ಹೂವಿನಹಡಗಲಿ: ಎಂ.ಪಿ. ಪ್ರಕಾಶ ಸಮಾಜಮುಖಿ ಟ್ರಸ್ಟ್ ಮೂಲಕ ಮಹಿಳೆಯರ, ಬದುಕಿಗೆ ಆಸರೆಯಾಗುವ ವಿವಿಧ ತರಬೇತಿಗಳನ್ನು ನೀಡಿ, ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವಂತಹ ಕೆಲಸಕ್ಕೆ ಮುಂದಾಗಿದ್ದೇವೆ ಎಂದು ಟ್ರಸ್ಟ್ ಅಧ್ಯಕ್ಷೆ ಎಂ.ಪಿ. ವೀಣಾ ಮಹಾಂತೇಶ ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕದಳಿ ವೇದಿಕೆಯ ಜಿಲ್ಲಾಧ್ಯಕ್ಷೆ ಇಂದುಮತಿ, ಮಹಿಳೆಯರನ್ನು ಮುನ್ನಲೆಗೆ ತರುವ ಕಾರ್ಯ ನಡೆಯುತ್ತಿದೆ. ಈ ಭಾಗದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ಮಹಿಳೆಯರಿಗಾಗಿ ಕದಳಿ ವೇದಿಕೆ ಸ್ಥಾಪನೆ ಮಾಡಲು ಮುಂದಾಗಿದ್ದೇವೆ. ಇದರ ಸದಸ್ಯತ್ವ ಪಡೆದು ಶರಣ ಸಾಹಿತ್ಯವನ್ನು ಪ್ರತಿಯೊಂದು ಮನೆಗೂ ಮುಟ್ಟಿಸುವ ಕಾರ್ಯ ಆಗಬೇಕಿದೆ. ಇದರಿಂದ 12ನೇ ಶತಮಾನದಲ್ಲಿದ್ದ ಇತರ ಶರಣ ವಚನಗಳನ್ನು ಸಾರುವಂತಹ ಕೆಲಸ ಆಗುತ್ತದೆ ಎಂದರು.
ರಾಜ್ಯದಲ್ಲಿ ಜಾತಿ, ಧರ್ಮಕ್ಕೊಂದು ಸಂಘಟನೆಗಳು ಜನ್ಮ ತಾಳಿವೆ. ಆದರೆ ಈ ಶರಣ ಸಾಹಿತ್ಯ ಪರಿಷತ್ತಿಗೆ ಯಾವ ಜಾತಿ, ಧರ್ಮದ ನಂಟಿಲ್ಲ. ಎಲ್ಲರೂ ಇದರ ಸದಸ್ಯತ್ವ ಪಡೆಯಬೇಕು. ವಚನಕಾರರು ತಮ್ಮ ಅನುಭಾವದಿಂದ ಬಂದ ಅನುಭವಗಳನ್ನು ವಚನಗಳ ಮೂಲಕ ನೀಡಿದ್ದಾರೆ, ನಮ್ಮನ್ನು ಜಾಗೃತಗೊಳಿಸಿದ್ದಾರೆ. ಅಂತಹ ವಚನಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಜೀವನ ಸಾಗಿಸಬೇಕಿದೆ ಎಂದರು.ನಿವೃತ್ತ ಪ್ರಾಚಾರ್ಯ ಶಾಂತಮೂರ್ತಿ ಬಿ. ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ರಾಧಾ ವೇದಮೂರ್ತಿ, ಶಾಂತಮ್ಮ ಹಾಗೂ ಲಕ್ಷ್ಮೀಬಾಯಿ ಇತರರಿದ್ದರು.
ತರಬೇತಿಯಲ್ಲಿ ತಾಲೂಕಿನ ನೂರಾರು ಮಹಿಳೆಯರು ಭಾಗವಹಿಸಿದ್ದರು.