ಹುಲಿಕೆರೆಯಲ್ಲಿ ಸಮುದಾಯ ಭವನ ನವೀಕರಣಕ್ಕೆ ಸಂಸದ ಪ್ರಜ್ವಲ್‌ ರೇವಣ್ಣ ಚಾಲನೆ

KannadaprabhaNewsNetwork | Published : Mar 13, 2024 2:00 AM

ಸಾರಾಂಶ

ಹಾಸನ ಜಿಲ್ಲೆಯ ಅಭಿವೃದ್ಧಿ ಕೆಲಸಗಳಿಗಾಗಿ ಕೇಂದ್ರ ಸರ್ಕಾರದಿಂದ 14 ಸಾವಿರ ಕೋಟಿ ರು. ಅನುದಾನ ಬಿಡುಗಡೆ ಮಾಡಿಸಲು ಶ್ರಮಿಸಿದ್ದೇನೆ ಎಂದು ಸಂಸದ ಪ್ರಜ್ವಲ್ ರೇವಣ್ಣ ತಿಳಿಸಿದರು. ನುಗ್ಗೇಹಳ್ಳಿ ಹೋಬಳಿಯ ಹುಲಿಕೆರೆ ಗ್ರಾಮದಲ್ಲಿ ಸೋಮವಾರ ಸಾರ್ವಜನಿಕ ಸಮುದಾಯ ಭವನ ಉದ್ಘಾಟನೆ ಮಾಡಿ ಮಾತನಾಡಿದರು.

ಉದ್ಘಾಟನೆ । ₹14 ಸಾವಿರ ಕೋಟಿ ಅನುದಾನದಲ್ಲಿ ಕಾಮಗಾರಿ

ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ

ಜಿಲ್ಲೆಯ ಅಭಿವೃದ್ಧಿ ಕೆಲಸಗಳಿಗಾಗಿ ಕೇಂದ್ರ ಸರ್ಕಾರದಿಂದ 14 ಸಾವಿರ ಕೋಟಿ ರು. ಅನುದಾನ ಬಿಡುಗಡೆ ಮಾಡಿಸಲು ಶ್ರಮಿಸಿದ್ದೇನೆ ಎಂದು ಸಂಸದ ಪ್ರಜ್ವಲ್ ರೇವಣ್ಣ ತಿಳಿಸಿದರು.

ಹೋಬಳಿಯ ಹುಲಿಕೆರೆ ಗ್ರಾಮದಲ್ಲಿ ಸೋಮವಾರ ಸಾರ್ವಜನಿಕ ಸಮುದಾಯ ಭವನ ಮತ್ತು ಶಾಲಾ ಕಟ್ಟಡ ನವೀಕರಣ, ಹೈಮಾಸ್ ದೀಪ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಲಜೀವನ್ ಮಿಷನ್ ಯೋಜನೆಯಡಿ ಜಿಲ್ಲೆಯ ಎಲ್ಲಾ ಮನೆಗಳಿಗೂ ಹೇಮಾವತಿ ನದಿಯಿಂದ ನೀರು ಶುದ್ಧೀಕರಿಸಿ ಮನೆ ಮನೆಗೆ ನಲ್ಲಿ ನೀರು ಕಲ್ಪಿಸುವ ಯೋಜನೆಗೆ 4907 ಕೋಟಿ ರು. ಹಣ ಬಿಡುಗಡೆಯಾಗಿದೆ. ತಾಲೂಕಿನ ಹಿರೀಸಾವೆಯಿಂದ ಮೇಲ್ಸೇತುವೆ, ಕೆಳ ಸೇತುವೆ ಕಾಮಗಾರಿಗಳ ನಿರ್ಮಾಣಕ್ಕೆ 1384 ಕೋಟಿ ರು. ಹಣ ಬಿಡುಗಡೆ ಮಾಡಿಸಿ ರಸ್ತೆ ಸಂಚಾರಕ್ಕೆ ಸುಗಮ ವ್ಯವಸ್ಥೆ ಕಲ್ಪಿಸಿರುವುದರಿಂದ ಅಪಘಾತಗಳು ತಪ್ಪಿವೆ ಎಂದು ಹೇಳಿದರು.

ರಾಜ್ಯದ ತೆಂಗು ಬೆಳೆಯುವ ರೈತರ ಕೊಬ್ಬರಿಗೆ ಬೆಂಬಲ ಬೆಲೆ ಕೊಡಿಸಲು ಈ ಸರ್ಕಾರ ವಿಫಲವಾಗಿದೆ. ಹಾಸನ ಜಿಲ್ಲೆಯ ಕೊಬ್ಬರಿ ಖರೀದಿಯಲ್ಲಿ ತಾರತಮ್ಯ ಮಾಡಿದ್ದನ್ನು ವಿರೋಧಿಸಿದ್ದರಿಂದ ಪುನಃ 45 ಸಾವಿರ ಕ್ವಿಂಟಲ್ ಕೊಬ್ಬರಿ ಖರೀದಿಗೆ ಅವಕಾಶ ಕಲ್ಪಿಸಿದ್ದಾರೆ. ಕೇಂದ್ರ ಸರ್ಕಾರದಿಂದ ಇನ್ನೂ ಹೆಚ್ಚುವರಿ 30 ಸಾವಿರ ಮೆಟ್ರಿಕ್ ಟನ್ ಕೊಬ್ಬರಿ ಖರೀದಿಗೆ ದೇವೇಗೌಡರಿಂದ ಪ್ರಧಾನಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದರು.

ಕುಮಾರಸ್ವಾಮಿ ಮುಖ್ಯಮಂತ್ರಿಯಾದ್ದಾಗ ಸಾಲಮನ್ನಾ ಮಾಡಿದ್ದರಿಂದ ಎಲ್ಲಾ ಸಮುದಾಯ ಹಾಗೂ ಎಲ್ಲಾ ಪಕ್ಷದವರಿಗೂ ಸಾಲ ಮನ್ನಾ ಭಾಗ್ಯ ದೊರೆಯಿತು. ರೈತರು ಕೊಳವೆ ಬಾವಿ ಕೊರೆಸಿಕೊಂಡು ಅವರೇ ಹಣ ಕಟ್ಟಿ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳನ್ನು ಹಾಕಿಸಿಕೊಳ್ಳುವ ದುಸ್ಥಿತಿ ರೈತರಿಗೆ ಬಂದಿದೆ. ಶಾಸಕ ಬಾಲಕೃಷ್ಣ ಅವರ ಹೋರಾಟದ ಫಲವಾಗಿ ಎಲ್ಲಾ ಏತ ನೀರಾವರಿ ಯೋಜನೆಗಳು ಪೂರ್ಣಗೊಳ್ಳುವ ಹಂತದಲ್ಲಿವೆ. ಶಾಸಕರ ಜೊತೆ ಅಭಿವೃದ್ಧಿ ಯೋಜನೆಗಳಿಗೆ ಸ್ಪಂದಿಸಲು ತಮ್ಮನ್ನು ಮತ್ತೊಮ್ಮೆ ಆಯ್ಕೆ ಮಾಡಿ ಎಂದು ಮನವಿ ಮಾಡಿದರು.

ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ, ಯುವಕರು ಜನ ಸೇವೆಗೆ ಮುಂದೆ ಬರಬೇಕು. ಕೇಂದ್ರ ಸರ್ಕಾರದ ಜಲಜೀವನ್ ಯೋಜನೆ 750 ಕೋಟಿ ರು. ಯೋಜನೆಯಾಗಿದ್ದು 384 ಹಳ್ಳಿಗಳಲ್ಲಿ ಟ್ಯಾಂಕುಗಳು ನಿರ್ಮಾಣವಾಗಿದ್ದು ಎರಡು ವರ್ಷದಲ್ಲಿ ಯೋಜನೆಯ ಕಾಮಗಾರಿಗಳು ಪೂರ್ಣಗೊಳ್ಳಲಿವೆ. ತೋಟಿ ಏತ ನೀರಾವರಿ ಯೋಜನೆ ಕಲ್ಲೇ ಸೋಮನಹಳ್ಳಿ ಏತ ನೀರಾವರಿ ಯೋಜನೆ ಕಾಮಗಾರಿ ಪೂರ್ಣಗೊಳಿಸಿ ಮುಂದಿನ ಹಂಗಾಮಿಗೆ ನೀರು ಹರಿಸಲಾಗುತ್ತದೆ ಎಂದರು.

ಗ್ರಾಮ ಪಂಚಾಯಿತಿ ಸದಸ್ಯೆ ಆಶಾ ದೇವಿ ಪ್ರಕಾಶ್, ಹೊನ್ನಮ್ಮ ಧರಣಿ ಕುಮಾರ್, ಯುವ ಮುಖಂಡ ಎಚ್ಪಿ ಸಂಪತ್ ಕುಮಾರ್, ಮುಖಂಡರಾದ ತೋಟಿ ನಾಗರಾಜ್, ದೊರೆಸ್ವಾಮಿ, ಬೆಳಗಳ್ಳಿ ಪುಟ್ಟಸ್ವಾಮಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್, ಬಿ. ರಂಗಸ್ವಾಮಿ, ನಾಗೇಂದ್ರ ಬಾಬು, ಚಂದ್ರೇಗೌಡ, ತೋಪೇಗೌಡ, ದೇವರಾಜ್, ಲಕ್ಷ್ಮೀದೇವಿ ಜಯರಾಮ್, ರೇಣುಕಾ ರಂಗಸ್ವಾಮಿ, ಇ ನಾಶಪ್ಪ, ವಾರ್ಡನ್ ಮಹೇಶ್, ರಂಗೇಗೌಡ, ಹಿರಿಯಣ್ಣ ಇದ್ದರು.ಹುಲಿಕೆರೆ ಗ್ರಾಮದ ನೂತನ ಸಮುದಾಯ ಭವನವನ್ನು ಸಂಸದ ಪ್ರಜ್ವಲ್ ರೇವಣ್ಣ, ಶಾಸಕ ಸಿ.ಎನ್. ಬಾಲಕೃಷ್ಣ ಉದ್ಘಾಟಿಸಿದರು.

Share this article