ನಾಗರಾಜ್ ನ್ಯಾಮತಿ
ಇಲ್ಲದ ನೋ-ಪಾರ್ಕಿಂಗ್ ಸ್ಥಳ, ರಸ್ತೆಯ ಮಧ್ಯೆದಲ್ಲೇ ನಿಲುವ ಬೃಹತ್ ಗಾತ್ರದ ಲಾರಿಗಳು, ರಸ್ತೆ ಎಡ ಮತ್ತು ಬಲಕ್ಕೆ ನಿಲ್ಲುವ ಬೈಕ್‌ಗಳಿಂದ ನಗರದಲ್ಲಿ ಸಂಚಾರ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಪಾದಚಾರಿಗಳು ಮತ್ತು ಸವಾರರ ಸಂಕಷ್ಟಕ್ಕೆ ಮೋಕ್ಷ ಸಿಗದಂತಾಗಿದೆ.
ನಗರದಲ್ಲಿ 70 ಸಾವಿರ ಜನಸಂಖ್ಯೆಯಿದ್ದು, ದಿನದಿಂದ ದಿನಕ್ಕೆ ನಗರ ಅಭಿವೃದ್ಧಿಯತ್ತ ಸಾಗುತ್ತಿದ್ದು, ವ್ಯಾಪಾರ ವಹಿವಾಟು ಬೆಳವಣಿಗೆ ಕಂಡಿದೆ. ಗ್ರಾಮಗಳಿಂದ ಶಿಕ್ಷಣಕ್ಕಾಗಿ ನಗರಕ್ಕೆ ಬರಲೇಬೇಕಿದೆ. ಅಲ್ಲದೇ ಹಗಲು ಹೊತ್ತಿನಲ್ಲಿ ಬರುವ ಭಾರೀ ಗಾತ್ರದ ವಾಹನಗಳ ಸಂಖ್ಯೆಯೂ ಸಹಜವಾಗಿಯೇ ಹೆಚ್ಚಾಗಿದೆ. ಇದರಿಂದ ನಿತ್ಯ ಸಂಚಾರದಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚುತ್ತಿದ್ದು, ಪಾದಚಾರಿಗಳು ಹಾಗೂ ವಾಹನ ಸವಾರರಿಗೆ ನುಂಗುಲಾರದ ತುತ್ತಾಗಿದೆ.ಕಾಣದ ಪೊಲೀಸರು: ನಗರದಲ್ಲಿ ಟ್ರಾಫಿಕ್ ಸಿಗ್ನಲ್‌ಗಳು ಇಲ್ಲವೇ ಇಲ್ಲ. ಸಂಚಾರ ಜಾಗೃತಿ ಎನ್ನುವುದು ಭಾಷಣಕ್ಕೆ ಮಾತ್ರ ಸೀಮಿತವಾಗಿದೆ. ಮಹಾತ್ಮಾ ಗಾಂಧಿ ವೃತ್ತ, ವಲ್ಲಭಬಾಯಿ ಪಟೇಲ್ ವೃತ್ತ, ವೆಂಕಟಪ್ಪನಾಯಕ ವೃತ್ತ, ಕುಂಬಾರ ಪೇಟೆ, ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಸದಾ ವಾಹನಗಳಿಂದ ತುಂಬಿ ತುಳುಕುತ್ತಿರುತ್ತದೆ. ಆದರೆ, ಇಲ್ಲಿ ಕಾರ್ಯ ನಿರ್ವಹಿಸುವ ಪೊಲೀಸರು ಮಾತ್ರ ಕಾಣೆಯಾಗಿರುತ್ತಾರೆ. ನಗರದಲ್ಲಿ ಸಂಚಾರಿ ನಿಯಮಗಳು ಪುಸ್ತಕ ಮತ್ತು ಭಾಷಣಕ್ಕೆ ನಿರ್ದಿಷ್ಟವಾಗಿವೆ. ಇದರಿಂದ ಸಂಚಾರದ ಗೋಳು ದೇವರಿಗೆ ಪ್ರೀತಿಯಾಗಿದೆ ಅಂತಾರೆ ಜನರು.
ಯಾರು ಹೊಣೆ: ನಗರದ ತಹಸೀಲ್ದಾರ್ ರಸ್ತೆಯಲ್ಲಿ ವಾಹನಗಳು ವೇಗವಾಗಿ ಚಲಿಸುತ್ತವೆ. ಇದೇ ರಸ್ತೆಯಲ್ಲಿ ಮೂರ‍್ನಾಲ್ಕು ತಿರುವುಗಳು ಹಾಗೂ ಉಬ್ಬು ಮತ್ತು ದಿಬ್ಬಗಳು ಇರುವುದರಿಂದ ಅಪಘಾತಕ್ಕೆಆಮಂತ್ರಣ ನೀಡುತ್ತವೆ. ವಾಹನಗಳ ವೇಗದ ಮಿತಿ ತಗ್ಗಿಸಲು ಹಾಗೂ ಅಡ್ಡಲಾಗಿ ನುಗ್ಗುವ ವಾಹನಗಳನ್ನು ನಿಯಂತ್ರಿಸಲು ಸಿಗ್ನಲ್‌ಗಳನ್ನು ನಗರಸಭೆ ಮತ್ತು ಪೊಲೀಸ್ ಇಲಾಖೆ ಅಳವಡಿಸಿಲ್ಲ. ಇದರಿಂದ ಅಪಘಾತ ಸಂಭವಿಸಿ ಪ್ರಾಣ ಹೋದರೆ ಯಾರು ಹೊಣೆ ಎಂಬುದು ಪ್ರಯಾಣಿಕರ ಪ್ರಶ್ನೆಯಾಗಿದೆ.
ಟ್ರಾಫಿಕ್ ಕಿರಿಕಿರಿ: ನಗರದಲ್ಲಿ ಜನದಟ್ಟಣೆಯ ಪ್ರದೇಶಗಳಾದ ಮಹಾತ್ಮ ಗಾಂಧಿ ವೃತ್ತ, ಬಸ್ ನಿಲ್ದಾಣ, ಅಂಬೇಡ್ಕರ್ ವೃತ್ತ, ವೆಂಕಟಪ್ಪ ನಾಯಕ ವೃತ್ತದಲ್ಲಿ ಭಾರೀ ಗಾತ್ರದ ವಾಹನಗಳಿಂದ ಸಂಚಾರಕ್ಕೆ ಸಾಕಷ್ಟು ಪ್ರಮಾಣದ ತೊಂದರೆಯಾಗುತ್ತಿದೆ. ನಗರದ ಪ್ರಮುಖ ಹೋಟೆಲ್‌ಗಳು, ದೊಡ್ಡ ಅಂಗಡಿಗಳ ಮುಂದೆ ವಾಹನ ನಿಲುಗಡೆ ಇಲ್ಲದ ಕಾರಣ ರಸ್ತೆಯುದ್ದಕ್ಕೂ ಅಡ್ಡಾದಿಡ್ಡಿಯಾಗಿ ವಾಹನ ನಿಲ್ಲಿಸುವುದು ಮಾಮೂಲಾಗಿದೆ. ಇದರಿಂದ ವಾಹನಗಳ ಸಂಚಾರಕ್ಕೂ ಇನ್ನಿಲ್ಲದ ಸಮಸ್ಯೆ ನಿರ್ಮಾಣವಾಗಿದೆ.
- ಆನಂದ ವಾಗ್ಮೋಡೆ, ಸಿಪಿಐ, ಸುರಪುರ ಪೊಲೀಸ್ ಠಾಣೆ.