ಮೈಸೂರು : 8 ವರ್ಷಗಳ ವೈಮನಸ್ಸು ಮರೆತು ಚಾಮರಾಜನಗರ ಬಿಜೆಪಿ ಸಂಸದ ವಿ. ಶ್ರೀನಿವಾಸಪ್ರಸಾದ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಭೇಟಿಯಾಗಿ ಆರೋಗ್ಯ ವಿಚಾರಿಸಿದರು.
ಮೈಸೂರಿನ ಜಯಲಕ್ಷ್ಮೀಪುರಂನಲ್ಲಿರುವ ವಿ. ಶ್ರೀನಿವಾಸಪ್ರಸಾದ್ ಅವರ ಮನೆಗೆ ತೆರಳಿದ ಸಿದ್ದರಾಮಯ್ಯ ಅವರು, ಶ್ರೀನಿವಾಸಪ್ರಸಾದ್ ಅವರಿಗಾಗಿ ಕೊಂಚವು ಬೇಸರ ಮಾಡಿಕೊಳ್ಳದೆ 10 ನಿಮಿಷ ಕಾದು ಕುಳಿತಿದ್ದರು. ಶ್ರೀನಿವಾಸಪ್ರಸಾದ್ ಬಂದ ಕೂಡಲೇ ಕುಳಿತಿದ್ದ ಸ್ಥಳದಿಂದ ಮೇಲೆದ್ದು ನಿಂತು ಗೌರವ ತೋರಿದರು. ಅಲ್ಲದೆ, ತಮ್ಮ ಪಕ್ಷದ ನಾಯಕರನ್ನೆಲ್ಲ ಪರಿಚಯ ಮಾಡಿಕೊಟ್ಟರು.
ಮೈಸೂರಿಗೆ ಭಾನುವಾರ ಪ್ರಧಾನಿ ಮೋದಿ ಬರಲಿದ್ದು, ಅವರೊಂದಿಗೆ ಶ್ರೀನಿವಾಸಪ್ರಸಾದ್ ವೇದಿಕೆ ಹಂಚಿಕೊಂಡರೇ ಸಮಸ್ಯೆ ಆಗುತ್ತೆ ಎಂಬ ಕಾರಣಕ್ಕೆ ಅಲರ್ಟ್ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಹಠ-ಪ್ರತಿಷ್ಠೆ ಎರಡನ್ನೂ ಬಿಟ್ಟು ಶ್ರೀನಿವಾಸಪ್ರಸಾದ್ ಅವರ ಮನೆಗೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ ಬಗ್ಗೆ ಸಿಂಪಥಿ ಇರಲಿ:
ಶ್ರೀನಿವಾಸಪ್ರಸಾದ್ ಭೇಟಿಯ ಬಳಿಕ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, ನೀವು (ಶ್ರೀನಿವಾಸಪ್ರಸಾದ್) ಕಾಂಗ್ರೆಸ್‌ನಲ್ಲಿ ಇದ್ದವರು, ಕಾಂಗ್ರೆಸ್ ಬಗ್ಗೆ ಸಿಂಪಥಿ ಇರಲಿ ಎಂದು ಹೇಳಿದ್ದೇನೆ. ಸುದೀರ್ಘವಾಗಿ ರಾಜಕೀಯದ ಬಗ್ಗೆ ಚರ್ಚೆ ಮಾಡಿಲ್ಲ. ಅವರು ರಾಜಕೀಯವಾಗಿ ನಿವೃತ್ತಿ ತೆಗೆದುಕೊಂಡಿದ್ದಾರೆ. ಹೀಗಾಗಿ, ಅವರ ಬಳಿ ರಾಜಕೀಯದ ಬಗ್ಗೆ ಹೆಚ್ಚು ಏನು ಮಾತನಾಡಿಲ್ಲ ಎಂದರು.
ಶ್ರೀನಿವಾಸಪ್ರಸಾದ್ ಅವರು ನಮ್ಮ ಹಳೆಯ ಸ್ನೇಹಿತರು. ರಾಜಕೀಯವಾಗಿ ಅವರು ಬಿಜೆಪಿಗೆ ಹೋಗಿದ್ದರು. ಈಗ ಅವರ ಆರೋಗ್ಯ ವಿಚಾರಿಸಲು ಬಂದಿದ್ದೆ ಅಷ್ಟೆ ಎಂದು ಅವರು ಹೇಳಿದರು.
ಸಿದ್ದು ಭೇಟಿ ಖುಷಿ ತಂದಿದೆ- ಪ್ರಸಾದ್:
ಬಳಿಕ ಮಾತನಾಡಿದ ಶ್ರೀನಿವಾಸಪ್ರಸಾದ್, ಮೋದಿ ಸಮಾವೇಶಕ್ಕೆ ನನಗೆ ಆಹ್ವಾನ ಬಂದಿಲ್ಲ, ಬರುವುದೂ ಇಲ್ಲ. ಕರೆದಿಲ್ಲ, ಕರೆಯೋದೂ ಇಲ್ಲ. ಕರೆದರೆ ನಾನು ಹೋಗೋದೂ ಇಲ್ಲ. ಸಿದ್ದರಾಮಯ್ಯ ಜೊತೆ ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ. ಅವರ ಭೇಟಿ ನನಗೆ ಸಹಜವಾಗಿ ಖುಷಿ ಕೊಟ್ಟಿದ್ದೆ. ಅವರು ನನ್ನ ಬೆಂಬಲ ಕೇಳಿದ್ದಾರೆ. ನಾನು ರಾಜಕೀಯ ನಿವೃತ್ತಿಯಾಗಿದ್ದೇನೆ ಅಂತ ಹೇಳಿದ್ದೇನೆ ಅಷ್ಟೆ. ಚಾಮರಾಜನಗರದಲ್ಲಿ ಕಾಂಗ್ರೆಸ್‌ಗೆ ಉತ್ತಮವಾದ ವಾತಾವರಣ ಇದೆ ಎಂದು ಹೇಳಿದರು.
ಸಿದ್ದರಾಮಯ್ಯ ಸಂಪುಟದಲ್ಲಿ ಮಂತ್ರಿಯಾಗಿದ್ದ ಶ್ರೀನಿವಾಸ ಪ್ರಸಾದ್ ಅವರನ್ನು 2016ರಲ್ಲಿ ಕೈಬಿಡಲಾಗಿತ್ತು. ಆನಂತರ ಇಬ್ಬರ ನಡುವೆ ವೈಮನಸ್ಯ ಆರಂಭವಾಗಿತ್ತು.
ಈ ವೇಳೆ ಶಾಸಕರಾದ ಎ.ಆರ್. ಕೃಷ್ಣಮೂರ್ತಿ, ಕೆ. ಹರೀಶ್ ಗೌಡ, ಎಚ್.ಎಂ. ಗಣೇಶಪ್ರಸಾದ್, ಎಂಡಿಎ ಅಧ್ಯಕ್ಷ ಕೆ. ಮರೀಗೌಡ ಮೊದಲಾದವರು ಇದ್ದರು.