ಪುತ್ತೂರು: ಶ್ರೀ ಕಲ್ಲೇಗ ಕಲ್ಕುಡ ಕಲ್ಲುರ್ಟಿ ದೈವಗಳ ವರ್ಷಾವಧಿ ನೇಮೋತ್ಸವ

KannadaprabhaNewsNetwork | Published : Jan 26, 2024 1:45 AM

ಸಾರಾಂಶ

ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಶಾಸಕ ಸಂಜೀವ ಮಠಂದೂರು, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ರಾಜ್ಯ ಬಿಜೆಪಿ ಕಾರ್ಯದರ್ಶಿ ಬ್ರಿಜೇಶ್ ಚೌಟ ಸಹಿತ ಹಲವಾರು ಮಂದಿ ಗಣ್ಯರು ಆಗಮಿಸಿ ಪ್ರಸಾದ ಸ್ವೀಕರಿಸಿದರು.

ಕನ್ನಡಪ್ರಭವಾರ್ತೆ ಪುತ್ತೂರು ಕಾರಣಿಕ ಕ್ಷೇತ್ರವಾದ ಇತಿಹಾಸ ಪ್ರಸಿದ್ಧ ಪುತ್ತೂರಿನ 2ನೇ ಜಾತ್ರೆಯೆಂದೇ ಕರೆಯುತ್ತಿರುವ ಕಲ್ಲೇಗ ಶ್ರೀ ಕಲ್ಕುಡ ದೈವಸ್ಥಾನದಲ್ಲಿ ಶ್ರೀ ಕಲ್ಕುಡ ಕಲ್ಲುರ್ಟಿ ದೈವಗಳ ವರ್ಷಾವಧಿ ನೇಮೋತ್ಸವ ಬುಧವಾರ ರಾತ್ರಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು.

ದೈವಗಳ ಭಂಡಾರವು ದೈವಗಳ ಮೂಲ ನೆಲೆ ಕಾರ್ಜಾಲು ಗುತ್ತುವಿನಿಂದ ರಾತ್ರಿ ವಿವಿಧ ಬಿರುದಾವಳಿಗಳು, ದಂಡ್ ಶಿಲಾಲ್, ಕೊಂಬು, ಶಂಖ, ಜಾಗಟೆ, ಟಾಸೆ, ಚೆಂಡೆಯ ಸದ್ದು ಮತ್ತು ಬೆಳಕಿನ ಸೂಟೆಯೊಂದಿಗೆ ದೈವಗಳ ಮೂಲ ನೆಲೆ ಕಾರ್ಜಾಲು ಗುತ್ತುವಿನಿಂದ ದೈವಗಳ ಭಂಡಾರ ಬರುವುದೇ ವಿಶೇಷವಾಗಿತ್ತು. ದೈವಗಳ ಭಂಡಾರ ಜೊತೆ ಪಲ್ಲಕ್ಕಿಯ ಅಕ್ಕಪಕ್ಕ ದಂಡ್ ಶಿಲಾಲ್ ಬೆಳಕಿತ್ತು. ಮಧ್ಯಾಹ್ನ ಕಲ್ಲೇಗ ದೈವಸ್ಥಾನದಲ್ಲಿ ಸಹಸ್ರಾರು ಮಂದಿ ಭಕ್ತರಿಗೆ ಅನ್ನಪ್ರಸಾದ ವಿತರಣೆ ಮಾಡಲಾಯಿತು.

ಬೆಳಿಗ್ಗೆ ಕಾರ್ಜಾಲು ಗುತ್ತಿನಲ್ಲಿ ಸ್ಥಳಶುದ್ಧಿ ಹೋಮ, ಕಲಶ ಪ್ರತಿಷ್ಠೆ, ಶ್ರೀ ದೈವಸ್ಥಾನದಲ್ಲಿ ಗಣಹೋಮ, ಶ್ರೀ ದೈವಗಳ ತಂಬಿಲ, ನಾಗತಂಬಿಲ, ಮಧ್ಯಾಹ್ನ ಶ್ರೀ ದೈವಸ್ಥಾನದ ಬಳಿ ಶ್ರೀ ದೈವಗಳ ಭಂಡಾರದ ವತಿಯಿಂದ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಕಾರ್ಜಾಲು ಗುತ್ತಿನಿಂದ ಶ್ರೀ ದೈವಗಳ ಭಂಡಾರ ಹೊರಟು ದೈವಸ್ಥಾನಕ್ಕೆ ಬಂದ ಬಳಿಕ ಗೋಂದೊಲು ಪೂಜೆ, ಶ್ರೀ ಕಲ್ಕುಡ ಕಲ್ಲುರ್ಟಿ ದೈವಗಳ ವರ್ಷಾವಧಿ ನೇಮೋತ್ಸವ ನಡೆಯಿತು.

ದೈವಸ್ಥಾನದ ಆಡಳಿತಾಧಿಕಾರಿ ಕಬಕ ಗ್ರಾ.ಪಂ ವಿ.ಎ ಅಗಿರುವ ಚಂಗಪ್ಪ, ಶ್ರೀ ದೈವಸ್ಥಾನದ ವ್ಯವಸ್ಥಾಪನಾ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಅಜಿತ್ ಕುಮಾರ್ ಜೈನ್ ಕೆ., ಕೆ.ಜಿನ್ನಪ್ಪ ಗೌಡ ಕಲ್ಲೇಗ, ನಗರಸಭಾ ನಿಕಪಟೂರ್ವ ಅಧ್ಯಕ್ಷ ಜೀವಂಧರ್ ಜೈನ್, ಕಲ್ಲೇಗ ರೂರಲ್ ಡೆವೆಲಪ್‌ಮೆಂಟ್ ಟ್ರಸ್ಟ್ನ ಅಧ್ಯಕ್ಷ ಕಲ್ಲೇಗ ಸಂಜೀವ ನಾಯಕ್ ಕಲ್ಲೇಗ, ನವೀನ್ ಕುಮಾರ್, ವಸಂತ ಕಾರೆಕ್ಕಾಡು, ಕಬಕ ಗ್ರಾ.ಪಂ ಸದಸ್ಯ ವಿನಯ ಕಲ್ಲೇಗ, ಜಿನ್ನಪ್ಪ ಪೂಜಾರಿ ಮುರ, ಪ್ರಶಾಂತ್ ಎಸ್, ರಾಘವೇಂದ್ರ ಪ್ರಭು, ಮಾಧವ ಪೂಜಾರಿ ಪಟ್ಲ, ಪ್ರಸಾದ್ ಬೀಡಿಗೆ, ಬಿ.ರವಿಕಿರಣ, ಚಂದ್ರಶೇಖರ್ ಗೌಡ ಕಲ್ಲೇಗ, ಸಂತೋಷ್ ಶೆಟ್ಟಿ, ಪ್ರಶಾಂತ್ ಮುರ, ಶ್ರೀಧರ್ ಪಟ್ಲ, ರಾಜ್ಯ ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಎನ್.ಕೆ.ಜಗನ್ನಿವಾಸ ರಾವ್, ಉಮೇಶ್ ಅಜೇಯನಗರ, ಮಹೇಶ್ ಕಲ್ಲೇಗ, ಉಳಿಯ ಶ್ರೀಧರ್ ಸಹಿತ ಸಾವಿರಾರು ಮಂದಿ ರಾತ್ರಿ ಭಂಡಾರ ಬರುವ ಸಂದರ್ಭ ಜೊತೆಗಿದ್ದರು. ಮಧ್ಯಾಹ್ನ ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಶಾಸಕ ಸಂಜೀವ ಮಠಂದೂರು, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ರಾಜ್ಯ ಬಿಜೆಪಿ ಕಾರ್ಯದರ್ಶಿ ಬ್ರಿಜೇಶ್ ಚೌಟ ಸಹಿತ ಹಲವಾರು ಮಂದಿ ಗಣ್ಯರು ಆಗಮಿಸಿ ಪ್ರಸಾದ ಸ್ವೀಕರಿಸಿದರು.

ಭಂಡಾರ ಬರುವ ಸಮಯ ವಾಹನ ಸಂಚಾರಕ್ಕೆ ಬದಲಿ ವ್ಯವಸ್ಥೆ

ರಾತ್ರಿ ವೇಳೆ ಕಾರ್ಜಾಲು ಗುತ್ತಿನಿಂದ ಭಂಡಾರ ಹೊರಟು ಕಲ್ಲೇಗ ದೇವಸ್ಥಾನ ತಲುಪುವ ಸಮಯ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಬದಲಿ ಮಾರ್ಗದಲಿ ಕಳುಹಿಸಲಾಗಿತ್ತು. ಪುತ್ತೂರಿನಿಂದ ಮಂಗಳೂರಿಗೆ ತೆರಳುವ ವಾಹನಗಳು ಮಂಜಲ್ಪಡ್ಪು ಕೋಡಿಪ್ಪಾಡಿ ಕಬಕ ಮೂಲಕ ಮಂಗಳೂರಿಗೆ ಮತ್ತು ಮಂಗಳೂರಿನಿಂದ ಪುತ್ತೂರು, ಮೈಸೂರು ಕಡೆಗೆ ತೆರಳುವ ವಾಹನಗಳು ಮುರ ದಿಂದ ರೈಲ್ವೆ ಬ್ರಿಡ್ಜ್ ಮೂಲಕ ಬನ್ನೂರು ಪಡೀಲ್ ಮೂಲಕ ಪುತ್ತೂರಿಗೆ ತೆರಳಲು ವ್ಯವಸ್ಥೆ ಮಾಡಲಾಗಿತ್ತು. ಪುತ್ತೂರು ಸಂಚಾರ ಪೊಲೀಸ್ ಠಾಣೆ ಎಸ್.ಐ ಉದಯ ರವಿ ಅವರ ನೇತೃತ್ವದಲ್ಲಿ ಸುಗಮ ವಾಹನ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಪುತ್ತೂರು ನಗರ ಪೊಲೀಸ್ ಠಾಣೆಯಿಂದ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗಿತ್ತು.

Share this article