ಹಾಸನ : ಅಶ್ಲೀಲ ವೀಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಆರ್‌ಸಿ ರಸ್ತೆ ಎಸ್ಪಿ ಕಚೇರಿ ಪಕ್ಕದಲ್ಲೆ ಇರುವ ಸಂಸದರ ನಿವಾಸದಲ್ಲಿ ಕಳೆದ ರಾತ್ರಿ ಸಂತ್ರಸ್ತೆಯರ ಜೊತೆ ಸ್ಥಳ ಪರಿಶೀಲನೆ ನಡೆಸಿದ ಬೆನ್ನಲ್ಲೇ ಭಾನುವಾರ ಬೆಳಿಗ್ಗೆಯೂ ಸಹ ಎಸ್‌ಐಟಿ ಅಧಿಕಾರಿಗಳ ತಂಡವು ಸಂಸದರ ನಿವಾಸವನ್ನು ತನ್ನ ವಶಕ್ಕೆ ಪಡೆದು ಇನ್ನು ಹೆಚ್ಚಿನ ತನಿಖೆ ಮಾಡಲು ಮುಂದಾಗಿದೆ.
ಸಂತ್ರಸ್ತರು ತಮ್ಮ ಮೇಲೆ ಸಂಸದರ ನಿವಾಸದಲ್ಲಿ ಅತ್ಯಾಚಾರ ನಡೆದಿದೆ ಎಂದು ದೂರು ಕೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ ೧೨ ಗಂಟೆ ವರೆಗೂ ಎಂಪಿ ನಿವಾಸದಲ್ಲಿ ಸ್ಥಳ ಪರಿಶೀಲನೆ ನಡೆಸಿದ ಎಸ್‌ಐಟಿ ಮುಂದಿನ ತನಿಖೆ ಹಾಗೂ ಸಾಕ್ಷಿ ನಾಶ ಆಗುವ ಸಾಧ್ಯತೆ ಹಿನ್ನೆಲೆಯಲ್ಲಿ ತನಿಖೆ ಬಳಿಕ ಗೇಟ್‌ಗೆ ಬೀಗ ಹಾಕುವ ಮೂಲಕ ಇತರರಿಗೆ ಈ ನಿವಾಸನದ ಒಳಗೆ ಹೋಗಲು ನಿರ್ಬಂಧಿಸಿದೆ.
ಮಹಿಳಾ ಪೊಲೀಸ್ ಇನ್‌ಸ್ಪೆಕ್ಟರ್ ಸ್ವರ್ಣಾ ಮತ್ತು ಪಿಎಸ್ಐ ಕುಮುದಾ ಅವರಿಂದ ಸಂತ್ರಸ್ತೆಯ ಮಹಜರು ಮಡಲಾಗಿದೆ. ಸಂಸದರ ನಿವಾಸಕ್ಕೆ ಪೊಲೀಸ್ ಭದ್ರತೆ ಒದಗಿಸಲಾಗಿದ್ದು, ಮತ್ತೆ ಯಾರಾದರೂ ಸಂತ್ರಸ್ತರು ಎಂಪಿ ನಿವಾಸದಲ್ಲಿ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ದೂರು ನೀಡಿದರೆ ಮತ್ತೆ ಸ್ಥಳ ಪರಿಶೀಲನೆ ನಡೆಸಿ ತನಿಖೆ ನಡೆಸುವ ಸಾಧ್ಯತೆ ಇದೆ. ಸಂಸದ ಪ್ರಜ್ವಲ್ ರೇವಣ್ಣ ದೇಶ ಬಿಟ್ಟು ವಿದೇಶ ಪರಾರಿಯಾಗಿದ್ದಾರೆ. ಅಪಹರಣ ಪ್ರಕರಣದಲ್ಲಿ ಇದೇ ವಿಚಾರವಾಗಿ ಈಗಾಗಲೇ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.