಲ್ಲಿ ಮುಚ್ಚಿ ಹೋಗಿದ್ದು, ಅದನ್ನು ಮತ್ತೆ ಪುನಃಚ್ಛೇತನಪಡಿಸಬೇಕೆಂದು ವಿನಂತಿಸಿದರು.
ವಿ.ಸೋಮಣ್ಣನವರಿಗೆ ರೈಲ್ವೆ ಖಾತೆ ನೀಡಿದ್ದು, ಜಿಲ್ಲೆಗೆ ಕೆ.ಎಚ್.ಮುನಿಯಪ್ಪನವರು ರೈಲ್ವೆ ಭೋಗಿಗಳ ತಯಾರು ಮಾಡುವ ಘಟಕ ತಂದರಾದರೂ ಅದು ಏನಾಯಿತು ಎಂಬುದು ಗೊತ್ತಿಲ್ಲ. ಅದನ್ನು ಮಾನ್ಯ ಸೋಮಣ್ಣನವರು ನೂತನವಾಗಿ ತಂದು ಅಭಿವೃದ್ಧಿಪಡಿಸಬೇಕೆಂದರು. ವಿತ್ತ ಸಚಿವರಾಗಿ ನಿರ್ಮಲ ಸೀತರಾಮನ್, ಪ್ರಹ್ಲಾದ್ ಜೋಷಿ, ಶೋಭಾ ಕರಂದ್ಲಾಜೆ ರಿಗೆ ಉತ್ತಮ ಸಚಿವ ಸ್ಥಾನ ನೀಡಿ ಗೌರವಿಸಲಾಗಿದೆ ಎಂದರು.ಇತ್ತೀಚೆಗೆ ಮಾಲೂರು ತಾಲೂಕಿನಲ್ಲಿ ಪೊಲೀಸ್ ಠಾಣೆಗಳಲ್ಲಿ ಬಿಜೆಪಿ, ಜೆಡಿಎಸ್ ಕಾರ್ಯಕರ್ತರ ಮೇಲೆ ವಿನಾಕಾರಣ ಕೇಸುಗಳನ್ನು ಹಾಕಿಸುತ್ತಿದ್ದು, ಇಲ್ಲಿ ಅಧಿಕಾರ ದುರುಪಯೋಗವಾಗುತ್ತಿದೆ ಎಂದು ಆರೋಪಿಸಿದರು. ಕಾನೂನು ಎಲ್ಲರಿಗೂ ಒಂದೇ ನಿಜವಾದ ತಪ್ಪಿತಸ್ಥರನ್ನು ಶಿಕ್ಷಿಸಿ, ವಿನಾಕಾರಣ ಜೆಡಿಎಸ್, ಬಿಜೆಪಿ ಕಾರ್ಯಕರ್ತರ ಮೇಲೆ ಮಾಸ್ತಿ, ಮಾಲೂರು ಠಾಣೆಗಳಲ್ಲಿ ಸಾಲು ಸಾಲು ದೂರು ದಾಖಲಾಗುತ್ತಿದೆ ಎಂದರು.
ಮಾಲೂರು ತಾಲೂಕು ದಲಿತ ನಾಗರಿಕ ಸಮಿತಿ ಅಧ್ಯಕ್ಷ ಮರಲಹಳ್ಳಿ ಅಂಬರೀಷ್ ಮಾತನಾಡಿ, ಮೈತ್ರಿ ಅಭ್ಯರ್ಥಿ ಎಂ.ಮಲ್ಲೇಶಬಾಬು ಗೆಲುವು ಸಾಧಿಸಿದ್ದು, ಜಿಲ್ಲೆಯ ಸಮಗ್ರ ಅಭಿವೃದ್ಧಿಪಡಿಸಲಿ ಎಂದು ಶುಭ ಹಾರೈಸಿದರು.ಪುರೋಹಿತ ಮಂಜುನಾಥಶಾಸ್ತ್ರೀಯವರು ವಿಶೇಷ ಅಭಿಷೇಕ ಪೂಜಾ- ಕೈಂಕರ್ಯ ನಡೆಸಿದರು. ನಂತರ ಅನ್ನದಾನ ನಡೆಸಲಾಯಿತು. ಮಾಲೂರು ತಾಲೂಕು ದಲಿತ ನಾಗರಿಕ ಸಮಿತಿ ಅಧ್ಯಕ್ಷ ಮರಲಹಳ್ಳಿ ಅಂಬರೀಷ್ , ಮುಖಂಡರಾದ ದೇವರಾಜ್, ಚಲಪತಿ, ಸುರೇಶ್, ಕಾರ್ತಿಕ್, ನವೀನ್, ಧನುಷ್, ಸುರೇಶ್, ಆನಂದ್, ಸುಮನ್, ಮಂಜುನಾಥ ಮುಂತಾದವರು ಉಪಸ್ಥಿತರಿದ್ದರು.