ರಾಂ ಅಜೆಕಾರು
ಕಾರ್ಕಳ: ಕರಾವಳಿಯ ಯಕ್ಷಗಾನ, ನಾಟಕ ಹಾಗೂ ಇತರ ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೊಸ ವೇದಿಕೆಯಾಗಲಿರುವ ಕಾರ್ಕಳದ ಯಕ್ಷರಂಗಾಯಣದ ಹೊಸ ಹೆಸರು ‘ಕರಾವಳಿ ರಂಗಾಯಣ’ ನಿರ್ಮಾಣ ಕಾಮಗಾರಿ ಅಂತಿಮ ಹಂತದಲ್ಲಿದೆ. ಯೋಜನೆ ಪೂರ್ಣಗೊಳಿಸಲು ಇನ್ನೂ ಸುಮಾರು ₹4 ಕೋಟಿ ಅನುದಾನದ ಅಗತ್ಯವಿದೆ. ಕೋಟಿ-ಚೆನ್ನಯ್ಯ ಥೀಂ ಪಾರ್ಕ್ ಸಮೀಪ ಸುಮಾರು 3 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಈ ಮಹತ್ವಾಕಾಂಕ್ಷೆಯ ಯೋಜನೆ ಪೂರ್ಣಗೊಂಡ ಬಳಿಕ ಕಾರ್ಕಳದ ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೊಸ ಆಯಾಮ ದೊರೆಯುವ ನಿರೀಕ್ಷೆ ಇದೆ.ಕರಾವಳಿ ರಂಗಾಯಣದ ಮೂಲ ಕಟ್ಟಡ ಈಗಾಗಲೇ ನಿರ್ಮಾಣಗೊಂಡಿದ್ದು, ಸಭಾಂಗಣ, ಆಡಳಿತ ಕಚೇರಿ, ಗ್ರಂಥಾಲಯ ಕೊಠಡಿ, ಶೌಚಾಲಯ ಸೇರಿದಂತೆ ಹಲವು ಮೂಲಭೂತ ಸೌಲಭ್ಯಗಳ ಕಾಮಗಾರಿ ಪೂರ್ಣಗೊಂಡಿದೆ. ಸುಮಾರು 500 ಮಂದಿ ಏಕಕಾಲದಲ್ಲಿ ಕುಳಿತುಕೊಳ್ಳುವ ಸಾಮರ್ಥ್ಯದ ಸಭಾಂಗಣ ಇಲ್ಲಿ ನಿರ್ಮಾಣವಾಗಿದ್ದು, ಯಕ್ಷಗಾನ, ನಾಟಕ, ಸಂಗೀತ ಕಾರ್ಯಕ್ರಮಗಳು, ಸಾಂಸ್ಕೃತಿಕ ಉತ್ಸವಗಳು, ಕಾರ್ಯಾಗಾರಗಳು ಹಾಗೂ ತರಬೇತಿ ಶಿಬಿರಗಳನ್ನು ಆಯೋಜಿಸಲು ಅನುಕೂಲವಾಗುವ ರೀತಿಯಲ್ಲಿ ಯೋಜನೆ ರೂಪಿಸಲಾಗಿದೆ.
ಯೋಜನೆಯ ಎರಡನೇ ಹಂತದ ಕಾಮಗಾರಿಗಳಿಗೆ ಸುಮಾರು ₹2 ಕೋಟಿ ಅಗತ್ಯವಿದೆ. ಈ ಕುರಿತು ಉಡುಪಿ ನಿರ್ಮಿತಿ ಕೇಂದ್ರದ ಮೂಲಕ ಜಿಲ್ಲಾಧಿಕಾರಿ ಮುಖಾಂತರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.ಈ ಹಂತದಲ್ಲಿ ಸಭಾಂಗಣದ ಒಳಾಂಗಣ ಕಾಮಗಾರಿ ಪೂರ್ಣಗೊಳ್ಳಲಿದ್ದು, ಅತ್ಯಾಧುನಿಕ ಸ್ಟೇಜ್ ನಿರ್ಮಾಣ, ಪ್ರೊಸಿನಿಯಂ ಆರ್ಚ್, ಗ್ರೀನ್ ರೂಂ, ಕಲಾವಿದರ ವೇಷಭೂಷಣ ಬದಲಾವಣೆಗೆ ಅಗತ್ಯ ಕೊಠಡಿಗಳು, ಆಧುನಿಕ ಸ್ಟೇಜ್ ಲೈಟಿಂಗ್ ವ್ಯವಸ್ಥೆ, ಡಿಜಿಟಲ್ ಸೌಂಡ್ ಸಿಸ್ಟಂ, ಅಕೌಸ್ಟಿಕ್ ವ್ಯವಸ್ಥೆ, ನೀರಿನ ಸಂಪರ್ಕ, ವಿದ್ಯುತ್ ವ್ಯವಸ್ಥೆ ಹಾಗೂ ಆಸನಗಳ ಅಳವಡಿಕೆ ಸೇರಿದಂತೆ ಪ್ರಮುಖ ಕೆಲಸಗಳು ಕೈಗೊಳ್ಳಲಾಗುತ್ತವೆ.
ಆಧುನಿಕ ರಂಗಮಂದಿರಕ್ಕೆ ಅಗತ್ಯವಿರುವ ಎಲ್ಲಾ ತಾಂತ್ರಿಕ ಸೌಲಭ್ಯಗಳನ್ನು ಅಳವಡಿಸುವ ಉದ್ದೇಶವಿದೆ. ಸ್ಟೇಜ್ ಮೇಲೆ ವಿವಿಧ ರೀತಿಯ ಬೆಳಕಿನ ವ್ಯವಸ್ಥೆ, ಲೈಟಿಂಗ್ ನಿಯಂತ್ರಣ ವ್ಯವಸ್ಥೆ, ಧ್ವನಿ ಪ್ರತಿಧ್ವನಿ ಉಂಟಾಗದಂತೆ ಅಕೌಸ್ಟಿಕ್ ವ್ಯವಸ್ಥೆ, ಪ್ರೇಕ್ಷಕರಿಗೆ ಸ್ಪಷ್ಟ ಧ್ವನಿ ತಲುಪುವಂತೆ ಸೌಂಡ್ ಸಿಸ್ಟಂ, ಲೈಟ್ ಮತ್ತು ಸೌಂಡ್ ನಿಯಂತ್ರಣಕ್ಕಾಗಿ ಪ್ರತ್ಯೇಕ ಕಂಟ್ರೋಲ್ ರೂಂ ಸೇರಿದಂತೆ ಹಲವು ಸೌಲಭ್ಯಗಳನ್ನು ನಿರ್ಮಿಸಲಾಗುತ್ತಿದೆ. ಇದರಿಂದ ಯಕ್ಷಗಾನ ಮಾತ್ರವಲ್ಲದೆ ನಾಟಕ, ಸಂಗೀತ, ನೃತ್ಯ ಹಾಗೂ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರಾಷ್ಟ್ರೀಯ ಮಟ್ಟದ ಗುಣಮಟ್ಟದಲ್ಲಿ ಆಯೋಜಿಸಲು ಸಾಧ್ಯವಾಗಲಿದೆ.ಮೂರನೇ ಹಂತಕ್ಕೂ ಸುಮಾರು ₹ 2 ಕೋಟಿ ಅಗತ್ಯವಿದೆ. ಈ ಹಂತದಲ್ಲಿ ರಂಗಾಯಣದ ಕಾಂಪೌಂಡ್ ನಿರ್ಮಾಣ, ಇಂಟರ್‌ಲಾಕ್ ಅಳವಡಿಕೆ, ಉದ್ಯಾನ ಅಭಿವೃದ್ಧಿ, ಜನರೇಟರ್ ವ್ಯವಸ್ಥೆ, ಡಾರ್ಮಿಟರಿ ನಿರ್ಮಾಣ ಸೇರಿದಂತೆ ಹೊರಾಂಗಣ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ. ಈ ಕಾಮಗಾರಿಗಳಿಗೆ ಸಂಬಂಧಿಸಿದ ಪ್ರಸ್ತಾವನೆಯನ್ನೂ ನಿರ್ಮಿತಿ ಕೇಂದ್ರದ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಗಿದೆ.
ರಂಗಮಂದಿರದಲ್ಲಿ ಕಲಾವಿದರಿಗೆ ಅನುಕೂಲವಾಗುವ ಗ್ರೀನ್ ರೂಂ, ಪ್ರೇಕ್ಷಕರಿಗೆ ಸುಸಜ್ಜಿತ ಆಸನ ವ್ಯವಸ್ಥೆ, ಸುರಕ್ಷಿತ ವಿದ್ಯುತ್ ವ್ಯವಸ್ಥೆ, ಅಗ್ನಿಶಾಮಕ ವ್ಯವಸ್ಥೆ, ಉತ್ತಮ ಗಾಳಿ ಮತ್ತು ಬೆಳಕಿನ ವ್ಯವಸ್ಥೆ ಸೇರಿದಂತೆ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಗುರಿ ಹೊಂದಲಾಗಿದೆ. ಜನರೇಟರ್ ವ್ಯವಸ್ಥೆಯನ್ನೂ ಕಲ್ಪಿಸಲಾಗುತ್ತಿದೆ.
ಬಳಿಕ , ನಾಟಕ, ಜಾನಪದ ಕಲೆ, ಸಂಗೀತ ಹಾಗೂ ಸಾಹಿತ್ಯ ಚಟುವಟಿಕೆಗಳಿಗೆ ಶಾಶ್ವತ ವೇದಿಕೆಯಾಗುವ ನಿರೀಕ್ಷೆಯಿದೆ. ಸ್ಥಳೀಯ ಕಲಾವಿದರಿಗೆ ತರಬೇತಿ, ಪ್ರದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಅಗತ್ಯವಿರುವ ಎಲ್ಲ ಆಧುನಿಕ ಸೌಲಭ್ಯಗಳು ಒಂದೇ ಸ್ಥಳದಲ್ಲಿ ಲಭ್ಯವಾಗಲಿವೆ.ಕಟ್ಟಡ ನಿರ್ಮಾಣ ಕಾರ್ಯ ಅಂತಿಮ ವಾಗಿದ್ದು ಎರಡನೇ ಹಂತದ ಯೋಜನೆ ಗಾಗಿ ನಿರ್ಮಿತಿ ಕೆಂದ್ರ ರಡು ಕೋಟಿ ಗಳ ಪ್ರಸ್ತಾವನೆ ಸಲ್ಲಿಸಿದ್ದು ಜಿಲ್ಲಾಧಿಕಾರಿಗೆ ರವಾನಿಸಲಾಗಿದೆ.
-ವೆಂಕಟರಮಣ ಐತಾಳ್, ಕರಾವಳಿ ರಂಗಾಯಣದ ನಿರ್ದೇಶಕ ಕಾರ್ಕಳ.