ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು
ದೇವರ ದರ್ಶನಕ್ಕೆಂದು ಹೋದಾಗ ನಡೆದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬ 13 ಜನ ಸದಸ್ಯರು ಮೃತಪಟ್ಟಿರುವುದು ಮರೆಯಲಾಗದ ನೋವಿನ ಸಂಗತಿ ಎಂದು ಬಿ.ವೈ.ರಾಘವೇಂದ್ರ ಹೇಳಿದರು.ಸಮೀಪದ ಎಮ್ಮೆಹಟ್ಟಿಗೆ ಶನಿವಾರ ಭೇಟಿ ನೀಡಿದ ಸಂಸದ ಬಿ.ವೈ.ರಾಘವೇಂದ್ರ ಹಾವೇರಿ ಬಳಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ ಆರ್ಥಿಕ ನೆರವು ನೀಡಿ ಮಾತನಾಡಿದರು.
ದೇವರು ಯಾವ ವಿರೋಧಿಗಳಿಗೂ ಇಂತಹ ನೋವು ನೀಡಬಾರದು. ಒಂದು ಅಪಘಾತ ಐದು ಕುಟುಂಬಗಳು ಕಣ್ಣೀರಿನಲ್ಲಿ ಕೈ ತೊಳೆಯುವಂತೆ ಮಾಡಿದೆ. ಮೃತ ಕುಟುಂಬಗಳಿಗೆ ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಲಾಗಿದೆ. ಮೃತ ಅರುಣ್ ಅವರ ಪತ್ನಿ ರೇಣುಕಾಳಿಗೆ ಉದ್ಯೋಗದ ಭರವಸೆ ನೀಡಿದರು. ಹಾಗೂ ಕ್ರೀಡಾಪಟು ಮಾನಸ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಿ ಐಎಎಸ್ ಕನಸು ಕಂಡಿದ್ದು, ಅರ್ಧದಲ್ಲೇ ಕಮರಿಹೋಗಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಸೋಮವಾರದಿಂದ ಆರಂಭವಾಗುವ ಅಧಿವೇಶನದಲ್ಲಿ ಸರ್ಕಾರದ ಗಮನಸೆಳೆದು ಮೃತ ಕುಟುಂಬಗಳಿಗೆ ಇನ್ನೂ ಹೆಚ್ಚಿನ ಸಹಕಾರ ನೀಡು ವಂತೆ ಸರ್ಕಾರದ ಗಮನ ಸೆಳೆಯಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.ಮುಂದುವರಿದು ಮಾತನಾಡಿದ ಸಂಸದರು, ಜುಲೈ15ರಂದು ದೇಶಕ್ಕೆ ತುರ್ತು ಪರಿಸ್ಥಿತಿ ಹೇರಿ 50 ವರ್ಷ ಕಳೆದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕ್ರಮ ಹಮ್ಮಿ ಕೊಂಡಿದೆ ಎಂದು ತಿಳಿಸಿದರು. ಶಾಸಕ ನಾಗೇಂದ್ರರನ್ನು ಇ.ಡಿ. ಬಂಧಿಸಿದೆ. ಆದರೆ ಈಗಲೇ ಅವರನ್ನು ಆರೋಪಿ ಎಂದು ಹೇಳಲು ಸಾಧ್ಯವಿಲ್ಲ. ತನಿಖೆಯ ಪಟ್ಟಿಯಲ್ಲಿ ಅವರ ಹೆಸರು ಇರುವುದ ರಿಂದ ವಿಚಾರಣೆ ನಡೆಸಲಾಗುತ್ತಿದೆ. ಆದರೆ ಈ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ದುರುದ್ದೇಶದಿಂದ ಬಿಜೆಪಿ ಮೇಲೆ ಆರೋಪ ಮಾಡುತ್ತಿದೆ. ಎರಡೂವರೆ ವರ್ಷದ ಹಿಂದೆ ಅಧ್ಯಕ್ಷರಾಗಿದ್ದ ವೀರಯ್ಯ ಅವರ ಹೆಸರನ್ನು ಥಳುಕು ಹಾಕಲಾಗುತ್ತಿದೆ. ಕಾಂಗ್ರೆಸ್‌ನ ಈ ಸೇಡಿನ ರಾಜಕೀಯದ ಬಗ್ಗೆ ಜನರಿಗೆ ಅರ್ಥವಾಗುತ್ತದೆ ಎಂದರು.
ನಾಳೆ ನಡೆಯುವ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಛೀಮಾರಿ ಹಾಕುವ ಕೆಲಸ ಮಾಡಲಿದ್ದೇವೆ ಎಂದರು. ಎಲ್ಲ ವಿಭಾಗಗಳಲ್ಲೂ ಬೆಲೆ ಏರಿಕೆಯಾಗಿದೆ. ರೈತರ ಪ್ರೋತ್ಸಾಹಧನದ ಮೇಲೂ ಈ ಸರ್ಕಾರ ಕಣ್ಣು ಹಾಕಿದೆ. ಮುದ್ರಾಂಕ ಶುಲ್ಕ ಹೆಚ್ಚಳ, ಕರೆಂಟ್ ಬಿಲ್ ಅಬಕಾರಿ ಸುಂಕ, ಪೆಟ್ರೋಲ್ ದರ, ಹಾಲಿನ ದರ ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳ ಬೆಲೆಯನ್ನು ಇರಿಸಲಾಗಿದೆ. ಇದೆಲ್ಲವನ್ನೂ ಕಂಡು ರಾಜ್ಯದ ಜನರು ಬೇಸರಗೊಂಡಿದ್ದಾರೆ.ರಾಜ್ಯದಲ್ಲಿ ಇನ್ನೂ ಕೂಡ ಸಮಾಧಾನಕರ ಮಳೆ ಆಗಿಲ್ಲ. ಕೆರೆ-ಕಟ್ಟೆಗಳು ತುಂಬಿಲ್ಲ. ಈಗಿರುವಾಗ ಜನರು ನೆಮ್ಮದಿಯಿಂದ ಇರಲು ಹೇಗೆ ಸಾಧ್ಯ. ಆದ್ದರಿಂದ ಸರ್ಕಾರದ ಈ ಧೋರಣೆಯ ವಿರುದ್ಧ ಛಾಟಿ ಬೀಸಲು ನಾಳೆ ನಡೆಯುವ ಅಧಿವೇಶನದಲ್ಲಿ ನಮ್ಮ ಪಕ್ಷ ಸನ್ನದ್ಧವಾಗಿದೆ ಎಂದರು.
ಜಿಲ್ಲಾಧ್ಯಕ್ಷ ಡಿ.ಟಿ ಮೇಘರಾಜ್. ಮಂಡಲ ಅಧ್ಯಕ್ಷ ಮಲ್ಲೇಶಪ್ಪ, ಪರಿಷತ್ ಸದಸ್ಯರಾದ ಡಿ.ಎಸ್.ಅರುಣ್, ಡಾ.ಧನಂಜಯ್ ಸರ್ಜಿ, ಮಾಜಿ ಶಾಸಕ ಕೆ.ಬಿ.ಅಶೋಕ್ ನಾಯ್ಕ್, ಕೆ.ಜಿ.ಕುಮಾರ್ ಸ್ವಾಮಿ, ಎಪಿಎಂಸಿ ಸದಸ್ಯ ಸತೀಶ್, ಎಸ್.ಶ್ರೀನಿವಾಸ್, ಡಿ.ಮಂಜುನಾಥ್, ಸುಬ್ರಮಣಿ, ಬಸವರಾಜ್, ಕೃಷ್ಣಪ್ಪ, ಸಚಿನ್ ಸಿಂಧ್ಯಾ, ಕಗ್ಗಿ ಮಲ್ಲೇಶ್ ರಾವ್, ದೇವೋಜಿ ರಾವ್, ಮುರಾರಿರಾವ್, ಪರುಶುರಾಮ್, ಮಂಜುನಾಥ್, ಶೇಖರಪ್ಪ, ನಾಗರಾಜ್, ಕುಮಾರ್ ನಾಯ್ಡು, ರಂಗನಾಥ ರಾವ್, ರೇಖಾ ಬೊಸ್ಲೆ, ಶಾಂತಮ್ಮ, ವಿಜಯ್ ರಾವ್ ಇತರರಿದ್ದರು. ತಾಲೂಕು ಮರಾಠ ಸಮಾಜವು ಸಂತ್ರಸ್ಥರ ಧ್ವನಿ ಆಗಿದೆ: ಕೃಷ್ಣಪ್ಪಹೊಳೆಹೊನ್ನೂರು: ಭದ್ರಾವತಿ ತಾಲ್ಲೂಕು ಮರಾಠ ಸಮಾಜ ಮೊನ್ನೆ ನಡೆದ ಅಪಘಾತದಲ್ಲಿ ಮೃತಪಟ್ಟ13 ಜನರ ಕುಟುಂಬಗಳ ದ್ವನಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ವೈ.ಎನ್.ಕೃಷ್ಣಪ್ಪ ಹೇಳಿದರು.ಸಮೀಪದ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನಡೆದ ಗ್ರಾಮದ ಮರಾಠ ಸಮಾಜದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಹಾವೇರಿ ಸಮೀಪದ ಹೆದ್ದಾರಿಯಲ್ಲಿ ನಡೆದ ಭೀಕರ ಅಪಘಾತದಲ್ಲಿ ತಾಲ್ಲೂಕಿನ ಎಮ್ಮಹಟ್ಟಿ ಗ್ರಾಮದ ಮತ್ತವರ ಸಂಬಂಧಿಗಳು ಸೇರಿದಂತೆ ಒಟ್ಟು 13 ಜನರು ಮೃತರಾದ ಕ್ಷಣದಿಂದ ಇಂದಿನವರೆಗೂ ತಾಲ್ಲೂಕು ಮರಾಠ ಸಮಾಜ ಮೃತರ ಮತ್ತು ಅವರ ಕುಟುಂಬಗಳ ಧ್ವನಿಯಾಗಿ ಕಾರ್ಯನಿರ್ಹಿಸುತ್ತಿದೆ ಎಂದರು.ತಾಲೂಕು ಮರಾಠ ಸಂಘದ ಅಧ್ಯಕ್ಷ ಲೋಕೇಶ್ ರಾವ್ , ಘಟನೆ ಬಗ್ಗೆ ಎಲ್ಲಾ ಮಾಧ್ಯಮದವರು ಉತ್ತಮವಾಗಿ ಸ್ಪಂದಿಸಿ ಮಾನವೀಯತೆಯ ನೆಲೆಗಟ್ಟಿನಲ್ಲಿ ಸವಿಸ್ತಾರವಾಗಿ ವರದಿ ಮಾಡಿದ್ದಾರೆ. ಅದರ ಪರಿಣಾಮವಾಗಿ ಸರ್ಕಾರ, ಮುತ್ಸದ್ದಿಗಳು ಗ್ರಾಮಕ್ಕೆ ಭೇಟಿ ನೀಡಿ ಆರ್ಥಿಕ ಸಹಕಾರ ನೀಡಿ ಸಂತೈಸಿ ದ್ದಾರೆ. ಇದರಿಂದ ಸಂತ್ರಸ್ಥ ಕುಟುಂಬಗಳಿಗೆ ಆಸರೆಯಾದಂತೆ ಆಗಿದೆ ಎಂದರು.
ಆದರೆ , ಇದನ್ನು ಸಹಿಸದ ಕೆಲವರು ಮರಾಠ ಸಮಾಜ ಕಾರ್ಯವೈಖರಿ ಬಗ್ಗೆ ಮಾಧ್ಯಮದ ಎದುರು ಸುಳ್ಳು ಹೇಳಿಕೆ ನೀಡಿರುವುದು ವಿಷಾದನೀಯ ಸಂಗತಿ. ಇಂತಹ ಬೆಳವಣಿಗೆಗಳನ್ನು ಸಮಾಜದ ಮುಖಂಡರು ಖಂಡಿಸಿದ್ದಾರೆ ಎಂದ ಅವರು, ಇನ್ನು ಮುಂದೆ ಸಮಾಜಕ್ಕೆ ಅಪಕೀರ್ತಿ ತರುವ ಇಂತಹ ಹೇಳಿಕೆಗಳನ್ನು ನೀಡದೆ ಸೌಹಾರ್ದಯುತವಾಗಿ ಇರುವಂತೆ ಮನವಿ ಮಾಡಿದರು.ಎಂ.ಪರಶುರಾಮ್ ರಾವ್, ಯು.ಬಸವರಾಜ್ ಮಾತನಾಡಿದರು. ದೇವೋಜಿ ರಾವ್, ಮುರಾರಿ ರಾವ್, ನಾಗರಾಜ್, ಆರ್.ಮಂಜುನಾಥ್, ಆರ್.ತಿಪ್ಪೇಶ್ ರಾವ್, ಶೇಖರಪ್ಪ, ಬೆಣ್ಣೆ ನಾಗರಾಜ್, ಎಸ್.ಮಲ್ಲೇಶ್‍ರಾವ್ ಕಗ್ಗಿ, ಮಂಜುನಾಥ್ ಹಾಜರಿದ್ದರು.