ಸುದ್ದಿ ಗೋಷ್ಠಿಯಲ್ಲಿ ಡಾ.ಕೆ.ಪಿ.ಅಂಶುಮಂತ್ ಟೀಕೆ
ಕಳೆದ 10 ವರ್ಷಗಳಲ್ಲಿ ಸಂಸದೆ, ಕೇಂದ್ರ ಕೃಷಿ ಕಲ್ಯಾಣ ಸಚಿವೆಯಾಗಿದ್ದ ಶೋಭಾ ಕರಂದ್ಲಾಜೆ ಅವರು ಉಡುಪಿ-ಚಿಕ್ಕಮಗಳೂರು ಕ್ಷೇತ್ರವನ್ನು ಸಂಪೂರ್ಣ ಮರೆತಿದ್ದರು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಟೀಕಿಸಿದರು.
ಮಂಗಳವಾರ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2014 ಹಾಗೂ 2019 ರಲ್ಲಿ ಬಿಜೆಪಿ ನೀಡಿದ ಭರವಸೆಯನ್ನು ನಂಬಿ ಜನರು ಶೋಬಾ ಕರಂದ್ಲಾಜೆ ಅವರಿಗೆ ಮತ ನೀಡಿ ಗೆಲ್ಲಿಸಿದ್ದರು. ಅಡಕೆ ಬೆಳೆ ಗಾರರ ಸಮಸ್ಯೆ ಬಗೆ ಹರಿಸುವ ಗೋರಕ್ ಸಿಂಗ್ ವರದಿ ಜಾರಿಗೆ ತರುತ್ತೇವೆ ಎಂದು ಭರವಸೆ ನೀಡಿದ್ದರು. ಅದನ್ನು ಮರೆತು ಅಡಕೆ ಬೆಳೆಗಾರರಿಗೆ ಅನ್ಯಾಯ ಮಾಡಿದ್ದಾರೆ. ಕೇಂದ್ರದ ಆಹಾರ ಖಾತೆ ರಾಜ್ಯ ಸಚಿವೆ ಅನುಪ್ರಿಯ ಪಾಟೀಲ್ ಅವರು ಅಡಕೆ ತಿಂದರೆ ಕ್ಯಾನ್ಸರ್ ಬರುತ್ತದೆ ಎಂದು ಹೇಳಿಕೆ ನೀಡಿದ್ದರು.ಅದನ್ನು ಬಿಜೆಪಿ ಖಂಡಿಸಲಿಲ್ಲ. ಬಿಜೆಪಿ ಅಡಕೆ ಮಾನ ಕಳೆಯಿತು. ಶೋಭಾ ಕೇಂದ್ರ ಸಚಿವರಾಗಿದ್ದಾಗಲೇ ಕಸ್ತೂರಿ ರಂಗನ್ ವರದಿ 4 ಬಾರಿ ನೋಟಿಪಿಕೇಷನ್ ಆಗಿದೆ. ರಾಜ್ಯ ಸರ್ಕಾರ ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸಿತ್ತು. ಕಸ್ತೂರಿ ರಂಗನ್ ವರದಿ ಬಗ್ಗೆ ಕೇಂದ್ರದಲ್ಲಿ ಸಭೆ ಕರೆದರೆ ಶೋಭಾ ಗೈರಾಗಿದ್ದರು ಎಂದರು.
ಮಲೆನಾಡು ಭಾಗದಲ್ಲಿ ಅತಿವೃಷ್ಠಿ ಮತ್ತು ಅನಾವೃಷ್ಟಿ ಆಗಿದೆ. ರಾಜ್ಯಕ್ಕೆ ಬರುವ ಅನುದಾನ, ಪರಿಹಾರದ ಬಗ್ಗೆ ಸಂಸದರು ಸಂಪೂರ್ಣ ವಿಫಲರಾಗಿದ್ದಾರೆ. ರಾಜ್ಯಕ್ಕೆ ನೆರೆ ಬಂದಾಗ ಕೇಂದ್ರ-ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇತ್ತು. ಡಬಲ್ ಇಂಜಿನ್ ಸರ್ಕಾರ ಇದ್ದರೂ ರೈತರ ನೋವುಗಳಿಗೆ ಸ್ಪಂದಿಸಲಿಲ್ಲ. ಈಗ ಸುಪ್ರೀಂ ಕೋರ್ಟಿಗೆ ಹೋಗಿ ರಾಜ್ಯಕ್ಕೆ ಬರಬೇಕಾದ ಬರ ಪರಿಹಾರ ಪಡೆಯಬೇಕಾಗಿದೆ ಎಂದರು.ಅಕ್ಕಿಯಲ್ಲೂ ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ. ಯಾರೂ ಹಸಿವಿನಿಂದ ಇರಬಾರದು ಎಂದು ಕೇಂದ್ರದಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಪುಡ್ ಯ್ಯಾಕ್ಟ್ ತಂದು 10 ಕೆಜಿ ಅಕ್ಕಿ ನೀಡುವ ಯೋಜನೆ ಪ್ರಾರಂಭಿಸ ಲಾಯಿತು. ಅದನ್ನು ಬಿಜೆಪಿ ಸರ್ಕಾರ ಇದ್ದಾಗ 5 ಕೆಜಿಗೆ ಇಳಿಸಲಾಯಿತು. ಗ್ಯಾರಂಟಿ ಯೋಜನೆಗೆ 5 ಕೋಟಿ ಅಕ್ಕಿ ಹಣ ನೀಡಿ ಖರೀದಿ ಮಾಡುತ್ತೇವೆ ಎಂದರೂ ಕೇಂದ್ರ ನೀಡಲಿಲ್ಲ. ಗೋದಾಮಿನಲ್ಲಿ ಲಕ್ಷಗಟ್ಟಳೆ ಟನ್ ಅಕ್ಕಿ ದಾಸ್ತಾನು ಇತ್ತು. 29 ಸಂಸದರು ತುಟಿ ಬಿಚ್ಚಲಿಲ್ಲ. ಅಕ್ಕಿಯಲ್ಲೂ ಬಿಜೆಪಿ ರಾಜಕೀಯ ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಂಬಾನಿ, ಅದಾನಿ ಸೇರಿದಂತೆ ದೇಶದ ಹಲವಾರು ಉದ್ಯಮಿಗಳಿಗೆ 16 ಲಕ್ಷ ಕೋಟಿ ಸಾಲವನ್ನು ಕೇಂದ್ರ ಸರ್ಕಾರ ಮನ್ನಾ ಮಾಡಿದೆ. ಜಯಪ್ರಕಾಶ ಹೆಗ್ಡೆ ಸಂಸದರಾಗಿದ್ದ ಅಲ್ಪ ಸಮಯದಲ್ಲೇ ಕಾಫಿ ಬೆಳೆಗಾರರ ಸಮಸ್ಯೆ ಬಗ್ಗೆ ಶಾಶ್ವತ ಪರಿಹಾರ ಹುಡುಕಲು ಪ್ರಯತ್ನ ನಡೆಸಿದ್ದರು. ಸಣ್ಣ, ಅತಿ ಸಣ್ಣ ರೈತರ ಸಾಲ ಮನ್ನಾ ಮಾಡಲಾಗಿತ್ತು. ಕಡೂರಿಗೆ ರೇಲ್ವೆ ಸಂಪರ್ಕ ಕಲ್ಪಿಸಲು ಜಯಪ್ರಕಾಶ ಹೆಗ್ಡೆ ಪಾತ್ರ ಇತ್ತು ಎಂದರು.ಸುದ್ದಿ ಗೋಷ್ಠಿಯಲ್ಲಿ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಬಿಳಾಲುಮನೆ ಉಪೇಂದ್ರ, ಮುಖಂಡರಾದ ಸಾಜು, ಪ್ರಶಾಂತಶೆಟ್ಟಿ, ಎಂ.ಆರ್.ರವಿಶಂಕರ್, ಮುಕಂದ,ಬೆನ್ನಿ, ಅಂಜುಂ, ಜುಬೇದ, ಮುನಾವರ್ ಪಾಷಾ, ಸೋಜ, ವಾಸಿಂ, ಸುರೈಯಾಭಾನು, ಕುಮಾರಸ್ವಾಮಿ ಮತ್ತಿತರರು ಇದ್ದರು.