ಇಂಡಿಯಾ ಕೂಟದ ನಡೆಯಿಂದ ಸಂಸದರ ಸ್ಥಾನ ಕುಸಿಯುವ ಸಾಧ್ಯತೆ: ಸಂಸದ ಡಾ.ಸಿ.ಎನ್.ಮಂಜುನಾಥ್

KannadaprabhaNewsNetwork |  
Published : Apr 23, 2026, 01:15 AM IST
22ಕೆಆರ್ ಎಂಎನ್ 2.ಜೆಪಿಜಿಸಂಸದ ಡಾ.ಸಿ.ಎನ್.ಮಂಜುನಾಥ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರಗೊಂಡಿದ್ದರೆ ದಕ್ಷಿಣ ರಾಜ್ಯಗಳ ಸಂಸತ್ ಸ್ಥಾನಗಳ ಸಂಖ್ಯೆ 129 ರಿಂದ 195ಕ್ಕೆ ಹೆಚ್ಚಳವಾಗುತ್ತಿತ್ತು. ಆದರೆ, ಕಾಂಗ್ರೆಸ್ ನೇತೃತ್ವದ ಇಂಡಿಯಾ ಕೂಟದ ನಡೆ ಈ ಸುವರ್ಣಾವಕಾಶ ಕೈಚೆಲ್ಲುವಂತೆ ಮಾಡಿವೆ ಎಂದು ಸಂಸದ ಡಾ.ಸಿ.ಎನ್.ಮಂಜುನಾಥ್ ಹರಿಹಾಯ್ದರು.

ಕನ್ನಡಪ್ರಭ ವಾರ್ತೆ ರಾಮನಗರ

ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರಗೊಂಡಿದ್ದರೆ ದಕ್ಷಿಣ ರಾಜ್ಯಗಳ ಸಂಸತ್ ಸ್ಥಾನಗಳ ಸಂಖ್ಯೆ 129 ರಿಂದ 195ಕ್ಕೆ ಹೆಚ್ಚಳವಾಗುತ್ತಿತ್ತು. ಆದರೆ, ಕಾಂಗ್ರೆಸ್ ನೇತೃತ್ವದ ಇಂಡಿಯಾ ಕೂಟದ ನಡೆ ಈ ಸುವರ್ಣಾವಕಾಶ ಕೈಚೆಲ್ಲುವಂತೆ ಮಾಡಿವೆ ಎಂದು ಸಂಸದ ಡಾ.ಸಿ.ಎನ್.ಮಂಜುನಾಥ್ ಹರಿಹಾಯ್ದರು.

ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳಾ ಮಸೂದೆಯಲ್ಲಿ ಶೇಕಡ 50ರಷ್ಟು ಸಂಸತ್ ಸದಸ್ಯರ ಸ್ಥಾನಗಳು ಹೆಚ್ಚಳವಾಗುತ್ತಿತ್ತು. ಇದರಿಂದ ಕರ್ನಾಟಕಕ್ಕೆ 28 ರಿಂದ 42, ತಮಿಳುನಾಡಿಗೆ 39 ರಿಂದ 59 ಸ್ಥಾನ ಸಿಗುತ್ತಿತ್ತು. ಆದರೀಗ 2027ರ ಜನಗಣತಿ ಆಧರಿಸಿದರೆ ಕರ್ನಾಟಕಕ್ಕೆ 3, ತಮಿಳುನಾಡಿಗೆ 10 ಸ್ಥಾನ ಕಡಿಮೆಯಾಗುವ ಸಾಧ್ಯತೆಗಳಿವೆ ಎಂದರು.

ದೇಶದಲ್ಲಿ 1952ರಲ್ಲಿ 36 ಕೋಟಿ ಜನಸಂಖ್ಯೆ ಇದ್ದಾಗ ಮೊದಲ ಕ್ಷೇತ್ರ ಪುನರ್ ವಿಂಗಡಣೆ ನಡೆದಿತ್ತು. 1962ರಲ್ಲಿ 43 ಕೋಟಿ ಜನಸಂಖ್ಯೆ ಇದ್ದಾಗ 494 ಸಂಸತ್ ಸ್ಥಾನ, 1971ರಲ್ಲಿ 54 ಕೋಟಿ ಜನಸಂಖ್ಯೆಗೆ 543 ಸಂಸದರ ಸ್ಥಾನಗಳಿತ್ತು. ಈಗ 140 ಕೋಟಿ ಜನಸಂಖ್ಯೆ ಇದೆ. ಆದರೂ ಕಳೆದ 55 ವರ್ಷಗಳಿಂದ ಕ್ಷೇತ್ರ ಪುನರ್ ವಿಂಗಡಣೆಯೇ ಆಗಿಲ್ಲ ಎಂದು ಹೇಳಿದರು.

ಜನಸಂಖ್ಯೆ ಆಧಾರದ ಮೇಲೆ ಶಾಸನಸಭೆ ಮತ್ತು ಲೋಕಸಭೆ ಸದಸ್ಯ ಸ್ಥಾನಗಳು ಹೆಚ್ಚಳವಾಗಬೇಕು ಎಂಬುದು ಸಾಮಾನ್ಯ ಜ್ಞಾನ. ಆದರೆ, ಕಾಂಗ್ರೆಸ್ ಮಿತ್ರ ಪಕ್ಷಗಳು ಯಾವ ಉದ್ದೇಶದಿಂದ ವಿರೋಧಿಸಿದರೋ ಗೊತ್ತಿಲ್ಲ. ಈಗ 2011ರ ಗಣತಿ ಆಧರಿಸಿ ಕ್ಷೇತ್ರ ಪುನರ್ ವಿಂಗಡಣೆ ಮಾಡಿದರೆ ದಕ್ಷಿಣ ಭಾರತದ ಸಂಸತ್ ಸ್ಥಾನಗಳ ಸಂಖ್ಯೆ ಕಡಿಮೆಯಾಗಿ ಅನ್ಯಾಯವಾಗುತ್ತದೆ ಎಂದು ಅಪಪ್ರಚಾರ ನಡೆಸಲಾಗಿದೆ ಎಂದು ದೂರಿದರು.

ಇಂಗ್ಲೆಂಡ್ ಗಿಂತ ಭಾರತ 13 ಪಟ್ಟು ದೊಡ್ಡ ದೇಶವಾಗಿದೆ. ಆ ದೇಶದಲ್ಲಿ 650 ಸಂಸದ ಸ್ಥಾನಗಳಿವೆ. ಆದರೆ, ಭಾರತದಲ್ಲಿ ಕೇವಲ 543 ಸ್ಥಾನಗಳಷ್ಟೇ ಇವೆ. ದಕ್ಷಿಣ ಭಾರತದಲ್ಲಿ 5 ರಾಜ್ಯಗಳಿಂದ ಸೇರಿ 27 ಕೋಟಿ ಜನಸಂಖ್ಯೆಗೆ 129 ಸಂಸತ್ ಸದಸ್ಯ ಸ್ಥಾನಗಳಿದ್ದರೆ, ಉತ್ತರ , ಪೂರ್ವ, ಪಶ್ಚಿಮ ಭಾರತದಲ್ಲಿ ಶೇಕಡ 80ರಷ್ಟು ಜನಸಂಖ್ಯೆಗೆ 416 ಸಂಸದರ ಸ್ಥಾನಗಳಿವೆ. 2027ರ ಜನಗಣತಿ ಆಧರಿಸಿ ಕ್ಷೇತ್ರ ಪುನರ್ ವಿಂಗಡಣೆ ಮಾಡಿದರೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಸಂಸತ್ ಸದಸ್ಯ ಸ್ಥಾನಗಳ ಸಂಖ್ಯೆ ತೀರಾ ಕಡಿಮೆಯಾಗಲಿವೆ ಎಂದು ಮಂಜುನಾಥ್ ಆತಂಕ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಓಬಿಸಿ ಉಪಾಧ್ಯಕ್ಷೆ ಆದ ರಾಜ್ಯ ವಕ್ತಾರೆ ಅಶ್ವಿನಿ ಶಂಕರ್ , ಬಿಜೆಪಿ ಜಿಲ್ಲಾಧ್ಯಕ್ಷ ಆನಂದ ಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವನಪುರ ಪ್ರಕಾಶ್, ಚಂದ್ರಶೇಖರ್, ಶಿವಮುತ್ತು, ಗ್ರಾಮಾಂತರ ಅಧ್ಯಕ್ಷ ಜಗದೀಶ್, ಜೆಡಿಎಸ್ ತಾಲೂಕು ಅಧ್ಯಕ್ಷ ಸಬ್ಬಕೆರೆ ಶಿವಲಿಂಗಯ್ಯ, ಮಾಧ್ಯಮ ಸಂಚಾಲಕ ಚೇತನ್, ಮುಖಂಡರಾದ ಕಾಳಯ್ಯ, ಸುಗ್ಗನಹಳ್ಳಿ ರಾಮಕೃಷ್ಣಯ್ಯ, ಜಯಕುಮಾರ್, ಎಸ್. ಆರ್. ನಾಗರಾಜ್, ಪದ್ಮನಾಭ, ಸುನೀಲ್, ಪವಿತ್ರ, ವೀಣಾ, ದೇವಿಕಾ ಮತ್ತಿತರರು ಇದ್ದರು.

ಮಹಿಳಾ ಮೀಸಲಿನಲ್ಲಿ ಎಚ್.ಡಿ.ದೇವೇಗೌಡ ಮಾದರಿ: ಸಂಸದ ಡಾ.ಸಿ.ಎನ್.ಮಂಜುನಾಥ್

ಇಂಡಿಯಾ ಕೂಟದಿಂದ ಮಸೂದೆ ಕೊಲ್ಲುವ ಕೃತ್ಯ । ಪುರುಷರ ಸ್ಥಾನ ಕಡಿಮೆಯಾಗುತ್ತಿರಲಿಲ್ಲ, ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ಸಿಗುತ್ತಿತ್ತು

ಕನ್ನಡಪ್ರಭ ವಾರ್ತೆ ರಾಮನಗರ

ಇಡೀ ದೇಶದಲ್ಲಿ ಪ್ರಥಮ ಬಾರಿಗೆ ಎಚ್.ಡಿ.ದೇವೇಗೌಡರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕರ್ನಾಟಕದ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸಿ ಮಾದರಿಯಾದರು ಎಂದು ಸಂಸದ ಡಾ.ಸಿ.ಎನ್.ಮಂಜುನಾಥ್ ಬಣ್ಣಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡರು ಮಹಿಳಾ ಮೀಸಲಾತಿ ಕಲ್ಪಿಸಿದ ಪರಿಣಾಮ ಗ್ರಾಪಂ, ತಾಪಂ, ಜಿಪಂ, ನಗರಸಭೆ ಸೇರಿದಂತೆ ಅನೇಕ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರು ಸಮರ್ಥವಾಗಿ ಆಡಳಿತ ನಡೆಸಿದ ಉದಾಹರಣೆಗಳಿವೆ ಎಂದರು.

ದೇವೇಗೌಡರು ಮುಖ್ಯಮಂತ್ರಿ ಆಗಿದ್ದಾಗಲೇ ಪಿ.ವಿ.ನರಸಿಂಹರಾವ್ ಅವರಿಗೂ ಶಾಸನಸಭೆ ಮತ್ತು ಲೋಕಸಭೆಗಳಲ್ಲಿಯೂ ಮಹಿಳಾ ಮೀಸಲಾತಿ ಜಾರಿಗೆ ತರುವಂತೆ ಪತ್ರ ಬರೆದಿದ್ದರು. ಆನಂತರ 1996ರಲ್ಲಿ ದೇವೇಗೌಡ ಅವರೇ ಪ್ರಧಾನಿ ಆಗಿದ್ದಾಗ ಕರ್ನಾಟಕದ ಮಾದರಿಯಲ್ಲಿಯೇ ಮಹಿಳಾ ಮೀಸಲಾತಿ ಮಸೂದೆ ಮಂಡಿಸಿದಾಗ ಅಂಗೀಕಾರಗೊಳ್ಳಲಿಲ್ಲ.

1998ರಲ್ಲಿ ವಾಜಪೇಯಿರವರು ಪ್ರಧಾನಿಯಾದ ಅವಧಿಯಲ್ಲಿ 2001, 2002, 2003ರಲ್ಲಿ ಮೂರು ಬಾರಿ ಮಹಿಳಾ ಮೀಸಲಾತಿ ಮಸೂದೆ ಮಂಡನೆಯಾದರೂ ಪಾಸ್ ಆಗಲಿಲ್ಲ. ಈಗ ಪ್ರಧಾನಿ ಮೋದಿರವರು ಮಹಿಳೆಯರಿಗೆ ಶೇಕಡ 33ರಷ್ಟು ರಾಜಕೀಯ ಪ್ರಾತಿನಿಧ್ಯ ಕಲ್ಪಿಸುವ ಉದ್ದೇಶದಿಂದ 2023ರಲ್ಲಿ ಮಂಡಿಸಿದ ಮಹಿಳಾ ಮಸೂದೆ ಅಂಗೀಕರಗೊಂಡಿತು. ಆದರೆ, ಅದರಲ್ಲಿ ಜನಗಣತಿ ಆದ ಮೇಲೆ ಕ್ಷೇತ್ರ ಪುನರ್ ವಿಂಗಡಣೆ ಮಾಡಬೇಕೆಂಬ ಷರತ್ತು ಇತ್ತು. ಈ ಹಿನ್ನೆಲೆಯಲ್ಲಿ 2027ರ ಬದಲು 2011ರ ಜನಗಣತಿ ಆಧರಿಸಿ ಕ್ಷೇತ್ರ ಪುನರ್ ವಿಂಗಡಣೆ ಮಾಡುವ ಉದ್ದೇಶ ಹೊಂದಲಾಗಿತ್ತು ಎಂದು ಮಂಜುನಾಥ್ ಹೇಳಿದರು.

ಈ ಮಸೂದೆ ಸರ್ವಾನುಮತದಿಂದ ಅಂಗೀಕಾರಗೊಂಡಿದ್ದರೆ ಎಲ್ಲ ಪಕ್ಷಗಳಿಗೂ ಕ್ರೆಡಿಟ್ ಸಿಗುತ್ತಿತ್ತು. ಇದರಿಂದ

ಪುರುಷರ ಸ್ಥಾನ ಕಡಿಮೆಯಾಗುತ್ತಿರಲಿಲ್ಲ. ಬದಲಿಗೆ ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯದ ಅವಕಾಶ ಸಿಗುತ್ತಿತ್ತು. ಆದರೆ, ಇದಕ್ಕೆ ರಾಜಕೀಯ ಬಣ್ಣ ಲೇಪನ ಮಾಡಬಾರದಿತ್ತು. ಇಂಡಿಯಾ ಕೂಟ ಮಸೂದೆ ಕೊಲ್ಲುವ ಕೆಲಸ ಮಾಡಿತು ಎಂದು ಟೀಕಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಫೇಸಿ ಕಾಯ್ದೆ ಕುರಿತು ದಿನಕ್ಕೊಂದು ಸುಳ್ಳು: ಆಕ್ರೋಶ
ಸಿಇಟಿ: ನಗರದ 8 ಕೇಂದ್ರಗಳಲ್ಲಿ ಇಂದು ಪರೀಕ್ಷೆ