ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಬೆಳಗಾವಿ ಜಿಲ್ಲೆ ಕುಡಚಿ ರೈಲು ನಿಲ್ದಾಣ ಎದುರು ನಡೆಯುತ್ತಿರುವ ಸತ್ಯಾಗ್ರಹ ಸ್ಥಳಕ್ಕೆ ಸಂಸದೆ ಪ್ರಿಯಾಂಕಾ ಶುಕ್ರವಾರ ಭೆಟ್ಟಿ ನೀಡಿ ಮಾತನಾಡಿ, ಬಾಗಲಕೋಟೆ ಜಿಲ್ಲೆಯಲ್ಲಿ ರೈಲು ಕಾಮಗಾರಿ ಪ್ರಗತಿಯಲ್ಲಿದೆ. ಬೆಳಗಾವಿ ಜಿಲ್ಲೆಯ ಕುಡಚಿ, ಹಾರೂಗೇರಿ ಸೇರಿದಂತೆ ಇತರೆ ಕಡೆಗಳಲ್ಲಿ ಯಾವುದೇ ಕಾಮಗಾರಿ ನಡೆಯದಿರುವುದು ತೀವ್ರ ಬೇಸರ ತಂದಿದೆ. ಇದೀಗ ಅಧಿಕಾರಿಗಳು ಕಾಮಗಾರಿಗೆ ಮುತುವರ್ಜಿ ವಹಿಸುತ್ತಿದ್ದರೂ, ಮಂದಗತಿಯಲ್ಲಿ ಸಾಗುತ್ತಿದ್ದು, ರೈತರು ಸ್ವಇಚ್ಛೆಯಿಂದ ಜಮೀನು ಬಿಟ್ಟುಕೊಡುತ್ತಿರದ್ದರೂ ಕಾಮಗಾರಿ ನಡೆಯದಿರುವುದು ಸೋಜಿಗದ ಸಂಗತಿ ಎಂದು ಬೇಸರ ಹೊರಹಾಕಿದರು.
ನಿಮ್ಮೊಂದಿಗಿರುವೆ: ಯಾವುದೇ ಕಾರಣಕ್ಕೂ ಕಾಮಗಾರಿ ಅರ್ಧಕ್ಕೆ ನಿಲ್ಲಿಸೋಲ್ಲ. ಕುಡಚಿಯಿಂದ ಜಮಖಂಡಿವರೆಗೆ ಸಂಪೂರ್ಣ ಕಾಮಗಾರಿ ನಡೆಯುವವರೆಗೂ ನಿಮ್ಮೊಂದಿಗೆ ಇರುತ್ತೇನೆಂದರು. ನಿಡಸೋಸಿಯ ಡಾ.ಶಿವಲಿಂಗೇಶ್ವರ ಸ್ವಾಮೀಜಿಗಳೂ ಸಹ ಇವರ ನಾನೂ ಸದಾಕಾಲ ನಿಮ್ಮೊಂದಿಗೆ ಇರುವುದಾಗಿ ಭರವಸೆ ನೀಡಿದರು.ಜನವರಿ ಮೊದಲ ವಾರ ನೈಋತ್ಯ ರೈಲ್ವೆ ಅಧಿಕಾರಿಗಳ ಸಭೆ ನಡೆಯಲಿದ್ದು, ಈ ಕುರಿತು ವಿಷಯ ಪ್ರಸ್ತಾಪಿಸುವುದರ ಜೊತೆಗೆ ವಿಳಂಬಕ್ಕೆ ಅವಕಾಶ ನೀಡದೆ ಕ್ಷೀಪ್ರ ಕಾರ್ಯ ನಡೆಯುವಂತೆ ಒತ್ತಾಯಪಡಿಸುತ್ತೇನೆಂದು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಸ್ಪಷ್ಟಪಡಿಸಿದರು.
ಸತ್ಯಾಗ್ರಹ ನೇತೃತ್ವ ವಹಿಸಿರುವ ಕುತ್ಬುದ್ದೀನ್ ಖಾಜಿ ಮಾತನಾಡಿ, ೩೫ ವರ್ಷಗಳಿಂದ ರೈಲು ಹೋರಾಟದಲ್ಲಿಯೇ ಜೀವನ ಸಾಗುತ್ತಿದೆ. ಕುಡಚಿ-ಬಾಗಲಕೋಟೆ ರೈಲು ಮಾರ್ಗಕ್ಕೆ ಹಲವಾರು ಕುಂಟು ನೆಪ ಹೇಳುತ್ತ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ತಂಡದ ನಿರ್ಲಕ್ಷ್ಯ ತೋರಿದ್ದು, ಇಷ್ಟೊಂದು ವಿಳಂಬಕ್ಕೆ ಕಾರಣವಾಗಿದೆ. ಈ ಯೋಜನೆಯ ನಂತರ ಹಾಕಿಕೊಂಡ ಹಲವಾರು ಯೋಜನೆಗಳು ಸಂಪೂರ್ಣಗೊಂಡು ರೈಲು ಸಂಚಾರ ನಡೆಸುತ್ತಿವೆ. ಈ ಯೋಜನೆ ಮಾತ್ರ ಮುಗಿಯದಿರುವುದು ಬಾಗಲಕೋಟೆ ಹಾಗೂ ಬೆಳಗಾವಿ ಜಿಲ್ಲೆಯ ಜನತೆಯಲ್ಲಿ ತೀವ್ರ ಹತಾಶೆ ತಂದಿದೆ ಎಂದರು.ಪ್ರಿಯಾಂಕಾ ಜಾರಕಿಹೊಳಿಯವರು ಯುವ ಸಂಸದೆಯಾಗಿದ್ದು, ಸದನದಲ್ಲಿ ಪ್ರತಿಧ್ವನಿಸಿ ತೀವ್ರವಾಗಿ ಕಾಮಗಾರಿಗೆ ಮೊದಲಿಗರಾಗಿ ಧ್ವನಿ ಎತ್ತುವ ಮೂಲಕ ನಿಮ್ಮ ಅಧಿಕಾರಕ್ಕಿಂತ ಈ ಭಾಗದ ಜನತೆಯ ಸೇವೆಗೆ ಮುಂದಾಗಬೇಕೆಂದರು.